ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗಡೆಗೆ ಸವಾಲೊಡ್ಡಿದವರು...

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

1983ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಜರುಗಿದಾಗ ಕಾಂಗ್ರೆಸ್ಸೇತರ ಶಕ್ತಿಗಳು ಒಂದುಗೂಡುವ ಕ್ರಿಯೆ ಪವಾಡದಂತೆ ಜರುಗಿಬಿಟ್ಟಿತು. ಶಿವಸಂಗಪ್ಪ ಕಡಪಟ್ಟಿಯವರು ಜನತಾ ಪಕ್ಷದ ಅಭ್ಯರ್ಥಿಯೆಂಬ ಘೋಷಣೆಯಿಂದ, ಒಳಗೊಳಗೇ ಅಭಿಮಾನಪಟ್ಟವರು ಹೆಚ್ಚು ಜನ. ಬಹಿರಂಗ ಸಾರ್ವಜನಿಕ ಬದುಕಿಗೆ ಅವರು ತಮ್ಮನ್ನು ಅರ್ಪಿಸಿಕೊಂಡಿದ್ದು ಇದೇ ಚುನಾವಣೆಯಲ್ಲಿ. 1985ರಲ್ಲಿಯೂ ಮಧ್ಯಂತರ ಚುನಾವಣೆಯಲ್ಲಿ ಆಯ್ಕೆಯಾದರು. 1983–85ರವರೆಗೆ ಆಗಿನ ಜನತಾ ಸರ್ಕಾರ ಹೆಚ್ಚು ಜನಪರವಾಗಿತ್ತೆಂಬುದು ನಿರ್ವಿವಾದ. 1985ರ ನಂತರ ಪೂರ್ಣ ಬಹುಮತ ಪಡೆದುಕೊಂಡ ಮೇಲೆ ಕ್ರಮೇಣ ಈ ಸರ್ಕಾರದ ಚರ್ಮ ದಪ್ಪವಾಗುತ್ತಾ ಹೋಯಿತು. ಆಗಲೇ ಕಡಪಟ್ಟಿಯವರು ಭಿನ್ನಮತೀಯರಾದರು.

ಒಂದು ರಾಜಕೀಯ ಪಕ್ಷದಲ್ಲಿ ಭಿನ್ನಮತೀಯರ ಗುಂಪು ಯಾಕೆ ಹುಟ್ಟಿಕೊಳ್ಳುತ್ತದೆ ಎಂಬ ಪ್ರಶ್ನೆಗೆ, ಅಧಿಕಾರದ ಅವಕಾಶ ತಪ್ಪಿದಾಗ, ಕಬಳಿಸಲು ಸಾಕಷ್ಟು ದೊರೆಯದಿದ್ದಾಗ ಎಂದು ಸಾಮಾನ್ಯರು ಅರ್ಥೈಸುತ್ತಾರೆ. ಆದರೆ, ಕಡಪಟ್ಟಿಯವರು ರಾಜಕೀಯದ ಸ್ವಚ್ಛತೆಗಾಗಿ ಭಿನ್ನಮತೀಯರಾದರು. ಭಿನ್ನಮತೀಯ ಗುಂಪಿನ ನಾಯಕರಾದರು. 93 ಶಾಸಕರನ್ನು ಸಂಘಟಿಸಿ ಹೆಗಡೆಯವರ ಕಾರ್ಯವೈಖರಿಯನ್ನು ಪ್ರಶ್ನಿಸುವ ತಾಕತ್ತನ್ನು ಪ್ರಕಟಿಸಿದರು. 1985ರ ಮರು ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರು ಜನಪ್ರಿಯತೆಯ ಉತ್ತುಂಗ ಶಿಖರದಲ್ಲಿದ್ದರು. 1986ರ ನಂತರ ಜನತಾ ಪಕ್ಷದಲ್ಲಿ ಕ್ರಾಂತಿರಂಗ, ಸಮಾಜವಾದಿಗಳ ಗುಂಪು, ಸಂಸ್ಥಾ ಕಾಂಗ್ರೆಸ್‌ನ ಬಣಗಳಲ್ಲಿ ಭಿನ್ನತೆ ತೋರತೊಡಗಿತು. ಜಾತೀಯ ವಾಸನೆ ವ್ಯಾಪಿಸತೊಡಗಿತು. ಜನತಾ ಪಕ್ಷ ಮೇಲ್ಜಾತಿ ವರ್ಗದ ಗುಂಪನ್ನು ಪ್ರತಿನಿಧಿಸುತ್ತದೆ ಎಂಬ ಭಾವನೆ ಹರಡತೊಡಗಿತು. ಇದರಿಂದ ಜನತಾ ಪಕ್ಷ ಆಂತರಿಕ ಒತ್ತಡಗಳಿಂದ ತತ್ತರಿಸತೊಡಗಿತು. ಈ ಸಂದರ್ಭದಲ್ಲಿ ಕಡಪಟ್ಟಿಯವರು ಭಿನ್ನಮತೀಯರ ಗುಂಪಿನ ನಾಯಕತ್ವ ವಹಿಸಿ ಸ್ವಚ್ಛ, ದಕ್ಷ, ಪ್ರಾಮಾಣಿಕ ಆಡಳಿತವನ್ನು ಜನರಿಗೆ ಕೊಡಬೇಕು ಎಂದು ಹಟ ಹಿಡಿದರು.

ಹೆಗಡೆ– ದೇವೇಗೌಡರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಪ್ರಾರಂಭವಾಯಿತು. ಶಿವಸಂಗಪ್ಪ ಕಡಪಟ್ಟಿ, ಏಕಾಂತಯ್ಯ, ಡಾ. ತಿಪ್ಪೇಸ್ವಾಮಿ, ಡಾ. ಹುಂಬರವಾಡಿ ಮುಂತಾದ ಸಮಾನಮನಸ್ಕರ ಗುಂಪು ರೂಪುಗೊಳ್ಳತೊಡಗಿತು. ಪಕ್ಷ ಮತ್ತು ಸರ್ಕಾರದಲ್ಲಿ ಕಡಪಟ್ಟಿಯವರು ಮಿಂಚತೊಡಗಿದರು. ಸಮಾನಮನಸ್ಕರ ಗುಂಪಿನಲ್ಲಿ ಅತೃಪ್ತ ರಾಜಕಾರಣಿಗಳು ಸೇರಿಕೊಂಡು ಭಿನ್ನಮತ ತನ್ನ ತಾತ್ವಿಕ ನೆಲೆಗಟ್ಟನ್ನು ಕಳೆದುಕೊಂಡಿತು. ಎರಡು ಮೂರು ಬಾರಿ ಮಂತ್ರಿಮಂಡಲದ ಪುನರ್‌ರಚನೆ ಜರುಗಿತು. ಈ ಗುಂಪು ಒಡೆಯಲು ಏಕಾಂತಯ್ಯನವರನ್ನು ಮಂತ್ರಿಮಂಡಲದಲ್ಲಿ ಸೇರ್ಪಡೆಗೊಳಿಸಲಾಯಿತು. ಕಡಪಟ್ಟಿಯವರನ್ನು ರಾಜಕೀಯವಾಗಿ ಕುಗ್ಗಿಸಲು ಜಮಖಂಡಿಯ ಶಾಸಕರನ್ನು ಹಾಗೂ ಮತ್ತೊಬ್ಬ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲಾಯಿತು. ಆದರೂ, ಭಿನ್ನಮತೀಯರ ತಾತ್ವಿಕ ಹೋರಾಟ, ತಾತ್ವಿಕ ಸಿಟ್ಟು ಕಡಿಮೆಯಾಗಲಿಲ್ಲ. ಬಿಜಾಪುರದ ಜನತಾ ಶಾಸಕರಲ್ಲಿ ಪ್ರಶ್ನಾತೀತ ನಾಯಕರಾಗಿದ್ದ ಜೆ.ಎಸ್‌. ದೇಶಮುಖರನ್ನು ಬಿಟ್ಟು ಕಡಪಟ್ಟಿಯವರಿಗೆ ಮಂತ್ರಿ ಪದವಿ ನೀಡುವ ಆಮಿಷ ನೀಡಲಾಯಿತು. ಇದರಿಂದ ತೀವ್ರ ಖಿನ್ನರಾದ ಕಡಪಟ್ಟಿಯವರು, ‘ದೇಶಮುಖರು ಮಂತ್ರಿಯಾಗಲಿ’ ಎಂದು ಮುಚ್ಚಳಿಕೆ ಬರೆದುಕೊಟ್ಟರು. ಕೊನೆಯವರೆಗೂ ಮುಖ್ಯಮಂತ್ರಿಗಳು ಕಡಪಟ್ಟಿಯವರ ನಿಷ್ಕಾಮ ಮನಸ್ಸನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಮಂತ್ರಿಮಂಡಲ ಪುನರ್‌ರಚನೆಯಾದ ಮೇಲೆ ಅತೃಪ್ತ ಶಾಸಕರು ಮತ್ತೆ ಕಡಪಟ್ಟಿಯವರನ್ನು ಅಂಗಲಾಚಿ ಭಿನ್ನಮತೀಯರ ನಾಯಕತ್ವ ವಹಿಸಲು ಕೇಳಿಕೊಂಡರು. ಜನತಾ ಪಕ್ಷ ಛಿದ್ರವಾಗುವ ಹಂತ ತಲುಪಿತ್ತು. ಭಿನ್ನಮತೀಯರ ಅಂತರಂಗದ ಅಧಿಕಾರ ಲಾಲಸೆ ಅರಿತಿದ್ದ ಕಡಪಟ್ಟಿಯವರು ಕ್ರಮೇಣವಾಗಿ ಹಿಂದೆ ಸರಿಯತೊಡಗಿದರು.

ಕಡಪಟ್ಟಿಯವರಲ್ಲಿ ರಾಜಿ ಮನೋಭಾವ ಇರಲಿಲ್ಲ. ಅಧಿಕಾರಕ್ಕಾಗಿ ಅವರು ಅಡ್ಡದಾರಿ ಹಿಡಿದವರಲ್ಲ. ಅಧಿಕಾರ ಬಯಸಿದವರೇ ಅಲ್ಲ. ಅವರು ಹುಟ್ಟು ಹೋರಾಟಗಾರರಾಗಿದ್ದರು. ಅವರ ಹೋರಾಟ ಸ್ವಾರ್ಥ, ಅಧಿಕಾರಲಾಲಸೆ, ವ್ಯಕ್ತಿದ್ವೇಷಗಳಿಂದ ಮುಕ್ತವಾಗಿತ್ತು. ಕೇವಲ ತತ್ವಕ್ಕಾಗಿ ಅವರ ಹೋರಾಟ ಇತ್ತು. ಬಹುಶಃ ಹೆಗಡೆಯವರನ್ನು ದಿಟ್ಟವಾಗಿ ಎದುರಿಸಿದ ಹಾಗೂ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ ಕೀರ್ತಿ ಜನತಾ ಪಕ್ಷದಲ್ಲಿ ಮೊತ್ತ ಮೊದಲಿಗೆ ಕಡಪಟ್ಟಿಯವರಿಗೆ ಸಲ್ಲುತ್ತದೆ. ಆಡಳಿತ ಪಕ್ಷದಲ್ಲಿಯೇ ವಿರೋಧ ಪಕ್ಷದ ನಾಯಕರಂತೆ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT