ಶುಕ್ರವಾರ, ಡಿಸೆಂಬರ್ 13, 2019
19 °C

ಅಶ್ವಿನಿ–ಸಾತ್ವಿಕ್‌ ಜಯದ ಆರಂಭ: ಗೆಲ್ಲುವ ವಿಶ್ವಾಸದಲ್ಲಿ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

ಅಶ್ವಿನಿ–ಸಾತ್ವಿಕ್‌ ಜಯದ ಆರಂಭ: ಗೆಲ್ಲುವ ವಿಶ್ವಾಸದಲ್ಲಿ ಸಿಂಧು

ಗೋಲ್ಡ್‌ ಕೋಸ್ಟ್‌: ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

ಮಂಗಳವಾರ ನಡೆದ ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 21–9, 21–5ರ ನೇರ ಗೇಮ್‌ಗಳಿಂದ ಸ್ಟುವರ್ಟ್‌ ಹಾರ್ಡಿ ಮತ್ತು ಚೋಲ್‌ ಲೆ ತಿಸ್ಸೀರ್‌ ಅವರನ್ನು ಮಣಿಸಿದರು.

ಮಿಶ್ರ ತಂಡ ವಿಭಾಗದಲ್ಲಿ ಭಾರತ, ಚಿನ್ನ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಅಶ್ವಿನಿ ಮತ್ತು ಸಾತ್ವಿಕ್‌ ಮೊದಲ ಗೇಮ್‌ನಲ್ಲಿ ಮೋಡಿ ಮಾಡಿದರು.

ಮನಮೋಹಕ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದ ಅವರು ನಿರಾಯಾಸವಾಗಿ ಗೇಮ್‌ ಜಯಿಸಿದರು.

ಎರಡನೆ ಗೇಮ್‌ನಲ್ಲೂ ಭಾರತದ ಜೋಡಿ ಅಬ್ಬರಿಸಿತು. ತಾವು ಮಾಡಿದ ಸರ್ವ್‌ ಕಾಪಾಡಿಕೊಂಡ ಅಶ್ವಿನಿ ಮತ್ತು ಸಾತ್ವಿಕ್‌, ಎದುರಾಳಿಗಳ ಸರ್ವ್‌ಗಳನ್ನು ಮುರಿದು ಪಾಯಿಂಟ್ಸ್‌ ಕಲೆಹಾಕಿದರು.

ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ, ಇಂಗ್ಲೆಂಡ್‌ನ ಲೇನ್ ಬೆನ್‌ ಮತ್ತು ಜೆಸ್ಸಿಕಾ ಪುಗ್‌ ವಿರುದ್ಧ ಸೆಣಸಲಿದೆ.

ವಿಶ್ವಾಸದಲ್ಲಿ ಸಿಂಧು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿರುವ ಪಿ.ವಿ.ಸಿಂಧು ಬುಧವಾರ ಅಂಗಳಕ್ಕಿಳಿಯಲಿದ್ದಾರೆ.

ಮೊದಲ ಸುತ್ತಿನ ಹೋರಾಟದಲ್ಲಿ ಸಿಂಧು, ಆ್ಯಂಡ್ರಾ ವೈಟ್‌ಸೈಡ್‌ ವಿರುದ್ಧ ಆಡಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌, ದಕ್ಷಿಣ ಆಫ್ರಿಕಾದ ಎಲಿಸೆ ಡಿವಿಲಿಯರ್ಸ್‌ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಕೆ.ಶ್ರೀಕಾಂತ್‌, ಮಾರಿಷಸ್‌ನ ಕ್ರಿಸ್ಟೊಫರ್‌ ಜೀನ್‌ ಪಾಲ್‌ ವಿರುದ್ಧ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)