ಗುರುವಾರ , ಆಗಸ್ಟ್ 13, 2020
21 °C
ಡಾ. ಬಿ.ಆರ್. ಅಂಬೇಡ್ಕರ್‌ ಜಯಂತ್ಯುತ್ಸವ, ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿ ಸಂಭ್ರಮ

ಸಂವಿಧಾನ ಸೂರ್ಯನಿಗೆ ಸಾವಿರ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನ ಸೂರ್ಯನಿಗೆ ಸಾವಿರ ನಮನ

ಹುಬ್ಬಳ್ಳಿ: ಹಾರ–ತುರಾಯಿಗಳಿಂದ ತುಂಬಿಹೋದ ಪ್ರತಿಮೆ, ಎಲ್ಲೆಲ್ಲೂ ‘ಜೈ ಭೀಮ್‌’ ಘೋಷಣೆ, ಹಣೆಗೆ ನೀಲಿ ತಿಲಕವಿಟ್ಟುಕೊಂಡು ಸಂಭ್ರಮಿಸಿದ ಯುವಕರು, ಕೇಕ್‌ ತಿಂದು ಬಾಯಿ ಸಿಹಿ ಮಾಡಿಕೊಂಡ ಸಾರ್ವಜನಿಕರು...

ನಗರದಲ್ಲಿ ಶನಿವಾರ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ತಾಲ್ಲೂಕು ಆಡಳಿತ, ವಿವಿಧ ಪಕ್ಷಗಳು, ಸಂಘಟನೆಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಾಯಿತು. ಅಂಬೇಡ್ಕರ್‌ ಜನ್ಮದಿನವನ್ನೇ ಸಂವಿಧಾನ ರಕ್ಷಣಾ ದಿನವನ್ನಾಗಿಯೂ ಆಚರಿಸಲಾಯಿತು.

ಅಂಚೆ ಕಚೇರಿ ಬಳಿಯ ಅಂಬೇಡ್ಕರ್‌ ಪ್ರತಿಮೆಗೆ ಹಲವು ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ದಲಿತ ಸಂಘಟನೆಗಳ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಾಗೂ ತಂಪು ಪಾನೀಯ ವಿತರಿಸಲಾಯಿತು. ಅಲ್ಲದೆ, ಕೇಕ್‌ ಕತ್ತರಿಸಿ, ಸಾರ್ವಜನಿಕರಿಗೆ ಹಂಚಲಾಯಿತು. ಬಾಬಾಸಾಹೇಬರ ಕುರಿತ ಗೀತೆಗಳನ್ನು ಹಾಡಲಾಯಿತು.

ತಾಲ್ಲೂಕು ಆಡಳಿತ: ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೇ ಜಯಂತ್ಯುತ್ಸವ ಆಚರಿಸಲಾಯಿತು. ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು. ಹೆಚ್ಚುವರಿ ತಹಶೀಲ್ದಾರ್‌ ಪ್ರಕಾಶ್ ನಾಸಿ, ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ಇದ್ದರು.

ಪೌರಕಾರ್ಮಿಕರ ಸಂಘ: ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ‘ವಿಶ್ವದಲ್ಲಿಯೇ ಮನ್ನಣೆ ಪಡೆದಿರುವಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ’ ಎಂದರು

ಸೋಮು ಮೊರಬದ, ಗಂಗಮ್ಮ ಸಿದ್ರಾಮಪುರ, ಆನಂದ ಬಾವುರ, ಕಲ್ಲಪ್ಪ ಅಣ್ಣಿಗೇರಿ, ಗಂಗಾಧರ ಕಲ್ಲಮ್ಮನವರ, ರಾಮಣ್ಣ ದೊಡ್ಡಮನಿ, ಬಸವರಾಜ ದೊಡ್ಡಮನಿ, ಶರಣಪ್ಪ ಖಾನಾಪುರ, ಗಿರಿಜಮ್ಮ ಭಂಡಾರಿ ಹಾಜರಿದ್ದರು.

ಕಾರ್ಪೊರೇಶನ್‌ ಬ್ಯಾಂಕ್‌ ನೌಕರರ ಸಂಘ:ಕಾರ್ಪೊರೇಶನ್‌ ಬ್ಯಾಂಕ್‌ ಪರಿಶಿಷ್ಟ ಜಾತಿ, ಪಂಗಡದ ನೌಕರರ ಕಲ್ಯಾಣ ಸಂಸ್ಥೆ ವತಿಯಿಂದ ಶನಿವಾರ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಆಂಜನೇಯ ಅರವೇಡ, ಉಮೇಶ ಚಂದ್ರ, ಚಂದ್ರಶೇಖರ ಹಾವನೂರ, ಉಮೇಶ ಚಂದ್ರ, ಮಹೇಶ ತಡಸದ ಹಾಜರಿದ್ದರು.

ದಲಿತ ಸಂಘರ್ಷ ಸಮಿತಿ: ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಸುತಗಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಕಲಾವಿದ ಸಿದ್ಧಲಿಂಗಪ್ಪ ಗೊರವಿ ಉದ್ಘಾಟಿಸಿದರು. ಸಮಿತಿಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಿಂಗಪ್ಪ ಮಾದರ, ಮಲ್ಲಯ್ಯ ಮೂಕಶಿವಯ್ಯನವರ, ಸಿದ್ದಪ್ಪ ವಾಲೀಕಾರ, ಬಸಪ್ಪ ಮಾದರ, ಚಂದ್ರಹಾಸ ಬಂಡೇಣ್ಣವರ, ಅರ್ಜುನ ಗೊರವಿ ಇದ್ದರು.

ಭಾರತೀಯ ಮೂಲನಿವಾಸಿಗಳ ಒಕ್ಕೂಟ: ಇಲ್ಲಿನ ಗಿರಣಿ ಚಾಳದಲ್ಲಿರುವ ಶಿವಪ್ಪ ಕೌಜಗನೂರ್, ಅವರ ಕಟ್ಟಿಗೆ ಅಡ್ಡೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಶ್ವನಾಥ ಕೊರವಿ ಉದ್ಘಾಟಿಸಿದರು. ಈಶ್ವರ ತೆಗ್ಗಿ, ಶಿವಪ್ಪ ಕೌಜಗನೂರ್, ಆನಂದ ಪಟ್ಟಣಶೆಟ್ಟಿ, ಮಹಾಂತೇಶ ಡಂಗನವರ, ಕಲ್ಲೂರ ಪೂಜಾರ, ಸಿದ್ದಪ್ಪ ಅಮರಾವತಿ ಇದ್ದರು.

ಕೊರವರ ಶಿಕ್ಷಣ ಸಂಸ್ಥೆ: ಶರಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್‌ ಸ್ಮಾರಕ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಅಂಬೇಡ್ಕರ್ ಜಯಂತಿ  ಆಚರಿಸಲಾಯಿತು. ಕಾಲೇಜಿನ ಅಧ್ಯಕ್ಷ ಆರ್.ಕೆ. ಗೋಕಾಕ, ಕಾರ್ಯದರ್ಶಿ ಜಿ.ಕೆ. ಗೋಕಾಕ, ಉಪಾಧ್ಯಕ್ಷರಾದ ಅಮೃತಾ ಗೋಕಾಕ, ಹನುಮಂತಪ್ಪ ಬೆಕ್ಕಿನಕನ್ನವರ, ಪ್ರಾಚಾರ್ಯ ಎಂ.ಡಿ. ಮಟ್ಟಮನಿ, ಪಿ.ಎಸ್. ಚಪ್ಪರಮಣಿ, ಎಂ.ಐ. ನಿಂಬಾಳ ಇದ್ದರು.

ದೀನ ದಲಿತರ ಬಂಧು: ಅಂಬೇಡ್ಕರ್‌ ದೀನ ದಲಿತರ ಬಂಧು. ಈ ಸಮುದಾಯಕ್ಕೆ ಅವರು ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಹೇಳಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ ಅವರು ಮಾತನಾಡಿದರು. ಪಾಲಿಕೆ ಸದಸ್ಯ ಅಲ್ತಾಫ್‌ ಕಿತ್ತೂರ, ಸತೀಶ ಗರಗನ್ನವರ, ಮೇಘರಾಜ ಹಿರೇಮನಿ ಉಪಸ್ಥಿತರಿದ್ದರು.

ತಾಯಪ್ಪ ಶಿಕ್ಷಣ ಸಂಸ್ಥೆ: ರಾಯಾಪುರದಲ್ಲಿರುವ ತಾಯಪ್ಪ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಪ್ಪ ಕುಸುಗಲ್, ಸುಮಿತ್ರಾ ಗೋಕುಲ, ಬಸಪ್ಪ ಹುಬ್ಬಳ್ಳಿ, ಪ್ರಕಾಶ ಕುಸುಗಲ್, ಚನ್ನಪ್ಪ ಚಿಕ್ಕನವರ, ದಾನಪ್ಪ ಕುಸುಗಲ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.