ಸೋಮವಾರ, ಆಗಸ್ಟ್ 10, 2020
26 °C
ಹಳ್ಳ ಹಿಡಿದ ನೀರಾವರಿ ಯೋಜನೆಗಳು: ಸಮಸ್ಯೆ ಜೀವಂತ, ವರ್ಷದ 365 ದಿನವೂ ನೀರಿಗೆ ಹಾಹಾಕಾರ

ಜೀವಜಲಕ್ಕೆ ನಿತ್ಯ ಕಾದಾಟ: ಪಕ್ಷಗಳ ಕೆಸರೆರಚಾಟ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಜೀವಜಲಕ್ಕೆ ನಿತ್ಯ ಕಾದಾಟ: ಪಕ್ಷಗಳ ಕೆಸರೆರಚಾಟ

ಕೋಲಾರ: ನೆತ್ತಿ ಮೇಲೆ ಸುಡು ಬಿಸಿಲು... ಸೂರ್ಯನ ಪ್ರಖರತೆಗೆ ಕಾದ ಹೆಂಚಾಗಿರುವ ಇಳೆ... ಎಲ್ಲೆಲ್ಲೂ ಬಿಸಿಲ ಧಗೆ... ಜೀವಜಲಕ್ಕಾಗಿ ದಿನ ಬೆಳಗಾದರೆ ಕಾದಾಟ... ಸ್ಥಳೀಯ ಸಂಸ್ಥೆ ಮುಂದೆ ಹೋರಾಟ... ಖಾಲಿ ಬಿಂದಿಗೆಗಳೊಂದಿಗೆ ನಾರಿಯರ ಸೆಣಸಾಟ... ವರುಣ ದೇವನ ಅವಕೃಪೆಗೆ ತುತ್ತಾಗಿರುವ ನಗರದ ಚಿತ್ರಣವಿದು.

ಬರವನ್ನೇ ಒದ್ದು ಮಲಗಿರುವ ನಗರದಲ್ಲಿ ಹನಿ ಹನಿ ನೀರಿಗೂ ತತ್ವಾರ. ಇಲ್ಲಿ ಹಾಲಿಗೆ ಬರವಿಲ್ಲ. ಆದರೆ ನೀರಿಗೆ ಬರ. ಮಳೆಗಾಲ, ಬೇಸಿಗೆಗಾಲವೆಂಬ ವ್ಯತ್ಯಾಸವಿಲ್ಲದೆ ವರ್ಷದ 365 ದಿನವೂ ನೀರಿಗೆ ಹಾಹಾಕಾರ.

ನೀರು ಇಲ್ಲಿ ಜನಜೀವನದ ಭಾಗವಲ್ಲ, ಬದಲಿಗೆ ರಾಜಕೀಯದ ವಸ್ತು. ಈ ಕಾರಣಕ್ಕಾಗಿಯೇ ಜನಪ್ರತಿನಿಧಿಗಳು ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದಾರೆ. ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನೀರು ಕೊಡುವುದಾಗಿ ಉದ್ದುದ್ದ ಭಾಷಣ ಮಾಡುವ ರಾಜಕೀಯ ನೇತಾರರಿಗೆ ತಮ್ಮ ಭರವಸೆ ನೆನಪಾಗುವುದು ಮತ್ತೊಂದು ಚುನಾವಣೆ

ಬಂದಾಗಲೇ. ನೀರಿನ ವಿಚಾರವಾಗಿ ಪರಸ್ಪರ ಕೆಸರೆರಚಾಟದಲ್ಲೇ ಐದು ವರ್ಷ ಕಳೆಯುವ ಪಕ್ಷಗಳಿಗೆ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿಯಿಲ್ಲ. ಅಪ್ಪ– ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಪಕ್ಷಗಳ ನಡುವಿನ ಕಿತ್ತಾಟದಲ್ಲಿ ಜನ ಹೈರಾಣಾಗಿದ್ದಾರೆ.

ಜನಸಂಖ್ಯೆ ವೃದ್ಧಿ: ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ನಗರದಲ್ಲಿ ಸದ್ಯ 11 ಸಾವಿರ ನಲ್ಲಿ ಸಂಪರ್ಕಗಳಿದ್ದು, ಈಗಿನ ಜನಸಂಖ್ಯೆಗೆ ಹೋಲಿಸಿದರೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ ಶುದ್ಧ ಕುಡಿಯುವ ನೀರು ಕೊಡಬೇಕು. ಆದರೆ, 45 ಲೀಟರ್‌ ಮಾತ್ರ

ಕೊಡಲಾಗುತ್ತಿದೆ.

ಕಾರಂಜಿಕಟ್ಟೆ, ಆರ್‌.ಜಿ.ಲೇಔಟ್‌, ಪಾಲಸಂದ್ರ ಲೇಔಟ್‌, ಕೀಲುಕೋಟೆ, ಮಹಾಲಕ್ಷ್ಮಿ ಬಡಾವಣೆ, ವಿಭೂತಿಪುರ, ವಿನೋಬಾ ನಗರ, ರಹಮತ್‌ನಗರ, ಗಾಂಧಿನಗರ, ಶಹಿನ್‌ಷಾನಗರ, ಟಮಕ, ಎನ್‌.ಬಿ.ನಗರ, ಶಾಂತಿನಗರ ಸೇರಿದಂತೆ ಬಹುಪಾಲು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಕೆಲವೆಡೆ ಜನ ಕಿಲೋ ಮೀಟರ್‌ಗಟ್ಟಲೆ ನಡೆದು ಹೋಗಿ ಸಾರ್ವಜನಿಕ ಕೊಳಾಯಿ ಅಥವಾ ಕೃಷಿ ಜಮೀನುಗಳಲ್ಲಿನ ಕೊಳವೆ ಬಾವಿಗಳಿಂದ ನೀರು ತರುವ

ಪರಿಸ್ಥಿತಿ ಇದೆ.

ಮೇಲ್ಮೈ ಜಲ ಮೂಲವಿಲ್ಲ: ನಗರದೊಳಗೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ನಾಲೆ, ಹೊಳೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ನೀರಿನ ಸೌಲಭ್ಯಕ್ಕೆ ಕೋಲಾರಮ್ಮ ಕೆರೆ, ಅಮ್ಮೇರಹಳ್ಳಿ ಕೆರೆ, ಕೋಡಿಕಣ್ಣೂರು ಕೆರೆಯನ್ನು ಆಶ್ರಯಿಸಲಾಗಿದೆ. ಅಮ್ಮೇರಹಳ್ಳಿ ಕೆರೆ ಬಳಿಯ ನೀರು ಶುದ್ಧೀಕರಣ ಘಟಕದಿಂದ ಕೊಳವೆ ಮಾರ್ಗದ (ಪೈಪ್‌ಲೈನ್‌) ಮೂಲಕ ಶೇ 50ರಷ್ಟು ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ದರ್ಗಾ ಮೊಹಲ್ಲಾ, ಕೆ.ಜಿ.ಮೊಹಲ್ಲಾ, ಕಠಾರಿಪಾಳ್ಯ, ಗೌರಿಪೇಟೆ, ಅಮ್ಮವಾರಿಪೇಟೆ, ಕೀಲುಕೋಟೆ, ಎನ್‌.ಬಿ.ನಗರ, ಕುರುಬರಪೇಟೆ, ಕೋಟೆ, ಮುನೇಶ್ವರನಗರ ಸೇರಿದಂತೆ ಬಹುತೇಕ ಹಳೆ ಬಡಾವಣೆಗಳಿಗೆ ಈ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿದೆ. ಘಟಕದಲ್ಲಿನ ನೀರು ಶುದ್ಧೀಕರಣ ಯಂತ್ರೋಪಕರಣಗಳನ್ನು ತಿಂಗಳ ಹಿಂದೆಯಷ್ಟೇ ದುರಸ್ತಿ ಮಾಡಲಾಗಿತ್ತು. ಯಂತ್ರೋಪಕರಣಗಳು ಪುನಃ ಕೆಟ್ಟಿದ್ದು, ಕೆರೆ ನೀರನ್ನು ಶುದ್ಧೀಕರಿಸದೆ ಪಂಪ್‌ ಮತ್ತು ಮೋಟರ್‌ ಸಹಾಯದಿಂದ ನೇರವಾಗಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.

ಸೇವಗೆ ಮುಕ್ತವಾಗಿಲ್ಲ: ನಗರದೆಲ್ಲೆಡೆ ಅಂತರ್ಜಲ ಮಟ್ಟ ಕುಸಿದಿದ್ದು, 1,800 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ಜನ ನಗರಸಭೆಯ ನಲ್ಲಿ ಹಾಗೂ ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್‌, ನೈಟ್ರೇಟ್‌, ಆರ್ಸೆನಿಕ್‌, ಕಬ್ಬಿಣ, ಕ್ಲೋರೈಡ್‌ನಂತಹ ವಿಷಕಾರಿ ಅಂಶಗಳಿವೆ. ಹೀಗಾಗಿ ಈ ನೀರು ಕುಡಿಯಲು ಯೋಗ್ಯವಲ್ಲ. ನಗರವಾಸಿಗಳು ಅನಿವಾರ್ಯವಾಗಿ ಈ ನೀರನ್ನೇ ಬಳಸುತ್ತಿದ್ದು, ವಿಷಕಾರಿ ಫ್ಲೋರೈಡ್‌ ಅಂಶ ದೇಹ ಸೇರುತ್ತಿದೆ. ನೀರನ್ನು ಶುದ್ಧೀಕರಿಸಿ ವಿತರಿಸುವ ಉದ್ದೇಶಕ್ಕಾಗಿ ಎಲ್ಲಾ ವಾರ್ಡ್‌ಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರೂ ಸೇವೆಗೆ ಮುಕ್ತವಾಗಿಲ್ಲ. ನಗರದಲ್ಲಿ ಒಂದು ಟ್ಯಾಂಕರ್‌ ಲೋಡ್‌ ನೀರಿಗೆ ₹ 500 ಇದ್ದು, ಜನ ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರು ಖರೀದಿಗೆ ಖರ್ಚು ಮಾಡುವಂತಾಗಿದೆ.

ಯೋಜನೆಗಳು ಏನಾದವು: ಜಿಲ್ಲೆಗೆ ಕುಡಿಯುವ ನೀರು ಕೊಡುವ ಉದ್ದೇಶಕ್ಕಾಗಿ ಆರಂಭಿಸಿರುವ ₹ 13 ಸಾವಿರ ಕೋಟಿ ಅಂದಾಜು ವೆಚ್ಚದ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ನೂರೆಂಟು ವಿಘ್ನ. 2013ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ತರಾತುರಿಯಲ್ಲಿ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಆದರೆ, ಐದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ರಾಜ್ಯದ ದಕ್ಷಿಣ ಕನ್ನಡ ಭಾಗದಿಂದ ಜಿಲ್ಲೆಗೆ ಕುಡಿಯುವ ನೀರು ತರುವ ಈ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ, ಸ್ಥಳೀಯರ ಹಾಗೂ ಪರಿಸರವಾದಿಗಳ ವಿರೋಧ ಹೀಗೆ ಒಂದರ ಮೇಲೊಂದು ಅಡೆತಡೆ ಎದುರಾಗುತ್ತಿವೆ. ಮತ್ತೊಂದೆಡೆ ನಗರಕ್ಕೆ ನೀರು ಪೂರೈಸುವ ಉದ್ದೇಶಕ್ಕಾಗಿ 2006ರಲ್ಲಿ ಆರಂಭಿಸಲಾದ ₹ 260 ಕೋಟಿ ವೆಚ್ಚದ ಯರಗೋಳ್‌ ಯೋಜನೆ ಹಳ್ಳ ಹಿಡಿದೆ. ಯೋಜನೆಯ ಕಾಮಗಾರಿ 2010ರಲ್ಲೇ ಮುಗಿಯಬೇಕಿತ್ತು. ಆದರೆ, ದಶಕ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಜಿಲ್ಲೆಯ 126 ಕೆರೆಗಳಿಗೆ 5 ಟಿಎಂಸಿ ನೀರು ತುಂಬಿಸುವ ಉದ್ದೇಶಕ್ಕಾಗಿ ₹ 1,280 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ಬೆಂಗಳೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಗೆ ಹರಿಸುವ ಈ ಯೋಜನೆಗೆ 2016ರ ಜೂನ್‌ನಲ್ಲಿ ಚಾಲನೆ ಸಿಕ್ಕಿತ್ತು.

ಶಾಶ್ವತ ನೀರಾವರಿ ಯೋಜನೆಗಳ ನಿರೀಕ್ಷೆಯಲ್ಲೇ ದಿನ ದೂಡುತ್ತಿರುವ ಜನ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಮುಖಾಮುಖಿಯಾಗಿದ್ದಾರೆ. ರಾಜಕೀಯ ಪಕ್ಷಗಳು ಸವಕಲು ಯೋಜನೆಗಳನ್ನೇ ಪ್ರಸ್ತಾಪಿಸುತ್ತಾ ಮತ ಬೇಟೆಗೆ ಮುಂದಾಗಿವೆ.

ಆಡಳಿತ ಪಕ್ಷದ ವೈಫಲ್ಯ

ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ನಗರಸಭೆಯಲ್ಲೂ ಅದೇ ಪಕ್ಷದ ಆಡಳಿತವಿದೆ. ಹೀಗಾಗಿ ನಗರಸಭೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಆದರೂ ನೀರಿನ ಬವಣೆ ತಪ್ಪಿಲ್ಲ. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಜನ ಮನೆ ಬಾಗಿಲಿಗೆ ಬಂದು ಬೈಯ್ಯುತ್ತಿದ್ದಾರೆ. ಆಡಳಿತ ಪಕ್ಷದ ವೈಫಲ್ಯದಿಂದ ರಸ್ತೆಯಲ್ಲಿ ತಲೆ ಎತ್ತಿ ಓಡಾಡುವುದೇ ಕಷ್ಟವಾಗಿದೆ –ನಾರಾಯಣಮ್ಮ, ನಗರಸಭೆ 25ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ

ಸುಳ್ಳು ಆರೋಪ ಮಾಡುತ್ತಿವೆ

ನಗರಸಭೆಯಲ್ಲಿ ಈ ಹಿಂದೆ ಜೆಡಿಎಸ್‌ ಪಕ್ಷದ ಆಡಳಿತವಿದ್ದಾಗ ಸಮಸ್ಯೆ ಗಂಭೀರವಾಗಿತ್ತು. ನಮ್ಮ ಪಕ್ಷ ಅಧಿಕಾರ ಹಿಡಿದ ನಂತರ ಲಭ್ಯ ಆರ್ಥಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ನೀರಿನ ಸಮಸ್ಯೆ ಬಗೆಹರಿಸಿದೆ. ಟ್ಯಾಂಕರ್‌ ಮಾಫಿಯಾಕ್ಕೆ ಕಡಿವಾಣ ಹಾಕಿದ್ದೇವೆ. ಇದರಿಂದ ನಗರಸಭೆ ಬೊಕ್ಕಸಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಉಳಿತಾಯವಾಗುತ್ತಿದೆ. ಆದರೆ, ವಿಪಕ್ಷಗಳು ರಾಜಕೀಯ ಕಾರಣಕ್ಕೆ ನೀರಿನ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿವೆ – ರಮೇಶ್‌, ನಗರಸಭೆ 6ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ

ಎರಡೂ ಪಕ್ಷಗಳು ಎಡವಿವೆ

ನಗರಸಭೆಯಲ್ಲಿ ಆಡಳಿತ ನಡೆಸಿರುವ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷವು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಜೆಡಿಎಸ್‌ ಆಡಳಿತಾವಧಿಯಲ್ಲಿ ಟ್ಯಾಂಕರ್‌ ನೀರು ಪೂರೈಕೆಯಲ್ಲಿ ಸಾಕಷ್ಟು ಅಕ್ರಮ ನಡೆಯಿತು. ನಗರದ ನೀರಿನ ಸೌಲಭ್ಯಕ್ಕಾಗಿಯೇ ರೂಪಿಸಲಾದ ಯರಗೋಳ್‌ ನೀರಾವರಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ಎರಡೂ ಪಕ್ಷಗಳು ಎಡವಿವೆ. ಆ ಯೋಜನೆ ಜಾರಿಯಾಗಿದ್ದರೆ ಸಮಸ್ಯೆ ಬಗೆಹರಿದು, ನೀರಿಗಾಗಿ ಖರ್ಚು ಮಾಡುತ್ತಿರುವ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತಿತ್ತು – ಎಸ್‌.ಆರ್‌.ಮುರಳಿಗೌಡ, ನಗರಸಭೆ 14ನೇ ವಾರ್ಡ್‌ನ ಬಿಜೆಪಿ ಸದಸ್ಯ

**

ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದರೂ ನೀರಿನ ಬವಣೆ ತಪ್ಪಿಲ್ಲ. ಮನೆಯ ನಲ್ಲಿಯಲ್ಲಿ ನೀರು ಬಂದು ಒಂದೂವರೆ ತಿಂಗಳಾಗಿದೆ

– ಮಂಜುಳಾ, ಪಾಲಸಂದ್ರ ಲೇಔಟ್‌ ನಿವಾಸಿ.

**

ಮನೆಯ ಕೊಳಾಯಿಯಲ್ಲಿ ಬರುವ ನೀರು ಕಲುಷಿತವಾಗಿರುತ್ತದೆ. ಮಣ್ಣು, ಕಸ ಕಡ್ಡಿ ಮಿಶ್ರಿತವಾಗಿದೆ. ನಗರದಲ್ಲಿ ನೀರಿನ ಘಟಕ ನಿರ್ಮಿಸಿದ್ದರೂ ಸೇವೆಗೆ ಮುಕ್ತಗೊಳಿಸಿಲ್ಲ – ಆರ್‌.ಜಿ.ಪ್ರಭಾಕರ್‌, ಲೇಔಟ್‌ ನಿವಾಸಿ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.