ಮಂಗಳವಾರ, ಡಿಸೆಂಬರ್ 10, 2019
17 °C

ಬೇಟೆಯೊಂದಿಗೆ ಜಾಣ ಚಾಣ

Published:
Updated:
ಬೇಟೆಯೊಂದಿಗೆ ಜಾಣ ಚಾಣ

ಎತ್ತರದ ಮರವೊಂದರ ಕೊಂಬೆಯ ಅಂಚಿನಲ್ಲಿ ಅಡಗಿ ಕುಳಿತ ಈ ಬೇಟೆಗಾರ, ನೆಲದ ಮೇಲಿನ ಬೇಟೆಯನ್ನು ದೂರದಿಂದಲೇ ಗುರುತಿಸಿ, ಸುಯ್ಯನೆ ಹಾರಿ, ಕ್ಷಣಮಾತ್ರದಲ್ಲಿ ಕಾಲುಗುರುಗಳಲ್ಲಿ ಸಿಕ್ಕಿಸಿಕೊಂಡು, ಅರೆಜೀವ ಮಾಡಿಬಿಡುತ್ತದೆ. ತಕ್ಷಣ ಯಾವುದಾದರೂ ಹುತ್ತ ಅಥವಾ ಬಂಡೆಯೊಂದರ ತುದಿ ಏರಿ ಸುತ್ತೆಲ್ಲ ನೋಡುತ್ತಾ ಸುಗ್ರಾಸ ಭೋಜನ ಸವಿಯುತ್ತದೆ. ಈ ಪಕ್ಷಿಯ ಹೆಸರು ಚಾಣ (ಕಾಮನ್ ಕೆಸ್ಟ್ರೆಲ್ ಫಿಮೇಲ್).

ವಲಸೆ ಜಾತಿಯ ಈ ಪಕ್ಷಿಗೆ ವಿಂಡ್ ಹೋವರ್, ಸ್ಟಾನೆಲ್ ಹಾಕ್ ಎಂಬ ಹೆಸರುಗಳೂ ಇವೆ. ಭಾರತ ಉಪಖಂಡ, ಏಷ್ಯಾ, ಆಫ್ರಿಕಾದ ವಿವಿಧ ದೇಶಗಳು, ಸೈಬೀರಿಯಾ, ಇಂಗ್ಲೆಂಡ್, ಯುರೋಪ್ ಹಾಗೂ ಅಮೆರಿಕದ ಪೂರ್ವಭಾಗಗಳಲ್ಲಿ ಕಂಡು ಬರುತ್ತದೆ. ನೀಡಲು ಆಕರ್ಷಕವಾಗಿರುವ ಈ ಪಕ್ಷಿಯು ಹಸಿ ನೆಲದಮೇಲೆ ಬಿಲಗಳಿಂದ ಮೇಲೆದ್ದು ಬರುವ ಪುಟ್ಟ ಹಾವು, ಹಲ್ಲಿ, ಏಡಿ, ಕಪ್ಪೆಮರಿಗಳನ್ನು ಬೇಟೆಯಾಡಿ ಹೊಟ್ಟೆ ಹೊರೆಯುತ್ತದೆ.

ಸುಮಾರು 60 ಅಡಿ ಎತ್ತರದ ಮರಗಳ ಮೇಲೆ ಹೊಂಚುಹಾಕಿ ಕುಳಿತುಕೊಳ್ಳುವ ಈ ಪಕ್ಷಿ, ಅಲ್ಲಿಂದಲೇ ತನ್ನ ಸೂಕ್ಷ್ಮ ಕಣ್ಣುಗಳಿಂದ ಹರಿದಾಡುವ ಆಹಾರವನ್ನು ಗುರುತಿಸಬಲ್ಲದು. ಕ್ಷಣಮಾತ್ರದಲ್ಲಿ ಭೂಮಿಗೆ ಧಾವಿಸಿ ಬೇಟೆ ಮುಗಿಸುವ ಈ ಪಕ್ಷಿಯು ಕ್ಯಾಮೆರಾ ಕಣ್ಣಿಗೆ ದಕ್ಕುವುದು ವಿರಳ. ಅದರ ಚಲನವಲನ, ಬೇಟೆಯ ಸೂಕ್ಷ್ಮತೆ ಮತ್ತು ಕೆಲವೇ ಕ್ಷಣಗಳಲ್ಲಿ ಮುಗಿದುಹೋಗುವ ಆ್ಯಕ್ಷನ್‌ಗಳ ಅರಿವು ಛಾಯಾಗ್ರಾಹಕರಿಗೆ ಸವಾಲು.

ಹೆಸರಘಟ್ಟ ಸಮೀಪದ ಮರವೊಂದರ ಕೆಳಗಿನ ಹುತ್ತದ ಮೇಲೆ ಕಂಡ ಈ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ದಾಖಲಿಸಿದವರು ಹೆಬ್ಬಗೋಡಿ ನಿವಾಸಿ ಮಹೇಶ್ ರೆಡ್ಡಿ. ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಅವರು, 9 ವರ್ಷಗಳಿಂದ ಪ್ರಕೃತಿ, ವನ್ಯಜೀವಿ, ಪಕ್ಷಿ ಛಾಯಾಗ್ರಹಣದ ಹವ್ಯಾಸವನ್ನು ಗಂಭೀರವಾಗಿ ಬೆಳಸಿಕೊಂಡಿದ್ದಾರೆ. ಈ ಚಿತ್ರ ತೆಗೆಯಲು ಅವರು ಬಳಸಿದ ಕ್ಯಾಮೆರಾ ಕೆನಾನ್ 7D, 400 ಎಂ.ಎಂ ಜೂಂ ಲೆನ್ಸ್, ಅಪರ್ಚರ್ ಎಫ್‌ 7.1, ಷಟರ್ ಸ್ಪೀಡ್ 1/1250 ಸೆಕೆಂಡ್, ಐಎಸ್‌ಒ 400, ಫ್ಲಾಷ್ ಮತ್ತು ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ಮಾಡಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನ ಇಂತಿದೆ...

* ಉತ್ತಮ ಗುಣಮಟ್ಟದ ಕ್ಯಾಮೆರಾ, ಪಕ್ಷಿಗೆ ಅರಿವಾಗದಷ್ಟು ದೂರದಿಂದಲೇ ಚಿತ್ರವನ್ನು ಸೆರೆಹಿಡಿಯಲು ಬಳಸಿರುವ ಜೂಂ ಲೆನ್ಸ್ ಈ ಚಿತ್ರದ ಪರಿಣಾಮ ಹೆಚ್ಚಿಸಿರುವ ಮುಖ್ಯ ವಸ್ತುಗಳು.

*ವಸ್ತುವಿನ (ಆಬ್ಜೆಕ್ಟ್) ಹಿಂಬದಿಯ ಓರೆಯಿಂದ ಬೀಳುತ್ತಿರುವ ಮುಂಜಾನೆಯ ತೆಳು ಬೆಳಕು, ವಸ್ತುವಿನ ಆಚೆಭಾಗದಲ್ಲಿ ಮೂಡಿಸಬಹುದಾದ ಕಡುನೆರಳಿನ ವೈಪರಿತ್ಯವನ್ನು (ಕಾಂಟ್ರಾಸ್ಟ್) ತಗ್ಗಿಸಲು ಸೆಟ್ಟಿಂಗ್ಸ್‌ನಲ್ಲಿ ಐಎಸ್‌ಒ ಆಯ್ಕೆಯನ್ನು ಸಮರ್ಪಕವಾಗಿ ಮಾರ್ಪಡಿಸಲಾಗಿದೆ.

* ಪಕ್ಷಿ ಅಥವಾ ಇನ್ನೂ ಜೀವಂತ ಇರುವ ಮರಿ ಹಾವಿನ ಸಾಂದರ್ಭಿಕ ಚಲನೆಗಳನ್ನು ಸ್ಥಿರಗೊಳಿಸಿದಂತೆ ಸೆರೆಹಿಡಿಯಲು ಷಟರ್ ವೇಗವನ್ನು ಸಮರ್ಪಕ ಅಳವಡಿಕೆ ಪೂರಕವಾಗಿದೆ.

* ಸಂಯೋಜನೆಯ (ಕಂಪೋಸಿಷನ್) ದೃಷ್ಟಿಯಿಂದಲೂ ಈ ಚಿತ್ರಕ್ಕೆ ಸಾಕಷ್ಟು ಅಂಕಗಳು ಸಿಗುತ್ತವೆ. ಆಹಾರದ ಬೇಟೆಯಾಡಿ ಸಾಹಸಗೈದ ಕ್ಷಣವನ್ನು ಸಂಭ್ರಮಿಸುತ್ತಿರುವ ಈ ದೃಶ್ಯವನ್ನು ನೋಡುಗನ ಮನಸ್ಸಿಗೆ ನಾಟಿಸುವಂತೆ ಸೆರೆಹಿಡಿದಿರುವುದು ಈ ಚಿತ್ರದಲ್ಲಿ ಗಮನ ಸೆಳೆಯುವ ಅಂಶ.

* ನಿಸರ್ಗದಲ್ಲಿ ಬೇಟೆ ಎನ್ನುವುದು ಆಹಾರ ಸರಪಳಿಯ ಅನಿವಾರ್ಯ ಕೊಂಡಿ. ಆದರೆ ಬೇಟೆಯ ಚಿತ್ರಗಳು ಬಹುತೇಕ ಸಂದರ್ಭಗಳಲ್ಲಿ ಕ್ರೌರ್ಯ ಬಿಂಬಿಸುವ ಚಿತ್ರಗಳೂ ಆಗಿರುತ್ತವೆ. ಆದರೆ ಇಲ್ಲಿ ಬೇಟೆಯಾಡಿದ ಹಾವಿನ ಪರಿಸ್ಥಿತಿಯನ್ನು ಒಂದು ಮಾಹಿತಿಯಾಗಿ ನೋಡುಗನ ಗಮನಕ್ಕೆ ಮತ್ತು ಭಾವನೆಗೆ ದಾಟಿಸಿರುವುದು ವಿಶೇಷ.

ಪ್ರತಿಕ್ರಿಯಿಸಿ (+)