ಶುಕ್ರವಾರ, ಡಿಸೆಂಬರ್ 13, 2019
19 °C

ಕ್ರಿಸ್ ಗೇಲ್‌ ಅಬ್ಬರ: ಕಿಂಗ್ಸ್‌ ಇಲೆವನ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ರಿಸ್ ಗೇಲ್‌ ಅಬ್ಬರ: ಕಿಂಗ್ಸ್‌ ಇಲೆವನ್‌ಗೆ ಜಯ

ಚಂಡೀಗಡ: ಮಹೇಂದ್ರ ಸಿಂಗ್ ದೋನಿ ಅವರ ಅಬ್ಬರದ ಬ್ಯಾಟಿಂಗ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್‌ ಇಲೆವನ್‌ ಪಂಜಾಬ್ ತಂಡದ ವಿರುದ್ಧ ನಾಲ್ಕು ರನ್‌ಗಳಿಂದ ಸೋತಿತು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ತಂಡ ಕ್ರಿಸ್ ಗೇಲ್ (63; 33ಎ, 7ಬೌಂ, 4ಸಿ) ಅವರ ಅಬ್ಬರದ ಆಟದ ಬಲದಿಂದ ಉತ್ತಮ ಮೊತ್ತ ಕಲೆಹಾಕಿತು.

ಮೊಹಾಲಿಯ ಪಿಸಿಎ  ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 197 ರನ್‌ ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 9 ರನ್‌ ಗಳಿಸಿತ್ತು.

ಕಳೆದ ಎರಡೂ ಪಂದ್ಯಗಳಲ್ಲಿ ಗೇಲ್ ಆಡಿರಲಿಲ್ಲ. ಆದರೆ  ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ‘ಯುನಿವರ್ಸಲ್ ಬಾಸ್’ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಕನ್ನಡಿಗ ಕೆ.ಎಲ್. ರಾಹುಲ್ (37 ರನ್) ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ಗೇಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 96 ರನ್‌ ಸೇರಿಸಿದರು.  ಈ ರನ್‌ಗಳು ಕೇವಲ ಎಂಟು ಓವರ್‌ಗಳಲ್ಲಿ ಹರಿದುಬಂದವು.

ಹರಭಜನ್ ಸಿಂಗ್ ಹಾಕಿದ ಎಂಟನೇ ಓವರ್‌ನ ಕೊನೆಯ ಎಸೆತದಲ್ಲಿ ರಾಹುಲ್ ಅವರು ಡ್ವೇನ್ ಬ್ರಾವೊಗೆ ಕ್ಯಾಚಿತ್ತರು.

ಕ್ರೀಸ್‌ಗೆ ಬಂದ ಮಯಂಕ್ ಅಗರವಾಲ್ ಕೂಡ ರನ್‌ ಕೊಳ್ಳೆ ಹೊಡೆದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 31 ರನ್‌ಗಳು ಸೇರಿದವು.  12ನೇ ಓವರ್‌ನಲ್ಲಿ ಕ್ರಿಸ್‌ ಗೇಲ್ ಔಟಾದರು. ಆದರೆ ಯುವರಾಜ್ ಸಿಂಗ್ ಮತ್ತು ಕರುಣ್ ನಾಯರ್ ರನ್‌ಗಳ ಗಳಿಕೆಯನ್ನು ನಿರಂತರವಾಗಿ ಇಟ್ಟರು. ಅಶ್ವಿನ್ ಕೂಡ 14 ರನ್‌ಗಳ ಕಾಣಿಕೆ ನೀಡಿದರು.  ಚೆನ್ನೈ ತಂಡದ ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್ ತಲಾ ಎರಡು ವಿಕೆಟ್ ಪಡೆದರು. ಹರಭಜನ್ ಸಿಂಗ್, ಶೇನ್ ವಾಟ್ಸನ್ ಮತ್ತು ಡ್ವೆನ್ ಬ್ರಾವೊ ಅವರು ತಲಾ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್: ಕಿಂಗ್ಸ್ ಇಲೆವನ್ ಪಂಜಾಬ್‌: 20 ಓವರ್‌ಗಳಲ್ಲಿ 197 (ಕೆ.ಎಲ್‌.ರಾಹುಲ್‌ 37, ಕ್ರಿಸ್ ಗೇಲ್‌ 63, ಮಯಂಕ್ ಅಗರವಾಲ್ 30, ಯುವರಾಜ್ ಸಿಂಗ್ 20, ಕರುಣ್ ನಾಯರ್ 29, ಆರ್. ಅಶ್ವಿನ್ 14; ಹರಭಜನ್ ಸಿಂಗ್‌ 41ಕ್ಕೆ1, ಇಮ್ರಾನ್ ತಾಹಿರ್ 34ಕ್ಕೆ2, ಶಾರ್ದೂಲ್ ಠಾಕೂರ್‌ 33ಕ್ಕೆ2); ಚೆನ್ನೈ ಸೂಪರ್ ಕಿಂಗ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 193 (ಅಂಬಟಿ ರಾಯುಡು 49; ಮಹೇಂದ್ರ ಸಿಂಗ್ ದೋನಿ 79; ಆ್ಯಂಡ್ರ್ಯೂ ಟೈ 47ಕ್ಕೆ2). ಫಲಿತಾಂಶ: ಕಿಂಗ್ಸ್‌ ಇಲೆವನ್‌ಗೆ ಐದು ವಿಕೆಟ್‌ಗಳ ಜಯ.

ಪ್ರತಿಕ್ರಿಯಿಸಿ (+)