ಮತದಾನ ಜಾಗೃತಿಗೆ ಸುಮಧುರ ಹಾಡು

7
ಜಿಲ್ಲೆಯ ವಿವಿಧ ಸರ್ಕಾರಿ ಬಸ್ ನಿಲ್ದಾಣ, ಕಾರವಾರ ಆಕಾಶವಾಣಿಯಲ್ಲಿ ಒಂದು ತಿಂಗಳು ಪ್ರಸಾರ

ಮತದಾನ ಜಾಗೃತಿಗೆ ಸುಮಧುರ ಹಾಡು

Published:
Updated:

ಕಾರವಾರ: ‘ಮತವನು ನೀಡುತಲಿ.. ಜೀವನ ಬದಲಿಸಬಹುದಿಲ್ಲಿ... ಪ್ರಜೆಗಳು ನಾವು, ಪ್ರಭುಗಳು ನಾವು...’ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿರುವ ಚುನಾವಣೆಯಲ್ಲಿ ಮತದಾನ ಯಾಕೆ ಮಾಡಬೇಕು ಎಂಬ ಅರಿವು ಮೂಡಿಸುವ ಈ ಹಾಡು ಒಂದೆರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ಕೇಳಿಬರಲಿದೆ.

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಸ್ಯವಿಜ್ಞಾನ ವಿಭಾಗದ ಮುಖ್ಯಸ್ಥ ಶಿವಾನಂದ ಭಟ್ ಅವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಇಂಪಾಗಿ ಹಾಡಿದ್ದಾರೆ. ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನ ಸಹಭಾಗಿತ್ವ (ಸ್ವೀಪ್) ಯೋಜನೆಯಡಿ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಈ ಹಾಡು ಬಳಕೆಯಾಗಲಿದೆ. ಇದರ ಭಾಗವಾಗಿ ಇನ್ನೊಂದೆರಡು ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರಮುಖ ಸರ್ಕಾರಿ ಬಸ್‌ ನಿಲ್ದಾಣಗಳಲ್ಲಿ, ಕಾರವಾರ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ಶಿವಾನಂದ ಭಟ್, ‘ಐದು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಈ ಹಾಡನ್ನು ಬರೆದು ಗಿಟಾರ್ ನುಡಿಸುತ್ತ ಹಾಡಿದ್ದೆ. ಅದನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರು ಕಲ್ಪನಾ ಕೆರವಡಿಕರ್ ಬಹಳ ಮೆಚ್ಚಿಕೊಂಡಿದ್ದರು’ ಎಂದು ಸ್ಮರಿಸಿದರು.

‘ಈಚೆಗೆ ಮತ್ತೊಮ್ಮೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಪ್ರಾಂಶುಪಾಲರು, ‘ಶಿವಾನಂದ ಭಟ್ ಅವರು ಮತದಾನದ ಕುರಿತು ಬರೆದಿರುವ ಹಾಡನ್ನು ಹಾಡಲಿದ್ದಾರೆ’ ಎಂದು ಮುನ್ಸೂಚನೆ ನೀಡದೇ ಪ್ರಕಟಿಸಿದರು. ನಾನು ಅಲ್ಲಿ ಹಾಡಿದ್ದನ್ನು ಕೇಳಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಖುಷಿಪಟ್ಟರು. ನಂತರ ವಾರ್ತಾ ಇಲಾಖೆ ಅಧಿಕಾರಿ ಹಿಮಂತ್ ರಾಜು ಅವರು ಸಂಗೀತ ಸಂಯೋಜನೆ ಮಾಡಿಕೊಡುವಂತೆ ಹೇಳಿದರು. ಅದರಂತೆ ಮೂಲ ಕವನಕ್ಕೆ ಕೆಲವೊಂದು ಬದಲಾವಣೆ ಮಾಡಿ ಕುಮಟಾದ ‘ನಿನಾದ’ ಸ್ಟುಡಿಯೋದಲ್ಲಿ ಧ್ವನಿಮುದ್ರಿಸಲಾಯಿತು. ಒಟ್ಟು 3.45 ನಿಮಿಷದ ಹಾಡು ಮೂಡಿಬಂದಿದೆ’ ಎಂದು ತಿಳಿಸಿದರು.

ಇದೇ ಹಾಡಿನ ತುಣುಕನ್ನು ಬಳಸಿಕೊಂಡು ‘ಜಿಂಗಲ್ಸ್’ (ಜಾಗೃತಿಯ ಕಿರು ಸಂದೇಶ) ಸಿದ್ಧಪಡಿಸಲಾಗಿದೆ. ಬಸ್‌ ನಿಲ್ದಾಣಗಳಲ್ಲಿ ಮಾಹಿತಿ ಉದ್ಘೋಷಣೆ ವ್ಯವಸ್ಥೆಯನ್ನು ಗುತ್ತಿಗೆ ಪಡೆದುಕೊಂಡಿರುವ ‘ವೃತ್ತಿ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯವರೇ ಇವುಗಳನ್ನು ಪ್ರಸಾರ ಮಾಡಲಿದ್ದಾರೆ. ದಿನವೊಂದಕ್ಕೆ 24 ಬಾರಿಯಂತೆ

30 ದಿನ ಪ್ರಯಾಣಿಕರಿಗೆ ಅರಿವು ಮೂಡಿಸಲಿವೆ. ಈ ಹಾಡು ಜಿಲ್ಲಾಡಳಿತದ ವೆಬ್‌ಸೈಟ್ uttarakannada.nic.govನಲ್ಲಿ ಕೂಡ ಶೀಘ್ರವೇ ಲಭ್ಯವಿರಲಿದ್ದು, ಆಸಕ್ತರು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ತಿಳಿಸಿದ್ದಾರೆ.

ಜಾಗೃತಿ ಹಾಡಿನ ಸಾಹಿತ್ಯ

ಮತವನು ನೀಡುತಲಿ ಜೀವನ ಬದಲಿಸಬಹುದಿಲ್ಲಿ

ಪ್ರಜೆಗಳು ನಾವು, ಪ್ರಭುಗಳು ನಾವು

ಸಕಲರು ಸಮರಿಲ್ಲಿ...

ಆಯ್ಕೆಯು ನಮ್ಮದು, ಅವಕಾಶ ನಮ್ಮದು

ನೀಡುತ ಮತವನು ಪಡೆಯೋಣ ಹಿತವನು

ಸಮತೆಯ ತಳಹದಿ ರೂಪಿಸಬೇಕಿದೆ

ಸ್ವಸ್ಥ ಸಮಾಜದ ಗುಣಸೂತ್ರವನು...

ಹದಿನೆಂಟು ತುಂಬಲು ನೀಡುತ ಮತವನು

ಆರಿಸಿ ನೀನು ಹಿತಚಿಂತಕರನು

ಭವ್ಯ ಭಾರತಕೆ ಶ್ರಮಿಸುತ ನಾವೆಲ್ಲ

ಬಡವರ ಬಡವಣೆಯ ನೀಗಿಸಬಹುದಲ್ಲ...

**

ಈ ಹಾಡು ಸದ್ಯಕ್ಕೆ ನಮ್ಮ ಜಿಲ್ಲೆಗೆ ಸೀಮಿತವಾಗಿರುತ್ತದೆ. ಇದರ ಮೂಲಕ ಮತದಾನದ ಜಾಗೃತಿ ಮೂಡಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ – ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ‌.

**

ರೇಡಿಯೊ ಕೇಂದ್ರಕ್ಕೆ ಮತ್ತು ಬಸ್ ನಿಲ್ದಾಣಗಳಿಗೆ 30 ಸೆಕೆಂಡ್‌ಗಳ ‘ಜಿಂಗಲ್ಸ್’ ಸಿದ್ಧಪಡಿಸಲಾಗಿದೆ. ‘ಸ್ವೀಪ್’ ಕಾರ್ಯಕ್ರಮಗಳಲ್ಲಿ ಹಾಡು ಬಳಸಿಕೊಳ್ಳಲಾಗುವುದು – ಎಲ್.ಚಂದ್ರಶೇಖರ ನಾಯಕ, ಜಿ.ಪಂ.ಸಿಇಒ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry