ಮಂಗಳವಾರ, ಡಿಸೆಂಬರ್ 10, 2019
24 °C

ಕಲಬುರ್ಗಿ ರಂಗಾಯಣದಲ್ಲಿ ಅನುಚಿತ ವರ್ತನೆ: 3 ಕಲಾವಿದರ ವಿರುದ್ಧ ದೂರು ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ಕಲಬುರ್ಗಿ ರಂಗಾಯಣದಲ್ಲಿ ಅನುಚಿತ ವರ್ತನೆ: 3 ಕಲಾವಿದರ ವಿರುದ್ಧ ದೂರು ದಾಖಲು

ಕಲಬುರ್ಗಿ: ಕಲಬುರ್ಗಿಯ ರಂಗಾಯಣದ ಸಹ ಕಲಾವಿದೆಯರು ಮತ್ತು ನಿರ್ದೇಶಕರೊಂದಿಗೆ ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೂವರು ಕಲಾವಿದರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.

ಬೀರಣ್ಣ ಮಾಳಪ್ಪ ಪೂಜಾರಿ, ದೇವೀಂದ್ರ ಗುರುನಾಥ ಬಡಿಗೇರ, ಮೋಹನಕುಮಾರ ಶರಣಪ್ಪ ಹುಲಿಮನಿ ವಿರುದ್ಧ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ದೂರು ದಾಖಲಿಸಿದ್ದಾರೆ.

‘ರಂಗಾಯಣದಲ್ಲಿ 12 ಕಲಾವಿದರು, ಮೂವರು ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಏ.8ರಂದು ಕಲಾವಿದರೆಲ್ಲರೂ ರಂಗಾಯಣದಲ್ಲಿ ಸಂಗೀತದ ಪೂರ್ವಾಭ್ಯಾಸದಲ್ಲಿ ತೊಡಗಿದ್ದರು. ಈ ವೇಳೆ ಕುಡಿದು ಬಂದ ಬೀರಣ್ಣ, ದೇವೀಂದ್ರ ಮತ್ತು ಮೋಹನಕುಮಾರ ಅವರು ಸಹ ಕಲಾವಿದೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬುದ್ಧಿ ಹೇಳಿದ್ದಕ್ಕೆ ನನಗೆ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮೂವರು ಕಲಾವಿದರ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ಬೆದರಿಕೆ (ಐಪಿಸಿ 506), ಅಕ್ರಮವಾಗಿ ಕೂಡಿ ಹಾಕುವುದು (ಐಪಿಸಿ 341), ನಿರ್ದಿಷ್ಟ ಉದ್ದೇಶದ ಅಪರಾಧ (ಐಪಿಸಿ 34) ಆರೋಪದಡಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಗಾಯಣದಲ್ಲಿ ಗಲಾಟೆ ಇದೇ ಮೊದಲಲ್ಲ!:  ಕಲಬುರ್ಗಿ ರಂಗಾಯಣದಲ್ಲಿ ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. 2016ರ ಫೆಬ್ರುವರಿ 9 ರಂದು ಮಹೇಶಕುಮಾರ ಎಂಬ ದಲಿತ ಕಲಾವಿದನ ಮೆಲೆ ಕಲಾವಿದೆ ಲಕ್ಷ್ಮಿ ಕೆರೋಜಿ ಹಾಗೂ ಆಕೆಯ ಪತಿ ಸೇರಿ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪದಡಿ ದೂರು ದಾಖಲಾಗಿತ್ತು.

2016ರ ಫೆಬ್ರುವರಿ 11ರಂದು ರಂಗಾಯಣ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿ ಹಾಗೂ ಕಲಾವಿದೆ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ ದಾಖಲಾಗಿದ್ದವು. ಹುಡಗಿ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಕಲಾವಿದೆ ಲಕ್ಷ್ಮಿ ಕೆರೋಜಿಯನ್ನು ಪೊಲೀಸರು ಬಂಧಿಸಿದ್ದರು.

ಇದಾದ ಬಳಿಕ ಹುಡಗಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ಕಲಾವಿದರು ರಂಗಾಯಣ, ಜಿಲ್ಲಾಧಿಕಾರಿ ಕಚೇರಿ, ಜಗತ್ ವೃತ್ತ ಸೇರಿ ವಿವಿಧೆಡೆ 100 ದಿನ ನಿರಂತರ ಧರಣಿ ನಡೆಸಿದ್ದರು.  2016 ಮೇ 24ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಬೆಳವಣಿಗೆಗಳಿಗೆ ಅಂತ್ಯ ಹಾಡಲು ಮುಂದಾದ ಸರ್ಕಾರ 2016ರ ಜುಲೈ 26ರಂದು ನಿರ್ದೇಶಕ ಸ್ಥಾನದಿಂದ ಪ್ರೊ.ಆರ್.ಕೆ.ಹುಡಗಿ ಅವರನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಅಂದರೆ, 2016ರ ಜುಲೈ 27ರಂದು 12 ಕಲಾವಿದರು ಹಾಗೂ ಮೂವರು ತಂತ್ರಜ್ಞರ ಆಯ್ಕೆ ರದ್ದುಪಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆದೇಶ ಹೊರಡಿಸಿತ್ತು.

ಪ್ರತಿಕ್ರಿಯಿಸಿ (+)