ಮಂಗಳವಾರ, ಆಗಸ್ಟ್ 11, 2020
26 °C

ಕ್ರೀಡಾ ಕ್ಷಿತಿಜದ ಹೊಸ ತಾರೆಯರು...

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ಕ್ರೀಡಾ ಕ್ಷಿತಿಜದ ಹೊಸ ತಾರೆಯರು...

ನಾಲ್ಕು ವರ್ಷಗಳ ಹಿಂದೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪೂನಮ್‌ ಯಾದವ್‌ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ 63 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಮಗಳು ಪದಕ ಗೆದ್ದ ಸಂಭ್ರಮವನ್ನು ಊರಿನವರಿಗೆ ತಿಳಿಸಿ ಸಿಹಿ ಹಂಚಬೇಕು ಎಂದು ಪೂನಮ್‌ ತಂದೆಗೆ ಆಸೆಯಾಗಿತ್ತು. ಸಿಹಿ ಖರೀದಿಸಲು ಹಣ ಬೇಕಲ್ಲ ಎನ್ನುವ ಪ್ರಶ್ನೆ ಎದುರಾದಾಗ ಸಂಭ್ರಮ ಮನದಲ್ಲಿಯೇ ಉಳಿದು ಹೋಯಿತು!

ಪೂನಮ್‌ ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲೆಯ ಬನಾರಸ್‌ದವರು. ಕಡುಬಡತನದಲ್ಲಿ ಅರಳಿದ ಪ್ರತಿಭೆ. ಅಪ್ಪ ರೈತ, ಬದುಕಿಗೆ ಆಸರೆಯಾಗಿದ್ದ ಎಮ್ಮೆಗಳನ್ನು ಮಾರಾಟ ಮಾಡಿ ಮಗಳ ಕ್ರೀಡಾ ಜೀವನ ಬೆಳಗಲು ನೆರವಾಗಿದ್ದರು.

ಪಾಲಕರ ತ್ಯಾಗ ಮತ್ತು ಪೂನಮ್‌ ಕಠಿಣ ಪರಿಶ್ರಮದಿಂದ ಈಗ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ 69 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 2014ರಲ್ಲಿ 63 ಕೆ.ಜಿ. ವಿಭಾಗದಲ್ಲಿ ಕಂಚು ಪಡೆದಿದ್ದರು. ಕಾಶಿ ವಿದ್ಯಾಪೀಠ ಮತ್ತು ವಾರಣಾಸಿ ವಿಶ್ವವಿದ್ಯಾಲಯಗಳ ತಂಡಗಳನ್ನೂ ಪ್ರತಿನಿಧಿಸಿದ್ದರು.

ಈ ಬಾರಿಯ ಕಾಮನ್‌ವೆಲ್ತ್‌ ಕೂಟದ ಶೂಟಿಂಗ್‌ನ 10 ಮೀಟರ್ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಮೆಹುಲಿ ಘೋಷ್‌ ಬೆಳ್ಳಿ ಪದಕ ಜಯಿಸಿದ್ದಾರೆ. ಶೂಟಿಂಗ್‌ ತರಬೇತಿ ಆರಂಭಿಸಿದ ದಿನಗಳಲ್ಲಿ ನಡೆದ ಒಂದು ಘಟನೆ ಅವರ ಕ್ರೀಡಾ ಬದುಕಿನ ದಿಕ್ಕನ್ನೇ ಬದಲಿಸಿತು.

ಆರಂಭದ ದಿನಗಳಲ್ಲಿ ಅವರು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೆರಂಪುರೆಯಲ್ಲಿರುವ ಸೆರಂಪುರೆ ರೈಫಲ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಅದೊಂದು ದಿನ ಕ್ರೀಡಾಭ್ಯಾಸಕ್ಕೆ ಸಂಬಂಧಿಸಿದಂತೆ ಜಗಳವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಅವರನ್ನು ಕ್ಲಬ್‌ನಿಂದಲೇ ತೆಗೆದು ಹಾಕಲಾಯಿತು. ಇದನ್ನೇ ಸವಾಲಾಗಿ ಸ್ವೀಕರಿಸಿ ಒಲಿಂಪಿಯನ್‌  ಜಾಯ್ ದೀಪ್‌ ಕರ್ಮಾಕರ್‌ ಬಳಿ ತರಬೇತಿಗೆ ತೆರಳಿದರು. ರಾಷ್ಟ್ರೀಯ ಜೂನಿಯರ್‌  ತಂಡದ ಪ್ರಮುಖ ಶೂಟರ್ ಆಗಿ ಗುರುತಿಸಿಕೊಂಡರು.

ಹೀಗೆ ಪ್ರತಿ ಸಾಧಕರ ಹಿಂದೆ ಮರೆಯಲಾಗದ ಘಟನೆಗಳಿವೆ. ಆ ಸಂಕಷ್ಟದ ಸಂದರ್ಭಗಳೇ ಅವರನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸಿವೆ. ಇದರಿಂದ ಭಾರತದ ಕ್ರೀಡಾ ಕ್ಷಿತಿಜದಲ್ಲಿ ಹೊಸ ಪ್ರತಿಭೆಗಳ ಉದಯ ಹೆಚ್ಚಾಗುತ್ತಿದೆ.

ಭಾರತದಲ್ಲಿ ಶೂಟಿಂಗ್‌ ಎಂದಾಕ್ಷಣ ರಾಜ್ಯವರ್ಧನ್‌ ಸಿಂಗ್‌ ರಾಠೋಡ್‌, ಅಭಿನವ್‌ ಬಿಂದ್ರಾ, ಗಗನ್‌ ನಾರಂಗ್‌, ವಿಜಯ್‌ ಕುಮಾರ್‌, ಜಿತು ರಾಯ್‌, ರಂಜನ್‌ ಸೋಧಿ, ಅಂಜಲಿ ಭಾಗವತ್‌, ಚಿಕ್ಕಬಳ್ಳಾಪುರದ ಸುಮಾ ಶಿರೂರ ಹೀಗೆ ದಿಗ್ಗಜ ‘ಗುರಿ’ಕಾರರು ನೆನಪಾಗುತ್ತಾರೆ. ವೇಟ್‌ಲಿಫ್ಟರ್‌ಗಳಾದ ಕರ್ಣಂ ಮಲ್ಲೇಶ್ವರಿ, ರೇಣು ಬಾಲು ಚಾನು, ಪಿ. ಶೈಲಜಾ, ಸಿಂಪಲ್ ಕೌರ್‌, ಗುರುಪ್ರೀತ್‌ ಸಿಂಗ್‌ ಹೀಗೆ ಸಾಧಕರ ಸಾಲು ಕಣ್ಣ ಮುಂದೆ ಬರುತ್ತದೆ.

ಕಾಲಚಕ್ರ ಉರುಳಿದಂತೆ ಹೊಸಬರು ಕ್ರೀಡಾಲೋಕದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಇದಕ್ಕೆ ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ 16 ವರ್ಷದ ಮನು ಬಾಕರ್‌, 17 ವರ್ಷದ ಮೆಹುಲಿ ಘೋಷ್‌, 18 ವರ್ಷದ ದೀಪಕ್‌ ಲಾಥರ್ ಹೀಗೆ ಹಲವರ ಸಾಧನೆಯೇ ಸಾಕ್ಷಿ. ವೇಟ್‌ಲಿಫ್ಟರ್‌ ಪ್ರದೀಪ್‌ ಸಿಂಗ್‌ ಗೋಲ್ಡ್‌ ಕೋಸ್ಟ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ‘ಹೊಸತಾರೆ’ಗಳಿಂದ ಇನ್ನಷ್ಟು ಪದಕಗಳ ನಿರೀಕ್ಷೆಯಿದೆ. ಅಂಥ ಸಾಧಕರ ಪರಿಚಯ ಇಲ್ಲಿದೆ.

ಮನು ಭಾಕರ್‌ (16 ವರ್ಷ)

ಹರಿಯಾಣದ ಜಿಜಾರ್‌ನ ಮನು ಭಾಕರ್‌ ಈ ಬಾರಿಯ ಕಾಮನ್‌ವೆಲ್ತ್‌ನ 10 ಮೀಟರ್ಸ್ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದರು. ಪಾಲ್ಗೊಂಡ ಮೊದಲ ಕೂಟದಲ್ಲಿ ಪದಕ ಗೆದ್ದ ಹೆಗ್ಗಳಿಕೆ ಅವರದ್ದು. ಇದೇ ವರ್ಷ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಇದೇ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟು ಈ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಶೂಟರ್‌ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಹೋದ ವರ್ಷ ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, ಕೇರಳದಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಒಂಬತ್ತು ಚಿನ್ನದ ಪದಕ ಜಯಿಸಿದ್ದರು. ವಿಶ್ವಕಪ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದಿರುವ ಹೀನಾ ಸಿಧು ಅವರ ಪಾಯಿಂಟ್ಸ್‌ ದಾಖಲೆಯನ್ನೂ ಮನು ಅಳಿಸಿ ಹಾಕಿದ್ದರು. ಫೈನಲ್‌ನಲ್ಲಿ ಹೀನಾ 240.8 ಪಾಯಿಂಟ್ಸ್‌ ಕಲೆ ಹಾಕಿದ್ದರು. ಮನು ಭಾಕರ್‌ 242.3 ಪಾಯಿಂಟ್ಸ್‌ ಗಳಿಸಿದ್ದರು.ಮನು ಭಾಕರ್‌**

ಮೆಹುಲಿ ಘೋಷ್‌ (17 ವರ್ಷ)

ಇದೇ ವರ್ಷ ಜೆಕ್‌ ಗಣರಾಜ್ಯದಲ್ಲಿ ನಡೆದ ಅಂತರರಾಷ್ಟ್ರೀಯ ಜೂನಿಯರ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಒಟ್ಟು 123 ಶೂಟರ್‌ಗಳು ಭಾಗವಹಿಸಿದ್ದರು. ಇದರಲ್ಲಿ ಮೆಹುಲಿ ಘೋಷ್‌ ಒಬ್ಬರೇ ಭಾರತದ ಪರ ಫೈನಲ್‌ ಪ್ರವೇಶಿಸಿದ್ದ ಸ್ಪರ್ಧಿಯಾಗಿದ್ದರು. ಗೋಲ್ಡ್‌ ಕೋಸ್ಟ್‌ನಲ್ಲಿ ಅವರು ಬೆಳ್ಳಿ ಜಯಿಸಿದ್ದಾರೆ. ಜಾಯ್ ದೀಪ್‌ ಕರ್ಮಾಕರ್ ಶೂಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಮೆಹುಲಿ ಹೋದ ವರ್ಷ ವಿವಿಧ ರಾಷ್ಟ್ರೀಯ ಟೂರ್ನಿಗಳಲ್ಲಿ ಒಟ್ಟು ಎಂಟು ಚಿನ್ನ ಮತ್ತು ಮೂರು ಕಂಚಿನ ಪದಕಗಳನ್ನು ಜಯಿಸಿ ವರ್ಷದ ಶ್ರೇಷ್ಠ ಶೂಟರ್‌ ಕೀರ್ತಿ ಪಡೆದಿದ್ದರು. ಹಂತಹಂತವಾಗಿ ಒಂದೊಂದೇ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೆಹುಲಿ ಹೋದ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಯೂತ್‌ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದರು.

ದೀಪಕ್‌ ಲಾಥರ್‌ (18 ವರ್ಷ)

ಹರಿಯಾಣದ ದೀಪಕ್‌ ಲಾಥರ್‌ 69 ಕೆ.ಜಿ. ವಿಭಾಗದಲ್ಲಿ ಕಂಚು ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಕಿರಿಯ ವೇಟ್‌ಲಿಫ್ಟರ್‌ ಎನ್ನುವ ಕೀರ್ತಿ ಪಡೆದರು. ಜೂನಿಯರ್‌ ವಿಭಾಗದ 62 ಕೆ.ಜಿ. ಸ್ಪರ್ಧೆಯಲ್ಲಿ 15 ರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾರೆ. ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕೂಟದಲ್ಲಿ ಭಾಗವಹಿಸಿದ್ದ ಅವರು ಕ್ಲೀನ್‌ ಮತ್ತು ಜೆರ್ಕ್‌ ಸೇರಿ ಒಟ್ಟು 295 ಕೆ.ಜಿ. ಭಾರ ಎತ್ತಿದ್ದು, ಇದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ವೆಂಕಟ್‌ ರಾಹುಲ್‌ (21 ವರ್ಷ)

ಆಂಧ್ರಪ್ರದೇಶದ ಗುಂಟೂರಿನ ವೆಂಕಟ್‌ ರಾಹುಲ್‌ 2014ರಲ್ಲಿ ನಡೆದ ಯೂತ್‌ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಅದಕ್ಕೂ ಒಂದು ವರ್ಷ ಮೊದಲು ಏಷ್ಯನ್‌ ಯೂತ್‌ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ 85 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ.

ಮಣಿಕಾ ಬಾತ್ರಾ (22 ವರ್ಷ)

ನಾಲ್ಕನೇ ವರ್ಷದಿಂದ ಟೇಬಲ್‌ ಟೆನಿಸ್‌ ಬಗ್ಗೆ ಗೀಳು ಬೆಳೆಸಿಕೊಂಡ ದೆಹಲಿಯ ಮಣಿಕಾ ಬಾತ್ರಾ ಕೆಲ ತಿಂಗಳುಗಳ ಹಿಂದೆ ಅಖಿಲ ಭಾರತ (ದಕ್ಷಿಣ ವಲಯ) ಟೇಬಲ್‌ ಟೆನಿಸ್ ಟೂರ್ನಿಯಲ್ಲಿ ಆಡಲು ಧಾರವಾಡಕ್ಕೆ ಬಂದಿದ್ದರು.

ಅವರ ಪಂದ್ಯ ಸಂಜೆ ಇದ್ದರೂ ಬೆಳಿಗ್ಗೆಯಿಂದಲೇ ಅಭ್ಯಾಸ ನಡೆಸುತ್ತಿದ್ದರು. ಆಗ ನಿಮ್ಮ ಸಂದರ್ಶನ ಬೇಕು ಎಂದು ಕೇಳಿದಾಗ ‘ಪಂದ್ಯಕ್ಕೂ ಮೊದಲು ಯಾರಿಗೂ ಸಂದರ್ಶನ ಕೊಡುವುದಿಲ್ಲ’ ಎಂದು ಉತ್ತರಿಸಿದ್ದರಲ್ಲದೇ ಅದಕ್ಕೆ ಕಾರಣವನ್ನೂ ವಿವರಿಸಿದ್ದರು. ‘ಯಾವುದೇ ಹಂತದ ಪಂದ್ಯವಾದರೂ ಆಟದತ್ತ ಕೇಂದ್ರೀಕರಿಸುವುದು ಮುಖ್ಯ. ಗಮನ ಬೇರೆಡೆ ಹರಿಯದಂತೆ ಎಚ್ಚರಿಕೆ ವಹಿಸಬೇಕು’ ಎಂದಿದ್ದರು. ಆಟ ಮತ್ತು ಅಭ್ಯಾಸದ ಬಗ್ಗೆ ಅವರು ಹೊಂದಿದ್ದ ಶ್ರದ್ಧೆಯೇ ಈಗಿನ ದೊಡ್ಡ ಯಶಸ್ಸಿಗೆ ಕಾರಣವಾಗಿದೆ. ಮಣಿಕಾ ಗೋಲ್ಡ್‌ಕೋಸ್ಟ್‌ನಲ್ಲಿ ಚಿನ್ನ ಗೆದ್ದ ಟೇಬಲ್‌ ಟೆನಿಸ್ ತಂಡದಲ್ಲಿದ್ದರು.

ಮಣಿಕಾ ಸಹೋದರಿಯರಾದ ಆಂಚಲ್‌ ಮತ್ತು ಸಾಹಿಲ್‌ ಕೂಡ ಟೇಬಲ್‌ ಟೆನಿಸ್‌ ಆಟಗಾರ್ತಿಯರು. ಮಣಿಕಾ 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದರು. 2015ರಲ್ಲಿ ಕಾಮನ್‌ವೆಲ್ತ್‌ ಟಿ.ಟಿ. ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕ ಜಯಿಸಿದ್ದರು. 2016ರಲ್ಲಿ ರಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದರು.

ಓಂ ಪ್ರಕಾಶ ಮಿರ್ಥಾವಲ್ (22 ವರ್ಷ)

ರಾಜಸ್ಥಾನದ ಶೂಟರ್‌ ಓಂ ಪ್ರಕಾಶ ಒಂದೇ ವರ್ಷದಲ್ಲಿ ಮೂರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ. ಐಎಸ್‌ಎಸ್ಎಫ್‌ ವಿಶ್ವಕಪ್‌ನ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಗೋಲ್ಡ್‌ ಕೋಸ್ಟ್‌ನಲ್ಲಿ 10 ಮೀ. ಏರ್‌ ಪಿಸ್ತೂಲ್‌ ಮತ್ತು 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ತಲಾ ಒಂದು ಕಂಚು ಗೆದ್ದುಕೊಂಡಿದ್ದರು.ಓಂ ಪ್ರಕಾಶ ಮಿರ್ಥಾವಲ್

****

ಮೀರಾಬಾಯಿ ಚಾನು (23 ವರ್ಷ)

ಮಣಿಪುರದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು 2017ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 48 ಕೆ.ಜಿ. ವಿಭಾಗದಲ್ಲಿ ಚಿನ್ನ, 2014 ಮತ್ತು 2018ರ ಕಾಮನ್‌ವೆಲ್ತ್‌ ಕೂಟದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಚಿನ್ನದ ಪದಕ ಜಯಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನೂ ಗೆದ್ದಿದ್ದಾರೆ. ಕಳೆದ ವರ್ಷ ಅಮೆರಿಕದಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ 48 ಕೆ.ಜಿ. ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು.ಮೀರಾಬಾಯಿ ಚಾನು

****

ವಿಕಾಸ್ ಠಾಕೂರ್‌ (23 ವರ್ಷ)

ಪಂಜಾಬ್‌ನ ಲೂಧಿಯಾನದ ವೇಟ್‌ಲಿಫ್ಟರ್ ವಿಕಾಸ್‌ ಠಾಕೂರ್‌ 2013ರಿಂದ ಸತತ ನಾಲ್ಕು ವರ್ಷ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದವರು. ಸ್ನ್ಯಾಚ್‌ ವಿಭಾಗದಲ್ಲಿ 159 ಮತ್ತು ಜರ್ಕ್‌ನಲ್ಲಿ 190 ಕೆ.ಜಿ. ಭಾರ ಎತ್ತಿದ್ದು ಅವರ ವೈಯಕ್ತಿಕ ಉತ್ತಮ ಸಾಧನೆಯೆನಿಸಿದೆ. ಜೂನಿಯರ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಎರಡು ಸಲ ಚಾಂಪಿಯನ್‌, ಜೂನಿಯರ್‌ ಏಷ್ಯನ್‌ ಕೂಟದಲ್ಲಿ ಎರಡು ಬಾರಿ ಪದಕಗಳನ್ನೂ ಜಯಿಸಿದ್ದಾರೆ. ಗ್ಲಾಸ್ಗೊ ಕೂಟದ 85 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಮತ್ತು 2018ರ ಕಾಮನ್‌ವೆಲ್ತ್‌ನ 94 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.