ಶುಕ್ರವಾರ, ಡಿಸೆಂಬರ್ 6, 2019
25 °C

ಬಿಜೆಪಿ ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್‌ ಘೋಷಿಸಲು ಬೆಂಬಲಿಗರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್‌ ಘೋಷಿಸಲು ಬೆಂಬಲಿಗರ ಆಗ್ರಹ

ಬಳ್ಳಾರಿ: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ತಿಪ್ಪೇಸ್ವಾಮಿ ಅವರಿಗೇ ಟಿಕೆಟ್ ಘೋಷಿಸಬೇಕು ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ತಿಪ್ಪೇಸ್ವಾಮಿ ಅವರಿಗೇ ಟಿಕೆಟ್ ನೀಡುವಂತೆ ಆಗ್ರಹಿಸಿ ಅವರ ಸಾವಿರಾರು ಬೆಂಬಲಿಗರು ಬುಧವಾರ ಸಂಜೆ ಸಂಸದ ಬಿ. ಶ್ರೀರಾಮಲು ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.

ಸಂಜೆ 5ರ ವೇಳೆಗೆ ಸುಮಾರು 80 ವಾಹನಗಳಲ್ಲಿ ಬಂದ ಬೆಂಬಲಿಗರನ್ನು ಎಪಿಎಂಸಿ ಚೆಕ್‌ಪೋಸ್ಟ್‌ ಬಳಿಯೇ ಪೊಲೀಸರು ತಡೆದು ನಿಲ್ಲಿಸಿದರು. ಅಲ್ಲಿ ಮುಖಂಡರೊಂದಿಗೆ ಚರ್ಚಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌, ‘ಸಂಸದರು ಇಲ್ಲದಿರುವುದರಿಂದ ಮನೆಗೆ ಮುತ್ತಿಗೆ ಹಾಕಲು ಅವಕಾಶ ಕೊಡುವುದಿಲ್ಲ. ಶಾಂತಿಯುತವಾಗಿ ಕೊಂಚ ದೂರ ಮೆರವಣಿಗೆ ನಡೆಸಿ ವಾಪಸಾಗಿ’ ಎಂದು ಸ್ಪಷ್ಟಪಡಿಸಿದರು.

ಅವರ ಮಾತಿಗೆ ಸಮ್ಮತಿ ಸೂಚಿಸಿದ ಮುಖಂಡರು, ಎಚ್‌.ಆರ್‌. ಗವಿಯಪ್ಪ ವೃತ್ತದವರೆಗೂ ನಡೆದು ಬಂದರು. ಅಲ್ಲಿಂದ ಅವರು ಮುಂದಕ್ಕೆ ಹೋಗದಂತೆ ತಡೆಯಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬುಡಾ ಆವರಣದ ಮೂಲಕ ಬೆಂಬಲಿಗರು ವಾಪಸಾದರು.

ವಂಚನೆ: ‘ತಿಪ್ಪೇಸ್ವಾಮಿ ಅವರಿಗೇ ಟಿಕೆಟ್‌ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದ ಶ್ರೀರಾಮುಲು ಅವರೇ ಸ್ಪರ್ಧಿಸಲು ಮುಂದಾಗಿರುವುದು ಸರಿಯಲ್ಲ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ಘೋಷಣೆಯಾಗುವವರೆಗೂ ಪ್ರತಿಭಟನೆ ನಡೆಸುತ್ತೇವೆ’ ಎಂದು ಮುಖಂಡ ಜೆ.ಎಸ್‌. ದಿವಾಕರ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಮುಖಂಡರಾದ ಬೋರಣ್ಣ ಚವಳಕೆರೆ, ಎನ್‌. ದೇವರಪ್ಪ, ಪಾಪಣ್ಣ ನೀರಗುಂಟಿ, ಬಿ. ಬಸವರಾಜ ಮತ್ತು ಪ್ರವೀಣ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)