ಭಾನುವಾರ, ಡಿಸೆಂಬರ್ 15, 2019
25 °C
ನೀರಿನ ಅಭಾವ: ತೋಟ ಉಳಿಸಿಕೊಳ್ಳಲು ಹರಸಾಹಸ

ಅಡಿಕೆ ಬೆಳೆಗಾರರ ಸಂಕಷ್ಟ

ಉಮೇಶ್ ಕುಮಾರ್.ಜೆ.ಓ Updated:

ಅಕ್ಷರ ಗಾತ್ರ : | |

ಅಡಿಕೆ ಬೆಳೆಗಾರರ ಸಂಕಷ್ಟ

ಅಜ್ಜಂಪುರ: ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಬಿದ್ದ ಮಳೆಯಿಂದಾಗಿ ಕೆರೆ ಕಟ್ಟೆಗಳು ಬರಿದಾಗಿದ್ದು, ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳೂ ಬತ್ತಿ ಹೋಗಿವೆ. ಹೀಗಾಗಿ ಅಜ್ಜಂಪುರ ತಾಲ್ಲೂಕಿನ ಹಲವೆಡೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ವರ್ಷ ಇದುವರೆಗೆ ಒಂದು ಮಳೆಯೂ ಆಗಿಲ್ಲ. ಹೀಗಾಗಿ ನೂತನ ತಾಲ್ಲೂಕು ಅಜ್ಜಂಪುರ ಸುತ್ತಮುತ್ತಲಿನ ಭಾಗಗಳಲ್ಲಿ ತೆಂಗು-ಅಡಿಕೆ ತೋಟಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಪ್ರಮುಖ ಆದಾಯದ ಮೂಲ ಮತ್ತು ಜೀವನಾಧಾರವಾದ ತೋಟಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದರೆ, ರೈತರು ತಮ್ಮ ಅಡಿಕೆ-ತೆಂಗು ತೋಟ ಉಳಿಸಿಕೊಳ್ಳಲು ಕೈಗೊಳ್ಳಬಹುದಾದ ಕ್ರಮಗಳ ಚಿಂತನೆಯಲ್ಲಿ ತೊಡಗಿದ್ದಾರೆ.

‘ನೀರು ಸಿಗುತ್ತದೆ ಎಂಬ ಆಶಾ ಭಾವನೆಯಲ್ಲಿ ₹5 ಲಕ್ಷ ವೆಚ್ಚ ಮಾಡಿ ಒಂದೇ ತೋಟದಲ್ಲಿ ಐದು ಕೊಳವೆ ಬಾವಿ ಕೊರೆಯಿಸಿದ್ದೇನೆ. ಆದರೆ ನೀರು ಮಾತ್ರ ಸಿಕ್ಕಿಲ್ಲ. ಜೀವನಕ್ಕೆ ಆಧಾರವಾದ ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆಹೋಗುವಂತಾಗಿದೆ. 4,500 ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ನೀರಿಗೆ ₹ 2 ಸಾವಿರದಂತೆ ಪ್ರತಿ ಎಕರೆಗೆ ವಾರಕ್ಕೊಮ್ಮೆ ಕನಿಷ್ಠ 15-20 ಟ್ಯಾಂಕರ್‌ ನೀರಿನ ಅಗತ್ಯವಿದೆ. ₹ 20 ಸಾವಿರ ವೆಚ್ಚ ಮಾಡಬೇಕಾಗಿದೆ. ಇದು ನಮ್ಮಂತಹ ಸಣ್ಣ ರೈತರನ್ನು ಆರ್ಥಿಕವಾಗಿ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ’ ಎನ್ನುತ್ತಾರೆ ಬಗ್ಗವಳ್ಳಿಯ ರೈತ ಬಸವರಾಜು.

ಅಜ್ಜಂಪುರ-ಶಿವನಿ ಹೋಬಳಿ ಭಾಗದಲ್ಲಿ ಸುಮಾರು 4,500 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ತೆಂಗು, 3 ಸಾವಿರ ಹೆಕ್ಟೇರಿನಲ್ಲಿ ಅಡಿಕೆ ಬೆಳೆಯಲಾಗಿದೆ. ಈ ಪೈಕಿ ಹೆಚ್ಚಿನ ಪ್ರಮಾಣದ ಅಡಿಕೆ ತೋಟಗಳಿರುವ ನಾಗವಂಗಲ - ಕುಡ್ಲೂರು-ಕೊರಟೀಕೆರೆ ಭಾಗದಲ್ಲಿ ನೀರಿನ ಕೊರತೆ ಅಧಿಕವಾಗಿದೆ. ಹೀಗಿದ್ದರೂ ರೈತರು ಟ್ಯಾಂಕರ್ ಮೂಲಕ ಅಡಿಕೆಗೆ ನೀರು ಪೂರೈಸಿ, ತೋಟ ಉಳಿಸಿಕೊಂಡಿದ್ದಾರೆ.

‘ಅತ್ತಿಮೊಗ್ಗೆ-ಚಿಣ್ಣಾಪುರ-ಬೇಗೂರು-ಚನ್ನಾಪುರ ಗ್ರಾಮಗಳಲ್ಲಿಯ ಕೆಲವು ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ. ನಮ್ಮ ವೀಕ್ಷಣೆಯಲ್ಲಿ ಸುಮಾರು 50 ಹೆಕ್ಟೇರ್‌ನಷ್ಟು ತೋಟ ನೀರಿಲ್ಲದೇ ಹಾಳಾಗಿರುವುದು ಕಂಡು ಬಂದಿದೆ’ ಎನ್ನುತ್ತಾರೆ ಸಹಾಯಕ ತೋಟಗಾರಿಕಾ ಅಧಿಕಾರಿ ಲಿಂಗರಾಜು.

ಪ್ರತಿಕ್ರಿಯಿಸಿ (+)