ಕಾವು ಪಡೆಯುತ್ತಿರುವ ಚುನಾವಣಾ ಪ್ರಚಾರ

7
ಹಳ್ಳಿಗಳತ್ತ ಮುಖ ಮಾಡಿದ ರಾಜಕಾರಣಿಗಳು, ಸುಡು ಬಿಸಿಲು ಲೆಕ್ಕಿಸದೆ ಮತಯಾಚನೆ, ದಣಿವರಿಯದೆ ದಿನವಿಡಿ ಸುತ್ತಾಟ

ಕಾವು ಪಡೆಯುತ್ತಿರುವ ಚುನಾವಣಾ ಪ್ರಚಾರ

Published:
Updated:

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನ ಗಣನೆ ಆರಂಭವಾಗಿರುವ ನಡುವೆಯೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಳ್ಳಿಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕಾವು ಪಡೆದುಕೊಂಡಿದೆ.

ಕಾಂಗ್ರೆಸ್‌ನಿಂದ ಮರು ಸ್ಪರ್ಧೆಗೆ ಬಯಸಿರುವ ಶಾಸಕ ಡಾ.ಕೆ.ಸುಧಾಕರ್, ಜೆಡಿಎಸ್ ಅಭ್ಯರ್ಥಿ ಕೆ.ಪಿ. ಬಚ್ಚೇಗೌಡ ಮತ್ತು ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ವಿ.ನವೀನ್ ಕಿರಣ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿ ಊರೂರು ಸುತ್ತಿ ಮತದಾರರ ಮನವೊಲಿಸಲು ಪೈಪೋಟಿ ನಡೆಸಿದ್ದಾರೆ.

ಬೇಸಿಗೆಯ ಸುಡು ಬಿಸಿಲು ಲೆಕ್ಕಿಸದೆ ಮತದಾರರ ಮನೆ ಬಾಗಿಲಿಗೆ ಅಲೆಯಲು ಆರಂಭಿಸುವ ರಾಜಕಾರಣಿಗಳು ತಮ್ಮದೇ ಆದ ಶೈಲಿಯಲ್ಲಿ ಮತ ಯಾಚನೆಗೆ ಮುಂದಾಗಿದ್ದಾರೆ. ಸದ್ಯ ಬೆಳಿಗ್ಗೆ ಸುಮಾರು 8 ಗಂಟೆಗೆ ಆರಂಭಗೊಳ್ಳುವ ಪ್ರಚಾರ ಕಾರ್ಯ ರಾತ್ರಿ ಸುಮಾರು 10ರ ವರೆಗೆ ನಿರಂತರವಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯಾಗುತ್ತಿದೆ ಇದರ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ಬಲ್ಲವರು.

ಶಾಸಕ ಸುಧಾಕರ್ ಅವರು ಈವರೆಗೆ ಸಮಯ ಸಿಕ್ಕಾಗ ಅಲ್ಲೊಂದು, ಇಲ್ಲೊಂದು ಗ್ರಾಮಗಳಿಗೆ ಭೇಟಿ ಮತದಾರರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದರು. ಇದೀಗ ಅವರು ಕೂಡ ಪೂರ್ಣ ಪ್ರಮಾಣದಲ್ಲಿ ಪ್ರಚಾರಕ್ಕೆ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ನೆರಳು, ಬೆಳಕು ಮತ್ತು ಧ್ವನಿವರ್ಧಕಗಳ ವ್ಯವಸ್ಥೆವುಳ್ಳ ವಿಶೇಷ ತೆರೆದ ವಾಹನವೊಂದನ್ನು ಅಣಿಗೊಳಿಸಿದ್ದಾರೆ.

ಭಾನುವಾರದಿಂದ ಬಿರುಸಿನ ಪ್ರಚಾರಕ್ಕೆ ಶುರುವಿಟ್ಟುಕೊಂಡಿರುವ ಶಾಸಕ ಸುಧಾಕರ್ ಅವರು ಪೇರೇಸಂದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಪೂರ್ಣಗೊಳಿಸಿ ಸೋಮವಾರ ಪಟ್ರೇನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ತಿರುಗಾಟ ಆರಂಭಿಸಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಹಳ್ಳಿಗಳಲ್ಲಿ ಪ್ರಚಾರ ನಡೆಸುವ ಸುಧಾಕರ್ ಅವರು ಸಂಜೆಯಿಂದ ರಾತ್ರಿ ಸುಮಾರು 9ರ ವರೆಗೆ ಪ್ರತಿ ದಿನ ನಗರದ ಒಂದು ವಾರ್ಡ್‌ ಸುತ್ತಲು ಕಾರ್ಯಕ್ರಮ ರೂಪಿಸಿದ್ದಾರೆ.

ರಾಜ್ಯ ಸರ್ಕಾರದ ಯೋಜನೆಗಳ ಜತೆಗೆ ಕಳೆದ ಐದು ವರ್ಷಗಳಲ್ಲಿ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಮುಂದೆ ಮಾಡಿಕೊಂಡು ಸುಧಾಕರ್ ಅವರು ಮತದಾರರಲ್ಲಿ ಮನವಿ ಮಾಡಿಕೊಳ್ಳಲು ಆರಂಭಿಸಿದ್ದಾರೆ.

ಜೆಡಿಎಸ್ ಪೈಪೋಟಿ

ಜೆಡಿಎಸ್ ಅಭ್ಯರ್ಥಿಯಾಗಲಿರುವ ಕೆ.ಪಿ.ಬಚ್ಚೇಗೌಡ ಅವರು ಈ ಬಾರಿ ಮತ್ತೆ ಸುಧಾಕರ್ ಅವರಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಭರದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಬೆಂಬಲಿಗರು ಮತ್ತು ಮುಖಂಡರೊಂದಿಗೆ ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಡುವ ಗೌಡರು ರಾತ್ರಿ 10ರ ವರೆಗೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ನಂದಿ ಹೋಬಳಿ ಪ್ರವಾಸ ಮುಗಿಸಿರುವ ಬಚ್ಚೇಗೌಡರು ಕಸಬಾ ಮತ್ತು ಮಂಡಿಕಲ್‌ ಹೋಬಳಿಯಲ್ಲಿ ಕೆಲ ಗ್ರಾಮಗಳಿಗೆ ಭೇಟಿ ನೀಡುವುದು ಬಾಕಿ ಇದೆ. ಶೇ 45ರಷ್ಟು ಪ್ರದೇಶದಲ್ಲಿ ಪ್ರಚಾರ ಮುಗಿಸಿದ್ದಾರೆ. ಇದೀಗ ಒಂದು ದಿನ ಹಳ್ಳಿ, ಮತ್ತೊಂದು ದಿನ ನಗರದ ವಾರ್ಡ್‌ವೊಂದರಲ್ಲಿ ತಿರುಗಾಡಲು ಉದ್ದೇಶಿಸಿದ್ದಾರೆ.

ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 20 ತಿಂಗಳಲ್ಲಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಜೆಡಿಎಸ್‌ ತಂಡ ಮತದಾರರ ಎದುರು ಉದ್ಗರಿಸುತ್ತಿದೆ. ಜತೆಗೆ ಕಳೆದ ಐದು ವರ್ಷಗಳ ಆಡಳಿತದ ವಿರುದ್ಧ ತಮ್ಮದೇ ಆದ ಆರೋಪಗಳನ್ನು ಪಟ್ಟಿ ಮಾಡಿ ಅವುಗಳಿಂದ ಮತದಾರರ ಗಮನ ತಮ್ಮತ್ತ ಸೆಳೆಯಲು ಹೊರಟಿದ್ದಾರೆ.

ಸದ್ಯ ರಾಜಕಾರಣಿಗಳು ಹಳ್ಳಿಗಳಲ್ಲಿ ಮಾತ್ರವಲ್ಲದೇ ಕಂಡಕಂಡಲ್ಲಿ ತಮ್ಮ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದ್ದಾರೆ. ಹಳ್ಳಿಗಳ ಸಂಚಾರದ ನಡುವೆ ಕಾಣಸಿಗುವ ತೋಟ, ಗದ್ದೆಗಳಲ್ಲಿ ಇರುವ ಕೂಲಿ ಕಾರ್ಮಿಕರು, ರೈತರ ಬಳಿ ಕೂಡ ಹೋಗಿ ‘ಈ ಬಾರಿ ತಮಗೆ ಮತ ನೀಡಿ’ ಎಂದು ಕೈಮುಗಿಯುವ ಪರಿಪಾಠ ರೂಢಿಸಿಕೊಂಡಿದ್ದಾರೆ.

ಒಂದು ಸುತ್ತು ಮುಗಿಸಿದ ನವೀನ್ ಕಿರಣ್

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ವಿ.ನವೀನ್ ಕಿರಣ್ ಅವರು ಈಗಾಗಲೇ ಇಡೀ ಕ್ಷೇತ್ರದಲ್ಲಿರುವ ಎಲ್ಲಾ ಗ್ರಾಮೀಣ ಪ್ರದೇಶಗಳನ್ನು ಒಂದು ಸುತ್ತು ಹಾಕಿ ಮುಗಿಸಿ, ಇದೀಗ ಮತ್ತೊಂದು ಸುತ್ತಿನ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಸದ್ಯ ಬೆಳಿಗ್ಗೆ 8ರ ಸುಮಾರಿಗೆ ಮನೆ ಬಿಟ್ಟರೆ ರಾತ್ರಿ 9ರ ವರೆಗೆ ಇವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್ ‘ಬಂಡಾಯ’ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿಕೊಂಡು ನವೀನ್ ಕಿರಣ್ ಅವರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಶಾಸಕರ ಆಡಳಿತ ವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬದಲಾವಣೆಗಾಗಿ ಮತ ನೀಡಿ ಎಂದು ಜನರ ಬಳಿ ಹೋಗುತ್ತಿರುವ ನವೀನ್ ಕಿರಣ್ ಅವರು ಈಗಾಗಲೇ ನಗರದಲ್ಲಿ ಐದಾರು ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯ ಮುಗಿಸಿದ್ದಾರೆ.

ಬುಧವಾರದಿಂದ ಬಿಜೆಪಿ ಪ್ರಚಾರ?

ಹೈಕಮಾಂಡ್ ಘೋಷಿಸುವ ಅಭ್ಯರ್ಥಿಗಳ ಪಟ್ಟಿಯತ್ತಲೇ ದೃಷ್ಟಿ ನೆಟ್ಟಿರುವ ಬಿಜೆಪಿಯವರು ಈವರೆಗೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಇಳಿದಿಲ್ಲ. ಈ ಕುರಿತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಟಿಕೆಟ್ ಆಕಾಂಕ್ಷಿಯೂ ಆಗಿರುವ ಡಾ.ಜಿ.ವಿ.ಮಂಜುನಾಥ್ ಅವರನ್ನು ಕೇಳಿದರೆ, ‘ಪ್ರಚಾರಕ್ಕೆ ಪರವಾನಗಿ ಕೋರಿ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಬುಧವಾರದಿಂದ ಪ್ರಚಾರ ಕಾರ್ಯ ಆರಂಭಿಸುತ್ತೇವೆ’ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry