ಬುಧವಾರ, ಡಿಸೆಂಬರ್ 11, 2019
16 °C

ಅಗ್ನಿ ದುರಂತ; ಮತ್ತೊಬ್ಬ ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ನಿ ದುರಂತ; ಮತ್ತೊಬ್ಬ ಬಾಲಕಿ ಸಾವು

ಬೆಂಗಳೂರು: ಟಿ.ದಾಸರಹಳ್ಳಿಯ ಕಲ್ಯಾಣನಗರದ ಮನೆಯೊಂದರಲ್ಲಿ ಏ. 5ರಂದು ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಬಾಲಕಿ ಅಲವೇಲು (9) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾಳೆ. ಈಕೆಯ ತಂಗಿ ದೇವಿಕಾ (4) ತೀವ್ರವಾಗಿ ಗಾಯಗೊಂಡು ಘಟನೆಯ ಮರುದಿನವೇ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.

‘ಅಲವೇಲು ದೇಹದ ಭಾಗ ಶೇ. 50ರಷ್ಟು ಸುಟ್ಟಿತ್ತು. ಘಟನೆ ನಂತರ ಕೆಲ ದಿನಗಳವರೆಗೆ ಚಿಕಿತ್ಸೆಗೆ ಸ್ಪಂದಿಸಿದ್ದಳು. ಕ್ರಮೇಣ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೀರಿಕೊಂಡಳು’ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡಿರುವ ಲಕ್ಷ್ಮಮ್ಮ (35), ವೆಂಕಟೇಶ್ (38), ಮಹೇಶ್ವರಿ (33), ಸೋಮಶೇಖರ್ (16),‌ ಸಂಗೀತಾ (16), ನಿರಂಜನ್ (10) ಹಾಗೂ ಹೊನ್ನೂರಪ್ಪ (70) ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದರು.

ಘಟನೆ ವಿವರ: ಪಾವಗಡ ತಾಲ್ಲೂಕಿನ ದೇವರಾಜು ಹಾಗೂ ಲಕ್ಷ್ಮಮ್ಮ ದಂಪತಿ, ಮಕ್ಕಳಾದ ಅಲವೇಲು ಹಾಗೂ ದೇವಿಕಾ ಜತೆಯಲ್ಲಿ ಎರಡು ವರ್ಷಗಳಿಂದ ಕಲ್ಯಾಣನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರ ಸಂಬಂಧಿಕರು ಏ. 4ರಂದು ಮನೆಗೆ ಬಂದಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ದೇವರಾಜು, ರಾತ್ರಿಪಾಳಿ ಕೆಲಸಕ್ಕೆ ತೆರಳಿದ್ದರು. ಸಂಬಂಧಿಕರಿಗಾಗಿ ವಿಶೇಷ ಅಡುಗೆ ಸಿದ್ಧಪಡಿಸಿದ್ದ ಲಕ್ಷ್ಮಮ್ಮ, ಸಿಲಿಂಡರ್‌ನ ರೆಗ್ಯುಲೇಟರ್‌ ಬಂದ್‌ ಮಾಡುವುದನ್ನು ಮರೆತಿದ್ದರು. ಎಲ್ಲರೂ ಊಟ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದರು.

ರಾತ್ರಿಪೂರ್ತಿ ಸೋರಿಕೆಯಾದ ಅನಿಲ, ಇಡೀ ಮನೆಯನ್ನು ಆವರಿಸಿತ್ತು. ದೇವರಾಜು ಕೆಲಸ ಮುಗಿಸಿಕೊಂಡು ಬೆಳಗಿನ ಜಾವ 4.30ರ ಸುಮಾರಿಗೆ ಮನೆಗೆ ಮರಳಿದ್ದರು. ಅವರು ಬಾಗಿಲು ಬಡಿದಾಗ ಎಚ್ಚರಗೊಂಡ ಲಕ್ಷ್ಮಮ್ಮ, ವಿದ್ಯುತ್ ದ್ವೀಪದ ಸ್ವಿಚ್‌ ಒತ್ತುತ್ತಿದ್ದಂತೆಯೇ ಬೆಂಕಿ ಹೊತ್ತಿ ಅದರ ಕೆನ್ನಾಲಗೆ ಇಡೀ ಮನೆಯನ್ನೇ ಆವರಿಸಿ ದುರಂತ ಸಂಭವಿಸಿತ್ತು.

ಪ್ರತಿಕ್ರಿಯಿಸಿ (+)