ಭಾನುವಾರ, ಡಿಸೆಂಬರ್ 15, 2019
19 °C

ಯಾದಗಿರಿ: ಕೈ ಕೈ ಮಿಲಾಯಿಸಿ ಚಪ್ಪಲಿ ತೂರಿದ ಕಾಂಗ್ರೆಸ್‌ ಕಾರ್ಯಕರ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಕೈ ಕೈ ಮಿಲಾಯಿಸಿ ಚಪ್ಪಲಿ ತೂರಿದ ಕಾಂಗ್ರೆಸ್‌ ಕಾರ್ಯಕರ್ತರು

ಯಾದಗಿರಿ: ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿರುವ ಸಂದರ್ಭದಲ್ಲಿ ಗುರುಮಠಕಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಕೈ ಕೈ ಮಿಲಾಯಿಸಿ ಚಪ್ಪಲಿ ತೂರಾಡಿದ್ದಾರೆ.

ಶಾಸಕ ಬಾಬುರಾವ ಚಿಂಚಿನಸೂರ್ ಭಾನುವಾರ ರಾತ್ರಿ ಗುರುಮಠಕಲ್‌ನ ಪಕ್ಷದ ಕಚೇರಿಯಲ್ಲಿ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಮಧ್ಯೆ ಅಸಮಾಧಾನ ಭುಗಿಲೆದ್ದು, ಮಾತಿನ ಚಕಮಕಿ ನಡೆದು ಮಾರಾಮಾರಿಗೆ ಕಾರಣವಾಗಿದೆ.

ಹಿರಿಯ ಕಾಂಗ್ರೆಸ್‌ ಕಾರ್ಯಕರ್ತ ಅಕ್ಬರ್ ಸೇಠ್‌ ಹಾಗೂ ಯುವ ಕಾರ್ಯಕರ್ತ ಖಾಜಾ ಮೊಯಿನುದ್ದೀನ್ ಅವರ ಮಧ್ಯೆ ಮೊದಲು ಮಾತಿನ ಚಕಮಕಿ ನಡೆಯಿತು. ನಂತರ ಇಬ್ಬರ ಮಧ್ಯೆ ಉಂಟಾದ ಅಸಮಾಧಾನದ ಹೊಗೆ ಇಡೀ ಸಭೆ ರದ್ದಾಗುವಂತೆ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಹಿರಿಯ ಕಾರ್ಯಕರ್ತರನ್ನು ಶಾಸಕ ಬಾಬುರಾವ್ ಚಿಂಚನಸೂರ್ ಕಡೆಗಣಿಸಿದ್ದಾರೆ. ಹೊಸಬರನ್ನು ಹಿಂದೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಅಕ್ಬರ್ ಸೇಠ್‌ ಸಭೆಯಲ್ಲಿ ಆರೋಪಿಸಿದರು ಎನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡ ಯುವ ಕಾರ್ಯಕರ್ತ ಖಾಜಾ ಮೊಯಿನುದ್ದೀನ್, ‘ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದೀರಿ. ಇದರಿಂದ ಪಕ್ಷಕ್ಕೆ ಹಾನಿ ಮಾಡುತ್ತಿರುವುದು ನೀವು ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಕಿಡಿಕಾರಿದರು.

ಇದರಿಂದ ಸಭೆಯಲ್ಲಿ ಗೊಂದಲ ಉಂಟಾಗಿ ಕೆಲ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸಿ ಸಭೆಯಲ್ಲಿ ಪರಸ್ಪರ ಚಪ್ಪಲಿ ತೋರಾಡಿದ್ದಾರೆ.

ಘಟನೆಯಿಂದ ವಿಚಲಿತರಾದ ಶಾಸಕ ಬಾಬುರಾವ ಚಿಂಚನಸೂರ್ ಹೊರಟು ಹೋದರು. ಶಾಸಕರು ಹೋದ ಮೇಲೆ ಕಾರ್ಯಕರ್ತರ ಮಧ್ಯೆ ಮಾರಾಮಾರಿಯೂ ನಡೆದಿದೆ. ಆದರೆ, ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಕುರಿತು ಶಾಸಕ ಬಾಬುರಾವ್ ಚಿಂಚನಸೂರ್ ಅವರ ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಪ್ರತಿಕ್ರಿಯಿಸಿ (+)