ಸೋಮವಾರ, ಜೂಲೈ 13, 2020
22 °C

ಚುನಾವಣೆ ಅಂಗಳದಲ್ಲಿ ಮಾಜಿ ಅಧಿಕಾರಿಗಳ ದಂಡು

ಎನ್. ಜಗನ್ನಾಥ್ ಪ್ರಕಾಶ್ Updated:

ಅಕ್ಷರ ಗಾತ್ರ : | |

ಚುನಾವಣೆ ಅಂಗಳದಲ್ಲಿ ಮಾಜಿ ಅಧಿಕಾರಿಗಳ ದಂಡು

ರಾಜಕಾರಣ ಎಲ್ಲ ಕ್ಷೇತ್ರಗಳ ಜನರ ಪಾಲಿಗೂ ಆಕರ್ಷಣೆಯ ಕೇಂದ್ರವಾಗಿದ್ದು, ಸರ್ಕಾರಿ ಅಧಿಕಾರಿಗಳು ಕೂಡ ಈ ಆಕರ್ಷಣೆಯಿಂದ ಹೊರತಾಗಿಲ್ಲ. ಆಡಳಿತಯಂತ್ರದ ಭಾಗವಾಗಿರುವ ಸರ್ಕಾರಿ ಅಧಿಕಾರಿಗಳಲ್ಲಿ ಕೆಲವರು, ರಾಜಕಾರಣಿಗಳನ್ನು ಹತ್ತಿರದಿಂದ ಕಂಡವರಾದುದರಿಂದ ಅವರು ರಾಜಕಾರಣದ ಸೆಳೆತಕ್ಕೆ ಒಳಗಾಗುವುದು ಸಹಜವೂ ಹೌದು. ಪ್ರಸ್ತುತ ಚುನಾವಣಾ ರಾಜಕೀಯದಲ್ಲೂ ಅಧಿಕಾರಿ ವಲಯದಿಂದ ಬಂದ ಒಂದು ಗುಂಪು ಸಕ್ರಿಯವಾಗಿರುವುದನ್ನು ಗಮನಿಸಬಹುದು.

ನಿವೃತ್ತ ನ್ಯಾಯಾಧೀಶರು, ನಿವೃತ್ತ ಅಧಿಕಾರಿ– ಸಿಬ್ಬಂದಿಯೂ ಚುನಾವಣಾ ಕಣಕ್ಕೆ ಇಳಿಯುತ್ತಿರುವುದು ಈಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಪ್ರವೃತ್ತಿ. ಕರ್ನಾಟಕದ ಲಕ್ಷಾಂತರ ಮಂದಿ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜೇಗೌಡರೇ ಸ್ವಯಂ ನಿವೃತ್ತಿ ತೆಗೆದುಕೊಂಡು, ಹೊಳೆನರಸೀಪುರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಗ ಮಾಜಿ ಸಚಿವ ಎಚ್.ಡಿ. ರೇವಣ್ಣನವರ ವಿರುದ್ಧ ಸೆಣಸಲು ತಯಾರಿ ನಡೆಸಿದ್ದಾರೆ. ಆದರೆ, ಹಿರಿಯ ಮೋಟಾರು ನಿರೀಕ್ಷಕ ಹುದ್ದೆಗೆ ಅವರು ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

ಮಂಜೇಗೌಡರ ಸ್ಪರ್ಧೆ ಅಚ್ಚರಿಯ ಸಂಗತಿಯೇನೂ ಅಲ್ಲ. ಕರ್ನಾಟಕದ ರಾಜಕಾರಣದಲ್ಲಿ ಸರ್ಕಾರಿ ನೌಕರರು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಪರಂಪರೆ ಹಿಂದಿನಿಂದಲೂ ಇದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಅಲೆಕ್ಸಾಂಡರ್, ಶಾಸಕರಾಗಿ ಆಯ್ಕೆಯಾಗಿ ಸಚಿವರಾದ ಉದಾಹರಣೆಯಿದೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದು ಬಳಿಕ ಶಾಸಕರಾದ ಎಂ.ಟಿ. ಕೃಷ್ಣಪ್ಪನವರ ಉದಾಹರಣೆಯೂ ನಮ್ಮಲ್ಲಿದೆ. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ವಿದಾಯ ಹೇಳಿ, ಚುನಾವಣೆಗಳಲ್ಲಿ ಸೆಣಸಿ ಸಚಿವರೂ ಆದ ಇನ್ನೊಬ್ಬರೆಂದರೆ ಡಿ.ಟಿ. ಜಯಕುಮಾರ್.

ಸರ್ಕಾರಿ ನೌಕರರಂತೆ ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಹಾಗೂ ಭಾರತೀಯ ಆಡಳಿತ ಸೇವೆಗೆ ಸೇರಿದ ಅಧಿಕಾರಿಗಳು ಚುನಾವಣಾ ರಂಗದಲ್ಲಿ ಏರಿಳಿತಗಳನ್ನು ಕಂಡದ್ದಿದೆ. ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು, ಶಾಲಾ ದೈಹಿಕ ಶಿಕ್ಷಕರು, ಜನತಾ ಬಜಾರ್ ನೌಕರರೂ ರಾಜಕೀಯದಲ್ಲಿ ಸೋಲು ಗೆಲುವುಗಳನ್ನು ಉಂಡಾಗಿದೆ.

ಖಾಕಿ ತೊರೆದು ಖಾದಿ: ಪೊಲೀಸ್ ಇಲಾಖೆಯ ಅಧಿಕಾರಿಗಳು ಚುನಾವಣಾ ಸಮುದ್ರದಲ್ಲಿ ಈಜಿದ್ದು ಹೆಚ್ಚು. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಕೋದಂಡರಾಮಯ್ಯ ಹಾಗೂ ಎಚ್.ಟಿ. ಸಾಂಗ್ಲಿಯಾನ ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾದವರು. ಇನ್‌ಸ್ಪೆಕ್ಟರ್ ಆಗಿದ್ದ ಬಿ.ಸಿ. ಪಾಟೀಲ್ ಸಿಹಿ–ಕಹಿ ಅನುಭವಿಸಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿದ್ದ ಸುಭಾಷ್ ಭರಣಿ, ಎಲ್. ರೇವಣ ಸಿದ್ಧಯ್ಯ, ಎಸ್.ಕೆ. ಬಾವ, ಬಿ.ಕೆ. ಶಿವರಾಂ, ಮೋತಿರಾಂ ಮೊದಲಾದವರ ಪ್ರಯತ್ನಗಳಿನ್ನೂ ಫಲ ಕಂಡಿಲ್ಲ.

ಮೊದಲ ದಲಿತ ಐಎಎಸ್ ಅಧಿಕಾರಿಯಾದ ಆರ್. ಭರಣಯ್ಯನವರು ತಳಸಮುದಾಯದ ಸಾಮಾಜಿಕ ಉನ್ನತಿಗೆ ಶ್ರಮಿಸಿದವರು. ಹಳೇ ಮೈಸೂರು ಭಾಗದಲ್ಲಿ ದಲಿತರಿಗೆ ಉತ್ತಮ ಶಿಕ್ಷಣ ಒದಗಿಸಲು ಮಹತ್ವದ ಕಾರ್ಯಗಳನ್ನು ಕೈಗೊಂಡ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡರು. ದಕ್ಷ ಅಧಿಕಾರಿಯಾಗಿದ್ದ ಎನ್. ಲಕ್ಷಣ್‌ ರಾವ್ ಅವರಿಗೂ ಇದೇ ಅನುಭವವಾಯಿತು.

ರಾಜ್ಯ ಕೇಡರ್ ಐಎಎಸ್ ಅಧಿಕಾರಿಯಾಗಿದ್ದು ಆಂಧ್ರ ಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತು, ನಂತರ ರಾಜ್ಯಸಭೆಗೆ ನಾಮಕರಣಗೊಂಡು ಕೇಂದ್ರ ಸಚಿವರೂ ಆದವರು ಜೆ.ಡಿ. ಶೀಲಂ. ಇನ್ನೊಬ್ಬ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಅವರಿಗೆ ಚುನಾವಣೆಗಳಲ್ಲಿ ಇನ್ನೂ ಜಯ ಸಿಕ್ಕಿಲ್ಲ.

1983ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಗೃಹ ಸಚಿವರೂ ಆದ ರಮೇಶ್ ಜಿಗಜಿಣಗಿ ಈಗ ಕೇಂದ್ರದಲ್ಲಿ ಸಚಿವರು. ರಾಜಕಾರಣಕ್ಕೆ ಮುನ್ನ ಇನ್‍ಸ್ಪೆಕ್ಟರ್ ಹುದ್ದೆಗಾಗಿ ನಡೆದ ಸಂದರ್ಶನಕ್ಕೆ ಅವರು ಹಾಜರಾಗಿದ್ದರು. ಅವರಿಗೆ ಅದೃಷ್ಟ ಒಲಿದಿದ್ದು ಪೊಲೀಸ್ ಇಲಾಖೆಯಲ್ಲಲ್ಲ, ರಾಜಕಾರಣದಲ್ಲಿ. ಹಾಗೆಯೇ ಸರ್ಕಾರಿ ನೌಕರಿಯಲ್ಲಿದ್ದು ಶಾಸಕರಾಗಿ ಆಯ್ಕೆಯಾಗಿ ಸಚಿವರಾದ ಗೋವಿಂದ ಕಾರಜೋಳ ಈಗಲೂ ಶಾಸಕರು.

ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸಿ, ಚುನಾವಣೆಗಳಲ್ಲಿ ಗೆದ್ದು ಸಚಿವರೂ ಆದ ಅದೃಷ್ಟ ಚೆನ್ನಿಗಪ್ಪನವರದು. ಅಂತೆಯೇ ಜನತಾ ಬಜಾರ್ ನೌಕರರಾಗಿದ್ದು ಶಾಸಕರಾಗಿ ಆಯ್ಕೆಯಾದ ವಿ. ಸೋಮಣ್ಣ ಸಚಿವರಾದರು.

ರಾಜಕಾರಣಕ್ಕೆ ಹಲವು ತೊರೆಗಳು: ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿ ಬಿಜೆಪಿ ಸೇರಿದ ಎ. ರವೀಂದ್ರ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ಶಂಕರ್ ಬಿದರಿ ರಾಷ್ಟ್ರೀಯ ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದವರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸಿದ್ಧಯ್ಯ ಹಾಗೂ ಸುಬ್ರಹ್ಮಣ್ಯಂ ರಾಜಕೀಯ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡರೂ, ಚುನಾವಣೆಗಳಲ್ಲಿ ಮಾತ್ರ ಸ್ಪರ್ಧಿಸಲಿಲ್ಲ. ಇನ್‍ಸ್ಪೆಕ್ಟರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೊದಲ ಪ್ರಯತ್ನದಲ್ಲೇ ಶಾಸಕರಾದವರು ಪಿ. ರಾಜೀವ್.

ನ್ಯಾಯಾಂಗ ಸೇವೆಯಲ್ಲಿದ್ದು ಜನಪ್ರತಿ ನಿಧಿಗಳಾದವರೂ ನಮ್ಮಲ್ಲಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಎನ್.ವೈ.ಹನುಮಂತಪ್ಪನವರು ಲೋಕಸಭೆಗೆ ಚುನಾಯಿತರಾಗಿದ್ದರು. ತುಮಕೂರಿನ ಹಾಲಿ ಸಂಸದ ಮುದ್ದ ಹನುಮೇಗೌಡರು ನ್ಯಾಯಾಧೀಶರ ಹುದ್ದೆ ನಿರ್ವಹಿಸಿದ್ದವರು.

ಹಿಂದಿನ ಚುನಾವಣೆಗಳಂತೆ ಪ್ರಸಕ್ತ ಚುನಾವಣೆಯಲ್ಲೂ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಸಾರ್ವಜನಿಕ ಸೇವಾ ಹುದ್ದೆಗಳನ್ನು ಅಲಂಕರಿಸಿದವರಿದ್ದಾರೆ. ಕೆಲವರು ಬಹಿರಂಗವಾಗಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರೆ, ಇನ್ನು ಕೆಲವರು ತೆರೆಮರೆಯಲ್ಲಿಯೇ ವಿವಿಧ ಪಕ್ಷಗಳ ಟಿಕೆಟ್‌ಗಳಿಗೆ ಪ್ರಯತ್ನಿಸುತ್ತಿರುವುದು ತೆರೆಮರೆಯ ಗುಟ್ಟು!

ರಾಜಕೀಯ ಪ್ರವೇಶಕ್ಕೆ ಹಾತೊರೆಯುವವರ ಸಂಖ್ಯೆ ಹೆಚ್ಚಿಗೆ ಇದ್ದರೂ ಅಂತಿಮವಾಗಿ ಎಷ್ಟು ಮಂದಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಬಹುದು ಎನ್ನುವುದು ಈಗ ಉಳಿದಿರುವ ಯಕ್ಷಪ್ರಶ್ನೆ.

ಸ್ಪರ್ಧೆಯ ಹಂಬಲ

ಚುನಾವಣಾ ರಾಜಕಾರಣ ಸರ್ಕಾರಿ ಅಧಿಕಾರಿಗಳ ಪಾಲಿಗೆ ಮೋಹನ ಮುರಳಿ ಇದ್ದಂತೆ. ಅಧಿಕಾರದಿಂದ ನಿವೃತ್ತರಾದ ನಂತರ ಕೆಲವರು ಚುನಾವಣೆಗಳಲ್ಲಿ ಸ್ಪರ್ಧಿಸಿದರೆ, ಮತ್ತೆ ಕೆಲವರು ರಾಜಕಾರಣಕ್ಕಾಗಿ ಸರ್ಕಾರಿ ಹುದ್ದೆಯನ್ನು ಬಿಟ್ಟಿರುವ ಉದಾಹರಣೆಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಕೂಡ ಸ್ಪರ್ಧೆಗೆ ಹಂಬಲಿಸುತ್ತಿರುವ ಹಾಲಿ-ಮಾಜಿ ಅಧಿಕಾರಿಗಳ ಪಟ್ಟಿ ದೊಡ್ಡದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.