ಶನಿವಾರ, ಡಿಸೆಂಬರ್ 14, 2019
20 °C

ಕಾವೇರಿ ನೀರಿಗಾಗಿ ತಮಿಳುನಾಡಿನ ಪ್ರಹಸನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನೀರಿಗಾಗಿ ತಮಿಳುನಾಡಿನ ಪ್ರಹಸನ

ಬ್ರಿಟಿಷ್ ಸರ್ಕಾರ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಎಸಗಿದ್ದ ಐತಿಹಾಸಿಕ ಅನ್ಯಾಯವನ್ನು ಸ್ವತಂತ್ರ ಭಾರತದ ಕಾವೇರಿ ಜಲವಿವಾದ ನ್ಯಾಯಮಂಡಳಿಯೂ ಮುಂದುವರೆಸಿತ್ತು. ಸುಪ್ರೀಂ ಕೋರ್ಟ್ ಕಳೆದ ಫೆಬ್ರುವರಿ 16ರಂದು ನೀಡಿದ್ದ ತೀರ್ಪು ರಾಜ್ಯದ ಈ ಐತಿಹಾಸಿಕ ಗಾಯದ ಮೇಲೆ ಬರೆ ಎಳೆಯಲಿಲ್ಲ ಎಂಬುದೇ ದೊಡ್ಡ ಸಮಾಧಾನವಾಗಿತ್ತು. ಬದಲಾಗಿ ಕೊಂಚವಾದರೂ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿ ನೋವನ್ನು ತುಸು ಶಮನಗೊಳಿಸಿತ್ತು. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗೆ ಕಾವೇರಿ ನೀರು ಹಂಚಿಕೆ ಮಾಡಿದ ತನ್ನ ಅಂತಿಮ ತೀರ್ಪಿನ ಜಾರಿಗೆ ಆರು ವಾರಗಳ ಒಳಗಾಗಿ 'ಸೂಕ್ತ ಯೋಜನೆ'ಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಈ ನಿರ್ದೇಶನವನ್ನು ಮಾರ್ಚ್ 29ರ ವೇಳೆಗೆ ಕೇಂದ್ರ ಸರ್ಕಾರ ಪಾಲಿಸಬೇಕಿತ್ತು. ಬೇಕೆಂದೇ ವಿಳಂಬಗೊಳಿಸಿ ನ್ಯಾಯಾಂಗ ನಿಂದನೆ ಎಸಗಿದೆ ಎಂದು ತಮಿಳುನಾಡು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮಿಳುನಾಡಿನ ಅಹವಾಲನ್ನು ಆಲಿಸಿದ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಂಬರುವ ಮೇ 3ರೊಳಗೆ ಕರಡು ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ, ಆ ನಂತರ ನೀರು ಹಂಚಿಕೆ ಜಾರಿ ಕುರಿತು ತಾನು ಅಂತಿಮ ತೀರ್ಮಾನ ಪ್ರಕಟಿಸುವುದಾಗಿಯೂ ನ್ಯಾಯಾಲಯ ಇದೇ ಏಪ್ರಿಲ್ ಒಂಬತ್ತರಂದು ಹೇಳಿದೆ. ರಾಜಕೀಯ ಸಾಧಕ ಬಾಧಕಗಳನ್ನು ಹೊಂದಿರುವ ಈ ವಿಚಾರ ಕುರಿತು ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯ ವಿಧಾನಸಭೆ ಚುನಾವಣೆ ನಡುವೆಯೇ ಯೋಜನೆ ಸಲ್ಲಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಕಾವೇರಿ ನೀರಿನಲ್ಲಿ ಸಿಂಹಪಾಲನ್ನು ಪಡೆದಿರುವ ತಮಿಳುನಾಡು, ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ತೋಳು ತಿರುಚುವ ಅಕ್ರಮಣಕಾರಿ ನೀತಿಯನ್ನು ಅನುಸರಿಸುತ್ತ ಬಂದಿದೆ. ಈಗಲೂ ಅದೇ ಬಗೆಯ ರಾಜಕೀಯ ನಾಟಕ ತಮಿಳುನಾಡಿನಲ್ಲಿ ನಡೆದಿದೆ. ನೀರಿನ ಅಗತ್ಯ ಇಲ್ಲದಿದ್ದಾಗಲೂ ದೊಡ್ಡ ಸದ್ದುಗದ್ದಲ ಎಬ್ಬಿಸಿದೆ. ಫೆಬ್ರುವರಿ- ಮೇ ಅವಧಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಅವಕಾಶವೇ ಇಲ್ಲ. ನದಿಯ ಹರಿವನ್ನು ಕಾಪಾಡಿಕೊಳ್ಳುವ ಪರಿಸರ ಸಂರಕ್ಷಣೆಯ ಉದ್ದೇಶಕ್ಕಷ್ಟೇ ಕನಿಷ್ಠ ಪ್ರಮಾಣದ ಬಿಡುಗಡೆ ಸೀಮಿತ. ನೀರಾವರಿ ಚಟುವಟಿಕೆಗಳಿಗೆ ನೀರು ಬಿಡಲು ಅವಕಾಶ ಇರುವುದು ಜೂನ್‌ನಿಂದ ಜನವರಿ ತನಕ ಮಾತ್ರ ಎಂಬುದಾಗಿ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಕಾರ್ಯದರ್ಶಿಯೇ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದಾಗಲೂ ಉಪವಾಸ ಪ್ರಹಸನದ ನಂತರ ನ್ಯಾಯಾಲಯದ ಮೆಟ್ಟಿಲೇರಿ ಈಗ ಪ್ರತಿಭಟನೆ ಕಾರ್ಯಕ್ರಮಗಳ ಹಾದಿಯನ್ನು ಹಿಡಿದಿರುವುದು ವಿಷಾದಕರ. ತಮಿಳು ಗುಂಪೊಂದು ಒಡ್ಡಿದ ಬೆದರಿಕೆಯ ಕಾರಣ ಚೆನ್ನೈನಲ್ಲಿ  ನಡೆಯಬೇಕಿದ್ದ ಐ.ಪಿ.ಎಲ್. ಕ್ರಿಕೆಟ್ ಪಂದ್ಯಗಳನ್ನು ಬೇರೆ ನಗರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕ್ರೀಡೆಗೂ ಕಾವೇರಿ ನೀರಿಗೂ ತಳಕು ಹಾಕಬಾರದಿತ್ತು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳೊಂದಿಗೆ ಐ.ಪಿ.ಎಲ್. ಕ್ರಿಕೆಟ್ ಪಂದ್ಯಗಳಿಗೆ ಯಾವ ಸಂಬಂಧವೂ ಇಲ್ಲ. ಈ ಪಂದ್ಯಗಳನ್ನು ಗುರಿಯಾಗಿಸಿ ಪ್ರಚಾರ ಪಡೆಯುವ ಕೀಳು ಅಭಿರುಚಿಯ ಈ ತಂತ್ರ ಯಶಸ್ವಿಯಾಗಿದೆ. ಮುಂಬರುವ ದಿನಗಳಿಗೆ ಪೂರ್ವನಿದರ್ಶನ ಆಗಕೂಡದು.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ‘ಸ್ಕೀಂ’ ರೂಪಿಸಿ ಎಂದಷ್ಟೇ ಹೇಳಿದೆ. ನ್ಯಾಯಾಲಯ ಹೇಳಿರುವ ಸ್ಕೀಂ ಮತ್ತು ನ್ಯಾಯಮಂಡಳಿ ಶಿಫಾರಸು ಮಾಡಿರುವ 'ನಿರ್ವಹಣಾ ಮಂಡಳಿ'ಯ ಸ್ವರೂಪ, ಕಾರ್ಯವ್ಯಾಪ್ತಿ, ಅಧಿಕಾರ ಒಂದೇ ಆಗಿರುತ್ತದೆಯೇ ಅಥವಾ ಬೇರೆಯೇ ಎಂಬ ಸಂಗತಿ ಇನ್ನೂ ಸ್ಪಷ್ಟವಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕರ್ನಾಟಕ ಬಹಳ ಹಿಂದೆಯೇ ತನ್ನ ಆತಂಕ ಪ್ರಕಟಿಸಿತ್ತು. ಜಲಾಶಯಗಳ ನಿಯಂತ್ರಣವು ಸಂವಿಧಾನದಲ್ಲಿ ರಾಜ್ಯಾಧಿಕಾರದ ಪಟ್ಟಿಗೆ ಸೇರಿದ ವಿಷಯ. ನ್ಯಾಯಮಂಡಳಿ ಶಿಫಾರಸು ಮಾಡಿರುವ ಕಾವೇರಿ ಜಲ ನಿರ್ವಹಣಾ ಮಂಡಳಿ ಮತ್ತು ನಿಯಂತ್ರಣ ಸಮಿತಿಯ ಅಧಿಕಾರಗಳು ಮತ್ತು ಕಾರ್ಯಗಳು ರಾಜ್ಯ ಸರ್ಕಾರದ ಸಂವಿಧಾನದತ್ತ ಅಧಿಕಾರದಲ್ಲಿ ಗಂಭೀರ ಹಸ್ತಕ್ಷೇಪ ನಡೆಸುತ್ತವೆ ಎಂಬ ರಾಜ್ಯದ ಆತಂಕವನ್ನು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಗಮನದಲ್ಲಿರಿಸಿಕೊಳ್ಳಬೇಕು.

ಪ್ರತಿಕ್ರಿಯಿಸಿ (+)