ಶನಿವಾರ, ಡಿಸೆಂಬರ್ 14, 2019
20 °C
ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವಿರೋಧಿ ಕೃತ್ಯ

ಬಿಜೆಪಿ ಮುಖಂಡರ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಮುಖಂಡರ ಉಪವಾಸ ಸತ್ಯಾಗ್ರಹ

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ಗದ್ದಿಗೌಡರ ಹೋರಾಟಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಬಿಜೆಪಿ ಮುಖಂಡರು ಬೆಂಬಲ ನೀಡಿ ತಾವೂ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಪಿ.ಸಿ.ಗದ್ದಿಗೌಡರ, ‘ವಿರೋಧ ಪಕ್ಷಗಳ ಹಠಮಾರಿ ಧೋರಣೆಯಿಂದ ಸಂಸತ್‌ನ ಕಲಾಪ ಹಾಳಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಸಹಿಸದೇ ವಿರೋಧ ಪಕ್ಷಗಳು ಕಲಾಪ ನಡೆಸಲು ಅಸಹಕಾರ ತೋರುತ್ತಿವೆ. ಬಜೆಟ್‌ ಮೇಲಿನ ಚರ್ಚೆಗೆ ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ, ಸಂಸತ್‌ ಅಧಿವೇಶನ ವ್ಯರ್ಥವಾಗಿದೆ. ಇದೆಲ್ಲಾ ಪ್ರಜಾಪ್ರಭುತ್ವ ವಿರೋಧಿ ಧೋರಣೆ’ ಎಂದು ದೂರಿದರು.

‘ಸಂಸತ್‌ ಕಲಾಪ ನಡೆಯಲು ಬಿಡದ ಕಾಂಗ್ರೆಸ್‌ ಸಂಸದರ ನಡಾವಳಿಯನ್ನು ದೇಶಾದ್ಯಂತ ಖಂಡಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ದೇಶದಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಸಂಸದರು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ. ವಿರೋಧ ಪಕ್ಷಗಳ ಧೋರಣೆಯನ್ನು ದೇಶದ ಜನರಿಗೆ ಮನದಟ್ಟು ಮಾಡಲು ಪ್ರಧಾನಮಂತ್ರಿ ಕೈಗೊಂಡಿರುವ ಒಂದು ದಿನದ ಉಪ ವಾಸ ಸತ್ಯಾಗ್ರಹ ಬೆಂಬಲಿಸಿ ನಾನೂ ಇಲ್ಲಿ ಪ್ರತಿಭಟನೆಗೆ ಕುಳಿತಿರುವುದಾಗಿ’ ಹೇಳಿದರು.

‘ಬಜೆಟ್ ಮೇಲೆ ರಚನಾತ್ಮಕ ಚರ್ಚೆ ನಡೆಸದೇ, ಅದಕ್ಕೆ ಒಪ್ಪಿಗೆ ನೀಡುವಂತಹ ದುಃಸ್ಥಿತಿಗೆ ದೇಶವನ್ನು ತಂದಿರುವ ಶ್ರೇಯ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಸದನದಲ್ಲಿ ಎಲ್ಲ ರೀತಿಯ ಚರ್ಚೆಗೂ ಸಿದ್ಧವಿದ್ದರೂ ಕೂಡ ಚರ್ಚೆಗೆ ಅವಕಾಶ ಕೊಡದೆ ಗದ್ದಲ–ಗಲಾಟೆ ಮಾಡಿ ಸಂಸತ್ ಅಧಿವೇಶನದ ಸಮಯವನ್ನು ಹಾಳುಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಎಂ.ವಿ.ಬನ್ನಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಬಾಂಢಗೆ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಅಶೋಕ ಲಿಂಬಾವಳಿ, ಮಲ್ಲಿಕಾರ್ಜುನ ಹಂಡಿ, ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಯಂಕಂಚಿ, ಜ್ಯೋತಿ ಭಜಂತ್ರಿ, ಲಕ್ಷ್ಮೀ ಪೀರಶೆಟ್ಟಿ, ಭಾಗ್ಯಶ್ರೀ ಹಂಡಿ, ಮಾಲಾ ಮೇಲಾಡ್ ಇದ್ದರು.

ಪ್ರತಿಕ್ರಿಯಿಸಿ (+)