ಶುಕ್ರವಾರ, ಡಿಸೆಂಬರ್ 13, 2019
19 °C

ಏರ್‌ ಇಂಡಿಯಾ: ವಾಸ್ತವ – ಭ್ರಮೆ

ಕ್ಯಾ‍ಪ್ಟನ್ ಜಿ.ಆರ್. ಗೋ‍ಪಿನಾಥ್ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ: ವಾಸ್ತವ – ಭ್ರಮೆ

ಏರ್‌ ಇಂಡಿಯಾ ವಿಚಾರದಲ್ಲಿ ಕಠಿಣ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ಕೊನೆಗೂ ಕೈಗೊಂಡಿದೆ. ಸಂಸ್ಥೆಯ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಇದು ಖುಷಿ ತರುವಂಥದ್ದು. ಆದರೆ, ಮಾರಾಟಕ್ಕೆ ರೂಪಿಸಿರುವ ಷರತ್ತುಗಳು ತಲೆಬಿಸಿ ತರುವಂತಿವೆ. ಏರ್‌ ಇಂಡಿಯಾ ಎನ್ನುವುದು ಈಗ ಮುದಿ ಸಂಸ್ಥೆ, ವರ್ಷಗಳಷ್ಟು ಮೊದಲೇ ಮಾರಾಟ ಮಾಡಿರಬೇಕಿತ್ತು ಎಂಬುದನ್ನು ಮರೆತಿರುವ ಸರ್ಕಾರ, ಈಗ ಮಾರಾಟ ಮಾಡುವುದರಿಂದ ದೊಡ್ಡ ಮೊತ್ತ ಸಿಗಲಿದೆ ಎನ್ನುವ ಭ್ರಮೆಯಲ್ಲಿದೆ.

ಸಂಸ್ಥೆಯ ಶೇಕಡ 76ರಷ್ಟು ಷೇರುಗಳನ್ನು ಮಾರಾಟ ಮಾಡಿ ಇನ್ನುಳಿದ ಷೇರುಗಳನ್ನು ಸರ್ಕಾರ ತನ್ನ ಬಳಿಯೇ ಇರಿಸಿಕೊಳ್ಳಲಿದೆ, ಸಂಸ್ಥೆ ಹೊಂದಿರುವ ₹ 34 ಸಾವಿರ ಕೋಟಿ ಸಾಲವು ಸಂಸ್ಥೆಯನ್ನು ಖರೀದಿ ಮಾಡುವ ಕಂಪನಿಗೆ ವರ್ಗಾವಣೆ ಆಗಲಿದೆ ಎಂಬ ಅಂಶಗಳು ಷರತ್ತುಗಳಲ್ಲಿವೆ. ಈ ಸಾಲದ ಮೊತ್ತವೇ ಬೆಚ್ಚಿಬೀಳಿಸುವಂತಿದೆ. ಏರ್‌ ಇಂಡಿಯಾ, ಈಗ ವಾರ್ಷಿಕ ₹ 5 ಸಾವಿರ ಕೋಟಿಗಿಂತ ಹೆಚ್ಚಿನ ಹಣ ಕಳೆದುಕೊಳ್ಳುತ್ತಿದೆ. ಇಂತಹ ವಿಮಾನಯಾನ ಸಂಸ್ಥೆಯನ್ನು ಖರೀದಿಸಲು ಅತ್ಯಂತ ಧೈರ್ಯಶಾಲಿ ಉದ್ಯಮಿ ಕೂಡ ಹಿಂಜರಿಯುತ್ತಾನೆ.

ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ಇರುವವರನ್ನು ಇನ್ನಷ್ಟು ಸಂಖ್ಯೆಯಲ್ಲಿ ಆಕರ್ಷಿಸಲು ಸರ್ಕಾರ ಹೆಚ್ಚಿನ ಕೆಲಸ ಮಾಡಬೇಕು. ಏರ್‌ ಇಂಡಿಯಾ ಸಂಸ್ಥೆಯ ಹೊಳಪು ಮಾಯವಾಗಿದ್ದರೂ, ಈ ಬ್ರ್ಯಾಂಡ್‌ ಬಗ್ಗೆ ಪ್ರೀತಿ ಉಳಿದುಕೊಂಡಿದೆ. ಸೂಕ್ತ ವ್ಯಕ್ತಿ ಈ ಸಂಸ್ಥೆಯಲ್ಲಿ ಬಂಡವಾಳ ಹೂಡಿದರೆ, ಸಂಸ್ಥೆಯಲ್ಲಿ ಇರುವ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ. ಈ ಸಂಸ್ಥೆ ಹೊಂದಿರುವ ಮೂಲಸೌಕರ್ಯ, ಜಗತ್ತಿನ ಪ್ರಮುಖ

ಸ್ಥಳಗಳ ವಿಮಾನ ನಿಲ್ದಾಣಗಳಿಗೆ ಅದು ಹೊಂದಿರುವ ಸಂಪರ್ಕ, ಸಂಸ್ಥೆಯಲ್ಲಿರುವ ಎಂಜಿನಿಯರ್‌ಗಳು, ಪೈಲಟ್‌ಗಳು ಸೇರಿದಂತೆ ವಿವಿಧ ಆಯಾಮಗಳನ್ನು ಪರಿಗಣಿಸಿದರೆ ಸಂಸ್ಥೆಯ ಮಾರುಕಟ್ಟೆ ಮೌಲ್ಯವನ್ನು ₹ 50 ಸಾವಿರ ಕೋಟಿಗೆ ಕೊಂಡೊಯ್ಯಬಹುದು. ಆದರೆ ಹಾಗೆ ಮಾಡಲು ಒಂದು ಸಮರ್ಥ ಆಡಳಿತ ಮಂಡಳಿ ಮತ್ತು 3–4 ವರ್ಷಗಳ ಕೆಲಸದ ಅಗತ್ಯ ಇದೆ. ಸರ್ಕಾರವು ವಿವೇಕಯುತವಾಗಿ ತೀರ್ಮಾನಗಳನ್ನು ಕೈಗೊಂಡರೆ, ಬಿಡ್ಡಿಂಗ್‌ ಪ್ರಕ್ರಿಯೆಯ ನಿಬಂಧನೆಗಳನ್ನು ಬದಲಿಸಿದರೆ ಏರ್‌ ಇಂಡಿಯಾದ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಈಗಲೂ ಸಾಧ್ಯವಿದೆ. ಹಾಗೆಯೇ, ಸರ್ಕಾರ ತನ್ನ ಬಳಿ ಉಳಿಸಿಕೊಳ್ಳಲಿರುವ ಷೇರುಗಳಿಂದ ಮುಂದಿನ ದಿನಗಳಲ್ಲಿ ಉತ್ತಮ ಲಾಭಾಂಶ ಪಡೆದುಕೊಳ್ಳಲೂ ಅವಕಾಶಗಳಿವೆ.

ಬಿಡ್ಡಿಂಗ್‌ ಪ್ರಕ್ರಿಯೆಯು ಜಾಗತಿಕ ಮಟ್ಟದಲ್ಲಿ ನಡೆಯಬೇಕು. ಪಾರದರ್ಶಕವಾಗಿ ಎಲೆಕ್ಟ್ರಾನಿಕ್‌ ಟೆಂಡರ್‌ ನಡೆಸಬೇಕು. ಬಿಡ್ಡಿಂಗ್‌ ಪ್ರಕ್ರಿಯೆಗೆ ಅಂತಿಮಗೊಂಡ ಕಂಪನಿಗಳು ಮೀಸಲು ಮೊತ್ತವನ್ನು ಠೇವಣಿ ಇರಿಸಬೇಕು. ಬಿಡ್ಡಿಂಗ್‌ ಆರಂಭ ಮತ್ತು ಮುಕ್ತಾಯದ ನಡುವೆ ಆರರಿಂದ ಎಂಟು ಗಂಟೆಗಳಷ್ಟು ಮಾತ್ರ ಸಮಯ ಇರಬೇಕು. ಸರ್ಕಾರದ ಹಲವು ಬಿಡ್ಡಿಂಗ್‌ಗಳಲ್ಲಿ ಇರುವಂತೆ ‘ಮುಚ್ಚಿದ ಲಕೋಟೆ’ಯ ವ್ಯವಹಾರ ಇಲ್ಲಿ ಇರಬಾರದು. ಇಂತಹ ಪ್ರಕ್ರಿಯೆಯು ಅಕ್ರಮ ನಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಲ್ಲದೆ, ಉತ್ತಮ ಬೆಲೆಯೂ ಸಿಗುವುದಿಲ್ಲ. ಎದುರಾಳಿ ಕಂಪನಿ ಬಿಡ್‌ ಮಾಡಿರುವ ಮೊತ್ತವನ್ನು ಗಮನಿಸಿ ತನ್ನ ಬಿಡ್ಡಿಂಗ್‌ ಮೊತ್ತ ಹೆಚ್ಚಿಸುವ ಮುಕ್ತಅವಕಾಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಇರಬೇಕು. ಟಾಟಾ ಕಂಪನಿಯು ಕೋರಸ್‌ ಸ್ಟೀಲ್‌ ಕಂಪನಿ

ಯನ್ನು ಖರೀದಿಸಿದ್ದು ಇದೇ ರೀತಿ.

ಖರೀದಿಗೆ ಆಸಕ್ತರ ಹೆಸರುಗಳನ್ನು ಅಂತಿಮಗೊಳಿಸಿದ ನಂತರ, ಅವರಲ್ಲಿನ ಆತಂಕಗಳನ್ನು ಅರ್ಥ ಮಾಡಿಕೊಳ್ಳಲು ಸರ್ಕಾರವು ಅವರ ಜೊತೆ ಮಾತುಕತೆ ನಡೆಸಬೇಕು, ಟೆಂಡರ್‌ ಪ್ರಕ್ರಿಯೆ ಮತ್ತು ಮಾರಾಟ ನಿಬಂಧನೆಗಳನ್ನು ಪರಿಶೀಲಿಸಬೇಕು. ಗರಿಷ್ಠ ಬೆಲೆ ಗಿಟ್ಟಿಸಿಕೊಳ್ಳಲು, ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಕಂಪನಿಗಳು ಪಾಲ್ಗೊಳ್ಳುವಂತೆ ಮಾಡಲು ಇದು ಪ್ರಮುಖ ಹೆಜ್ಜೆ. ಮಾರಾಟ ನಿಬಂಧನೆ ಮತ್ತು ವೈಮಾನಿಕ ನೀತಿಗಳನ್ನು ಬಿಡ್ಡಿಂಗ್‌ನಲ್ಲಿ ಆಸಕ್ತಿ ಇರುವ ಕಂಪನಿಗಳಿಗೆ ಸ್ಪಷ್ಟವಾಗಿ ವಿವರಿಸಿದರೆ ಮಾತ್ರ ಏರ್‌ ಇಂಡಿಯಾ ಮಾರಾಟದಿಂದ ಗರಿಷ್ಠ ಲಾಭ ಪಡೆದುಕೊಳ್ಳಲು ಸಾಧ್ಯ.

ಏರ್‌ ಇಂಡಿಯಾದ ಸಾಲದ ಹೊರೆಯನ್ನು ಸರ್ಕಾರವೇ ಹೊತ್ತುಕೊಂಡು, ಈ ಸಂಸ್ಥೆಯನ್ನು ಋಣಮುಕ್ತ ಸ್ಥಿತಿಯಲ್ಲಿ ಮಾರಾಟಕ್ಕಿಡಬೇಕು. ಸಂಸ್ಥೆಯ ಶೇ 76ರಷ್ಟು ಷೇರುಗಳನ್ನು ಮಾರಾಟ ಮಾಡುವ ಬದಲು, ಶೇ 51ರಷ್ಟು ಪಾಲನ್ನು ಮಾತ್ರ ಮಾರಾಟ ಮಾಡಬೇಕು. ಇದರಿಂದ, ಮುಂದೆ ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಹೆಚ್ಚಿದಂತೆಲ್ಲ ಸರ್ಕಾರ ತನ್ನ ಬಳಿ ಇರುವ ಷೇರುಗಳನ್ನು ಹಂತಹಂತವಾಗಿ ಮಾರಿ ಲಾಭ ಗಳಿಸಲು ಅವಕಾಶ ಆಗುತ್ತದೆ. ಮಾರುತಿ–ಸುಝುಕಿ ವಿಚಾರದಲ್ಲಿಯೂ ಇದೇ ಮಾದರಿ ಅನುಸರಿಸಲಾಗಿತ್ತು. ಏರ್‌ ಇಂಡಿಯಾ ಕಂಪನಿಯನ್ನು ಖರೀದಿ ಮಾಡುವವರು, ಖರೀದಿ ಮಾಡಿದ 36 ತಿಂಗಳಲ್ಲಿ ಅದರ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ಷರತ್ತು ಹಾಕಬೇಕು.

ಏರ್‌ ಇಂಡಿಯಾ ಹೊಂದಿರುವ ಎಂಜಿನಿಯರಿಂಗ್‌ ಮೂಲಸೌಕರ್ಯವನ್ನೂ ಮಾರಾಟಕ್ಕೆ ಇಡಬೇಕು. ಈ ಎಂಜಿನಿಯರಿಂಗ್‌ ಮೂಲಸೌಕರ್ಯವು ಇತರರಲ್ಲಿ ಹೊಟ್ಟೆಕಿಚ್ಚು ತರಿಸುವಷ್ಟು ಉತ್ತಮವಾಗಿದೆ. ವಿಮಾನಯಾನ ಉದ್ದಿಮೆಯಿಂದ ತಾನು ಹೊರನಡೆಯುವವರೆಗೂ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂಬ ವಚನವನ್ನು ಸರ್ಕಾರ ನೀಡಬೇಕು. ಕಟ್ಟುನಿಟ್ಟಿನ ಕಾರ್ಪೊರೇಟ್‌ ಆಡಳಿತ ವ್ಯವಸ್ಥೆ ಜಾರಿಗೆ ತರುವುದಲ್ಲದೆ, ಸಂಸ್ಥೆಯನ್ನು ಖರೀದಿಸುವ ಕಂಪನಿಗೆ ಸ್ವತಂತ್ರವಾಗಿ ಅದನ್ನು ನಡೆಸಿಕೊಂಡು ಹೋಗಲು ಅವಕಾಶ ನೀಡುವ ಭರವಸೆಯನ್ನೂ ನೀಡಬೇಕು. ಹೊಸ ಮಾಲೀಕರು ತಮಗೆ ಅಗತ್ಯವಿರುಷ್ಟು ಸಿಬ್ಬಂದಿ ಮಾತ್ರ ಉಳಿಸಿಕೊಳ್ಳಲು ಅವಕಾಶ ಹೊಂದಿರಬೇಕು. ಉದ್ಯೋಗ ಕಳೆದುಕೊಳ್ಳುವವರಿಗೆ ಸರ್ಕಾರವೇ ಪರಿಹಾರ ನೀಡುತ್ತದೆ ಎನ್ನುವ ಭರವಸೆಯನ್ನೂ ನೀಡಬೇಕು. ದಶಕಗಳ ಕಾಲ ಅನುಸರಿಸಿದ ಗೊತ್ತುಗುರಿ ಇಲ್ಲದ ನೇಮಕಾತಿಯ ‍ಪರಿಣಾಮವಾಗಿ ಏರ್‌ ಇಂಡಿಯಾ ಸಂಸ್ಥೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದೆ. ಸಂಸ್ಥೆಯಲ್ಲಿ ಮೈಗಳ್ಳರು ಬಹಳಷ್ಟು ಇದ್ದಾರಾದರೂ, ಉತ್ತಮ ಪೈಲಟ್‌ಗಳು, ಎಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿ ಕೂಡ ಇದ್ದಾರೆ. ಇವರು ಮುಂದೆ ಬರುವ ಮಾಲೀಕರಿಗೆ ಬೇಕಾಗುತ್ತಾರೆ. ಸಂಸ್ಥೆಯ ಒಡೆತನದಲ್ಲಿ ಇರುವ ಜಮೀನು ಅಥವಾ ಇತರ ರಿಯಲ್‌ ಎಸ್ಟೇಟ್‌ ಆಸ್ತಿ ಮಾರಾಟ ಮಾಡಿ, ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದುಹೆಚ್ಚುವರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಹುದು.ಈಗಿರುವಷ್ಟು ಸಂಖ್ಯೆಯ ಸಿಬ್ಬಂದಿಗಳನ್ನು ಇಟ್ಟುಕೊಂಡರೆ ಯಾರೂ ಬಿಡ್ಡಿಂಗ್‌ಗೆ ಆಸಕ್ತಿ ತೋರಿಸುವುದಿಲ್ಲ ಎಂಬುದನ್ನು ಸರ್ಕಾರ ಮರೆಯಬಾರದು.

ಪ್ರತಿಕ್ರಿಯಿಸಿ (+)