ಭಾನುವಾರ, ಡಿಸೆಂಬರ್ 8, 2019
21 °C

ಎಲ್ಲುಂಟು ಸೋಗೆ ಚಾವಣಿ?

Published:
Updated:
ಎಲ್ಲುಂಟು ಸೋಗೆ ಚಾವಣಿ?

ಈಗ ಎಲ್ಲೆಲ್ಲೂ ಬಿಸಿಲು; ವಿಪರೀತ ಸೆಕೆ! ಬಿಸಿಲಿನ ಝಳಕ್ಕೆ ತತ್ತರಿಸುವ ಕಾಲ. ಮನೆಯ ಹೊರಗೆ ಹೆಜ್ಜೆ ಇಡುವುದೇ ಬೇಡ ಎನ್ನುವಷ್ಟು ಹೈರಾಣು. ಇದಕ್ಕೆ ಇಂಬು ನೀಡುವಂತೆ ಕಾಂಕ್ರೀಟ್ ಕಟ್ಟಡಗಳೇ ಎಲ್ಲೆಲ್ಲೂ ರಾರಾಜಿಸುತ್ತಿವೆ.

ನಗರವೇಕೆ? ಗ್ರಾಮೀಣ ಪ್ರದೇಶದ ಮನೆಗಳಿಗೂ ಆರ್.ಸಿ.ಸಿ.ಯೇ ಬೇಕು. ಬೇಸಿಗೆ ಕಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ಈ ಸುಧಾರಿತ ಚಾವಣಿ ಹೊಂದಿರುವ ಮನೆಗಳು ಅಷ್ಟೇನೂ ಸಮಸ್ಯೆ ತಂದೊಡ್ಡುವುದಿಲ್ಲ. ಆದರೆ ಧಗಧಗಿಸುವ ಬೇಸಿಗೆ ಕಾಲದಲ್ಲಿ ಇಂಥ ಮನೆಯೊಳಗೆ ಇದ್ದರೆ ಬೆಂಕಿಯೊಳಗೆ ಇದ್ದಂತೆ.

ನಮ್ಮ ಹಿರಿಯರು ಎಷ್ಟು ಬುದ್ಧಿವಂತರು. ಸರ್ವ ಕಾಲಕ್ಕೂ ಅನುಕೂಲವಾಗುವ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಆಗ ಬಹುತೇಕ ಎಲ್ಲರ ಮನೆಗಳು ಮಣ್ಣಿನ ಗೋಡೆಯೇ ಆಗಿರುತ್ತಿದ್ದವು. ಈ ಮನೆಗಳ ಚಾವಣಿಗೆ ‘ಸೋಗೆ’ಯನ್ನು ಒಪ್ಪವಾಗಿ ಹೊದೆಸಲಾಗುತ್ತಿತ್ತು. ಹೀಗೆ ನಿರ್ಮಾಣಗೊಂಡ ಮನೆ ಗಳಲ್ಲಿ ಚಳಿಗಾಲ, ಮಳೆ ಕಾಲ ವಲ್ಲದೇ, ಬೇಸಿಗೆ ಕಾಲದಲ್ಲಿಯೂ ಮನೆಯೊಳಗೆ ತಂಪಿನ ವಾತಾವರಣವೇ ತುಂಬಿರುತ್ತಿತ್ತು.

ಆ ಕಾಲದಲ್ಲಿ ಇಂಥ ಪ್ರತಿ ಮನೆಗಳು ‘ನೈಸರ್ಗಿಕ ಎ.ಸಿ’ಯನ್ನು ಹೊಂದಿರುವುದರಿಂದ, ಸೆಕೆಸೆಕೆ ಎಂದು ಹೇಳಿಕೊಳ್ಳುವ ಪ್ರಮೇಯವೇ ಉದ್ಭವಿಸಿರಲಿಲ್ಲ.

ಹೊರಗೆ ವಿಪರೀತ ಬಿಸಿಲು, ಸೆಕೆ ಇದ್ದರೂ ಮನೆ ಮಾತ್ರ ತಂಪು! ಆದರೆ, ಈಗಿನ ಆಧುನಿಕ, ಐಷಾರಾಮಿ ಜೀವನಶೈಲಿಯಲ್ಲಿ ಇಂಥ ತಂಪಿನ ಮನೆಗಳನ್ನು ದುರ್ಬೀನು ಹಾಕಿ ನೋಡಿದರೂ ಕಾಣಸಿಗದು.

ಆಗೆಲ್ಲಾ ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲೂ ಸೋಗೆ ಮನೆಗಳೇ ಕಾಣುತ್ತಿದ್ದವು. ಕೃಷಿಕರ ಹಟ್ಟಿಯೂ ಅದರದ್ದೇ ಚಾವಣಿ ಆಗಿರುತ್ತಿತ್ತು.

ಸೋಗೆ ಚಾವಣಿ ಮಾಡಿಕೊಳ್ಳುವುದು ಸುಲಭ ವೇನಲ್ಲ. ಆ ಕೆಲಸಕ್ಕೆ ಸಾಕಷ್ಟು ಪೂರ್ವ ಸಿದ್ಧತೆಗಳು ಬೇಕು. ತೋಟದಲ್ಲಿ ಬೀಳುವ ಅಡಿಕೆ ಮರದ ಸೋಗೆಯನ್ನು ಪ್ರತಿನಿತ್ಯವೂ ಆರಿಸಿ, ಅದನ್ನು ಸುರಿಯಲೆಂದೇ ಮಾಡಿಕೊಂಡ ಅಟ್ಲಿನಲ್ಲಿ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. (ದಿನವೂ ಆರಿಸದಿದ್ದರೆ ಒರಲೆಯಂಥ ಹುಳ ತಿಂದು ಹಾಳು ಮಾಡುತ್ತದೆ ಹಾಗೂ ಇದು ಅಂಕುಡೊಂಕಾಗಿ ಇರುವುದರಿಂದ ನೇರವಾಗಿ ಇಟ್ಟುಕೊಳ್ಳಲು ಈ ವ್ಯವಸ್ಥೆ). ಸಾಕಷ್ಟು ಸೋಗೆ ಸಂಗ್ರಹ ಆದ ಮೇಲೆಯೇ ಚಾವಣಿಗೆ ಹೊದೆಸಲು ಅಣಿಯಾಗುತ್ತಾರೆ.

ಮನೆಗೆ ಸೋಗೆ ಹಚ್ಚಲು ಎಲ್ಲರಿಗೂ ಬರುವುದಿಲ್ಲ. ಅದೊಂದು ನಾಜೂಕು, ಸೂಕ್ಷ್ಮದ ಕೆಲಸ. ಪರಿಣತಿ ಹೊಂದಿದವರು ಮಾತ್ರ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು. ಮಳೆಗಾಲದಲ್ಲಿ ಸೋರಬಾರದು, ಬೇಸಿಗೆಯಲ್ಲಿ ಬಿಸಿಲು ಒಳಗಿನಿಂದ ಕಾಣಬಾರದು. ಚಾವಣಿಗೆ ಹಚ್ಚಿದ ಸೋಗೆ ಜರಿಯಕೂಡದು... ಇಂಥ ಮುನ್ನೆಚ್ಚರಿಕೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ವರ್ಷಾನುಗಟ್ಟಲೆ ಸುಭದ್ರವಾಗಿ ಇರಲೇಬೇಕಾದ ಅನಿವಾರ್ಯತೆ ಇರುವುದರಿಂದ, ಒತ್ತೊತ್ತಾಗಿ, ಒಪ್ಪವಾಗಿ ಹಚ್ಚಬೇಕು. ಹೀಗಾಗಿ ಸೋಗೆಯು ಹೆಚ್ಚಿನ ಪ್ರಮಾಣದಲ್ಲಿಯೇ ಬೇಕಾಗುತ್ತದೆ. ಇದನ್ನು ಹೊದೆಸಲು ಅನೇಕ ಕಾರ್ಮಿಕರ ಅವಶ್ಯಕತೆಯಿದೆ.

ಸೋಗೆ ಹೊದಿಸುವ ದಿನ ಸಂಭ್ರಮವೋ ಸಂಭ್ರಮ. ಆ ದಿನವನ್ನು ‘ಮನೆ ಕಂಬಳ’ ಎಂಬ ಹೆಸರಿನಿಂದ ಕರೆವ ರೂಢಿಯೂ ಚಾಲ್ತಿಯಲ್ಲಿತ್ತು. ಈಗೆಲ್ಲ ಅಂಥ ಮನೆಯೂ ಇಲ್ಲ; ಕಂಬಳದ ಸಂಭ್ರಮವೂ ಇಲ್ಲ.

ಹಿಂದಿನವರು ಚಾವಣಿಗಷ್ಟೇ ಅಲ್ಲ, ಕೊಟ್ಟಿಗೆ, ಸೌದೆ ಮನೆ, ಗದ್ದೆ ಕಾವಲಿಗೆಂದು ನಿರ್ಮಿಸಿಕೊಳ್ಳುವ ‘ಮೊಳ’, ಗ್ರಾಮೀಣ ಪ್ರದೇಶದ ಬಸ್ ನಿಲ್ದಾಣಗಳಿಗೆ ಸೋಗೆಯನ್ನು ಬಳಕೆ ಮಾಡುತ್ತಿದ್ದರು. ಅಲ್ಲದೇ ಮನೆಯಲ್ಲಿ ನಡೆಯುವ ವಿಶೇಷ ಸಂದರ್ಭಗಳಲ್ಲಿ ಚಪ್ಪರಗಳಿಗೂ ಇದನ್ನೇ ಉಪಯೋಗಿಸುತ್ತಿದ್ದರು. ಸೋಗೆ ಸುಲಭವಾಗಿ ಸಿಗುತ್ತದೆ. ಇದರ ಚಪ್ಪರದೊಳಗೆ ಕುಳಿತರೆ ತಂಪಾಗುತ್ತದೆ ಎಂಬ ಕಾರಣಕ್ಕೆ ಹೇರಳವಾಗಿ ಉಪಯೋಗಿಸುತ್ತಿದ್ದರು. ಆದರೆ ಈಗ ಪೆಂಡಾಲ್ ಬಂದಿರುವುದರಿಂದ ಈ ಚಪ್ಪರವೂ ಜನಸಾಮಾನ್ಯರಿಂದ ದೂರವಾಗಿದೆ. ಸೋಗೆಯ ಬಳಕೆಯೂ ವಿರಳವಾಗಿದೆ.

ಪ್ರತಿಕ್ರಿಯಿಸಿ (+)