7
ಸನ್‌ಸೆರಾ ಪ್ರತಿಷ್ಠಾನದ ವತಿಯಿಂದ ಕ್ಯಾಲಸನಹಳ್ಳಿ ಕೆರೆ ಪುನಶ್ಚೇತನ : ರೈತರ ಮೊಗದಲ್ಲಿ ಮಂದಹಾಸ

ಬೇಸಿಗೆಯಲ್ಲಿ ಬರಿದಾಗುತ್ತಿದ್ದ ಕೆರೆಯಲ್ಲಿ ಈಗಲೂ ನೀರು

Published:
Updated:
ಬೇಸಿಗೆಯಲ್ಲಿ ಬರಿದಾಗುತ್ತಿದ್ದ ಕೆರೆಯಲ್ಲಿ ಈಗಲೂ ನೀರು

ಬೆಂಗಳೂರು: ಬೇಸಿಗೆಯ ರಣ ಬಿಸಿಲಿಗೆ ಬರಿದಾಗುತ್ತಿದ್ದ ಕ್ಯಾಲಸನಹಳ್ಳಿ ಕೆರೆಯಲ್ಲೀಗ ನೀರು ನಳನಳಿಸುತ್ತಿದೆ. ಅಂತರ್ಜಲ ವೃದ್ಧಿಯಾಗಿದ್ದು, ಬತ್ತಿಹೋಗಿದ್ದ ಕೊಳವೆಬಾವಿಗಳಿಗೆ ಮರುಜೀವ ಸಿಕ್ಕಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಎಲೆಕ್ಟ್ರಾನಿಕ್‌ ಸಿಟಿಯಿಂದ ಆರು ಕಿ.ಮೀ.ದೂರದಲ್ಲಿರುವ ಕ್ಯಾಲಸನಹಳ್ಳಿಯು ಆನೇಕಲ್‌ ತಾಲ್ಲೂಕಿಗೆ ಸೇರಿದೆ. ಆಟೋಮೊಟಿವ್‌ ಹಾಗೂ ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಸನ್‌ಸೆರಾ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ‘ಸನ್‌ಸೆರಾ ಪ್ರತಿಷ್ಠಾನ’ವು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಈ ಕೆರೆಯನ್ನು ಪುನಶ್ಚೇತನಗೊಳಿಸಿತ್ತು. 2017ರ ಏಪ್ರಿಲ್‌ 20ರಂದು ಕಾಮಗಾರಿ ಆರಂಭಿಸಿ ಜೂನ್‌ 31ಕ್ಕೆ ಪೂರ್ಣಗೊಳಿಸಿತ್ತು.

ನಗರದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿಯು 2ರಿಂದ 3 ವರ್ಷಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆದರೆ, ಸನ್‌ಸೆರಾ ಪ್ರತಿಷ್ಠಾನದವರು ಈ ಜಲಮೂಲವನ್ನು ಕೇವಲ 70 ದಿನಗಳಲ್ಲಿ ಪುನರುಜ್ಜೀವನಗೊಳಿಸಿರುವುದು ವಿಶೇಷ. ಆದರೆ, ಸಾಕಷ್ಟು ಸವಾಲು ಹಾಗೂ ತೊಡಕುಗಳು ಎದುರಿಸಿ ಜಲಮೂಲಕ್ಕೆ ಕಾಯಕಲ್ಪ ನೀಡಲಾಗಿದೆ.

ಕೆರೆಯ ವಿಶೇಷತೆಗಳು: 12ರಿಂದ 15 ಅಡಿ ಆಳದಷ್ಟು ಹೂಳನ್ನು ತೆರವುಗೊಳಿಸಲಾಗಿದೆ. ಜಲಮೂಲದ ಸುತ್ತಲೂ 40 ಅಡಿ ಅಗಲದ ಮಣ್ಣಿನ ರಸ್ತೆಯನ್ನು ನಿರ್ಮಿಸಲಾಗಿದೆ. ಅದರ ಅಕ್ಕಪಕ್ಕ ತಲಾ 10 ಅಡಿಗಳ ಜಾಗದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಗಿದೆ. ನೀರಿನ ಅಲೆಗಳಿಂದಾಗಿ ಮಣ್ಣಿನ ಕೊರೆತ ಉಂಟಾಗುವುದನ್ನು ತಪ್ಪಿಸುವುದಕ್ಕಾಗಿ ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಗಿದೆ. ರಾಜಕಾಲುವೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ರೈತರ ಭೂಮಿಯಿಂದ ನೀರು ಹರಿದು ಬರಲು ಪ್ರತಿ 20 ಅಡಿಗೆ ಒಂದು ಕಾಂಕ್ರೀಟ್‌ ಕೊಳವೆಯನ್ನು ಹಾಕಲಾಗಿದೆ. ಹೂಳು ಜಲಮೂಲದ ಒಡಲು ಸೇರದಿರಲು ‘ಸಿಲ್ಟ್‌ಟ್ರ್ಯಾಪ್‌’ಗಳಿವೆ. ಕೆರೆಯ ಮಧ್ಯೆ ನಡುಗಡ್ಡೆಗಳಿದ್ದು, ಹಣ್ಣು, ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

‘ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಸನ್‌ಸೆರಾ ಕಂಪನಿಯ ನಿಲುವಾಗಿತ್ತು. ಹೀಗಾಗಿ, ಸಿಎಸ್‌ಆರ್‌ ಅನುದಾನ ಬಳಸಿಕೊಂಡು ಕೆರೆಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿತ್ತು. ಕಂಪನಿಯ ಅಧ್ಯಕ್ಷ ಎಸ್‌.ಶೇಖರ್‌ ವಾಸನ್‌, ಸಿಎಸ್‌ಆರ್‌ ವಿಭಾಗದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌.ಸಿಂಘ್ವಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌.ಪ್ರೀತಂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಕಾಮಗಾರಿಗೆ ಅನುದಾನದ ಕೊರತೆ ಆಗದಂತೆ ನೋಡಿಕೊಂಡಿದ್ದರು’ ಎಂದು ಪ್ರತಿಷ್ಠಾನದ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥ ಆನಂದ ಮಲ್ಲಿಗವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ಸುತ್ತಲೂ 10 ಎಕರೆ ಜಾಗ ಒತ್ತುವರಿಯಾಗಿತ್ತು. ರೈತರು, ಬಲಾಢ್ಯರು ಹಾಗೂ ಭೂಗಳ್ಳರು ಈ ಜಾಗವನ್ನು ವಶಪಡಿಸಿಕೊಂಡಿದ್ದರು. ಅದನ್ನು ತೆರವುಗೊಳಿಸುವುದೇ ನಮ್ಮ ಮುಂದಿದ್ದ ದೊಡ್ಡ ಸವಾಲು. ಭೂಮಾಪಕರ ಮೂಲಕ ಸರ್ವೆ ನಡೆಸಿ, ಒತ್ತುವರಿ ತೆರವು ಮಾಡಲು ಮುಂದಾದೆವು. ಒತ್ತುವರಿದಾರರಿಗೆ ಹಾಗೂ ಗ್ರಾಮಸ್ಥರಿಗೆ ಕೆರೆ ಸಂರಕ್ಷಣೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಕೆರೆಗೆ ಕಾಯಕಲ್ಪ ನೀಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಈ ಅವಕಾಶ ಮತ್ತೊಮ್ಮೆ ಬರುವುದಿಲ್ಲ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದೆವು. ಇದಕ್ಕೆ ಗ್ರಾಮದ ಅನೇಕರು ಸಹಮತ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರ ಪಡೆದು ಒತ್ತುವರಿ ತೆರವುಗೊಳಿಸಿದ್ದೆವು’ ಎಂದು ವಿವರಿಸಿದರು.

**

‘ಮತ್ತೆ ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ’

ಕೆರೆ ಸುತ್ತಲೂ ಇರುವ ಮಣ್ಣಿನ ರಸ್ತೆಗೆ 40 ಎಂ.ಎಂ. ಗಾತ್ರದ ಜಲ್ಲಿಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕೆ ₹60 ಲಕ್ಷ ವೆಚ್ಚವಾಗುತ್ತದೆ. ಕೆರೆ ಕಟ್ಟೆಯ ಮೇಲೆ ಸುಮಾರು ಒಂದು ಕಿ.ಮೀ. ಉದ್ದದ ಡಾಂಬರು ರಸ್ತೆ ಇದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕೆರೆಗೆ ಉರುಳುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕಬ್ಬಿಣದ ಬೇಲಿಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ₹40 ಲಕ್ಷ ಬೇಕಾಗುತ್ತದೆ ಎಂದು ಆನಂದ ಮಲ್ಲಿಗವಾಡ ವಿವರಿಸಿದರು.

**

10 ಪಟ್ಟು ವೇಗವಾಗಿ ಬೆಳೆಯುವ ಮಿಯಾವಾಕಿ ಅರಣ್ಯ

ಹಸಿರೀಕರಣಕ್ಕೆ ಒತ್ತು ನೀಡಿರುವ ಪ್ರತಿಷ್ಠಾನವು ಜಪಾನ್‌ನಲ್ಲಿ ಅಸ್ತಿತ್ವದಲ್ಲಿರುವ ‘ಮಿಯಾವಾಕಿ ಅರಣ್ಯ’ ‍‍‍‍ಪದ್ಧತಿಯನ್ನು ಅನುಸರಿಸಿ ಗಿಡಗಳನ್ನು ಬೆಳೆಸಲಾಗಿದೆ. ಈ ವಿಧಾನದಲ್ಲಿ ಗಿಡಗಳು 10 ಪಟ್ಟು ವೇಗವಾಗಿ ಬೆಳೆಯುತ್ತವೆ. ಸಾಮಾನ್ಯ ವಿಧಾನದಲ್ಲಿ 4–5 ಅಡಿಗೆ ಒಂದು ಸಸಿ ನೆಟ್ಟರೆ, ಈ ವಿಧಾನದಲ್ಲಿ ಪ್ರತಿ ಅಡಿಗೆ ಒಂದು ಗಿಡ ನೆಡಲಾಗುತ್ತದೆ.

ಆದರೆ, ಸಣ್ಣ ಹಾಗೂ ದೊಡ್ಡ ಸಸಿಗಳನ್ನು ಬೆಳೆಸಲಾಗುತ್ತದೆ. ಪ್ರತಿ ಗಿಡಕ್ಕೂ ಸೂರ್ಯನ ಬೆಳಕು ಅಗತ್ಯವಿರುವುದರಿಂದ ಸಣ್ಣ ಸಸಿಯು ದೊಡ್ಡ ಗಿಡವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತದೆ. ಇದರ ಜತೆಗೆ, ಅವುಗಳ ತಳಭಾಗಕ್ಕೆ ಭತ್ತದ ಹುಲ್ಲನ್ನು ಹಾಕಿ ಮುಚ್ಚಲಾಗುತ್ತದೆ. ರಾತ್ರಿ ವೇಳೆ ನೀರು ಹಾಯಿಸಲಾಗುತ್ತದೆ. ಇದರಿಂದ ನೀರು ಸಂಪೂರ್ಣವಾಗಿ ಗಿಡಗಳ ಬೇರಿಗೆ ಇಳಿಯುತ್ತದೆ. ಹುಲ್ಲಿನಿಂದಾಗಿ ಸೂಕ್ಷ್ಮಜೀವಿಗಳ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ಆನಂದ ಮಲ್ಲಿಗವಾಡ ಹೇಳಿದರು.

**

ಡೆಲ್‌, ಐಬಿಎಂ, ಇನ್ಫೊಸಿಸ್‌ ಕಂಪನಿಗಳು ಸಿಎಸ್‌ಆರ್‌ ಅನುದಾನವನ್ನು ಕೆರೆಗಳ ಪುನಶ್ಚೇತನಕ್ಕೆ ಬಳಸಲು ನಿರ್ಧರಿಸಿವೆ. ಇದರ ಉಸ್ತುವಾರಿ ವಹಿಸಿಕೊಳ್ಳುವಂತೆ ಪ್ರತಿಷ್ಠಾನವನ್ನು ಕೋರಿವೆ.‌

–ಆನಂದ ಮಲ್ಲಿಗವಾಡ, ಸನ್‌ಸೆರಾ ಪ್ರತಿಷ್ಠಾನದ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥ

**

ಸರ್ಕಾರ, ಗ್ರಾಮ ಪಂಚಾಯಿತಿ ಮಾಡಬೇಕಿದ್ದ ಕೆಲಸವನ್ನು ಸನ್‌ಸೆರಾ ಪ್ರತಿಷ್ಠಾನದವರು ಮಾಡಿದ್ದಾರೆ. ಕೆರೆ ಅಭಿವೃದ್ಧಿಯಿಂದಾಗಿ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರು ಬಂದಿದೆ.

- ಎಲ್‌.ಮುನಿರಾಜಪ್ಪ, ಗ್ರಾಮದ ನಿವಾಸಿ

**

ಅಂಕಿ–ಅಂಶ

36 ಎಕರೆ: ಕ್ಯಾಲಸನಹಳ್ಳಿ ಕೆರೆ ವಿಸ್ತೀರ್ಣ

₹1.17 ಕೋಟಿ: ಜಲಮೂಲದ ಅಭಿವೃದ್ಧಿ ವೆಚ್ಚ

5: ಕೆರೆಯಲ್ಲಿ ನಿರ್ಮಿಸಿರುವ ನಡುಗಡ್ಡೆಗಳು

18 ಸಾವಿರ: ನಡುಗಡ್ಡೆ, ಜಲಮೂಲದ ಸುತ್ತಲೂ ಬೆಳೆಸಿರುವ ಗಿಡಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry