ಶನಿವಾರ, ಡಿಸೆಂಬರ್ 14, 2019
20 °C

ಮತ್ತೆ ತಲೆ ಎತ್ತಿದೆ ಟ್ಯಾಂಕರ್‌ ಮಾಫಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ತಲೆ ಎತ್ತಿದೆ ಟ್ಯಾಂಕರ್‌ ಮಾಫಿಯಾ

ಬೆಂಗಳೂರು: ನಗರದಲ್ಲಿ ಬಿಸಿಲ ಬೇಗೆ ಏರುತ್ತಿದ್ದು, ನೀರಿನ ಅಭಾವ ಶುರುವಾಗಿದೆ. ಇದರ ಲಾಭ ಪಡೆಯಲು ಖಾಸಗಿ ಟ್ಯಾಂಕರ್‌ ಮಾಫಿಯಾ ಮತ್ತೆ ಹೆಡೆ ಎತ್ತಿದೆ.

ನಗರದ ಹೊರವಲಯದಲ್ಲಿ ಟ್ಯಾಂಕರ್‌ ನೀರಿನ ದರ ಶೇ 30 ರಿಂದ 40ರಷ್ಟು ಹೆಚ್ಚಾಗಿದೆ. ಬಿಸಿಲ ಧಗೆ ಹೆಚ್ಚಿದಂತೆ ಕುಡಿಯುವ ನೀರಿನ ಬಳಕೆಯೂ ಜಾಸ್ತಿಯಾಗುತ್ತಿದೆ. ಫೆಬ್ರುವರಿ ಹಾಗೂ ಮಾರ್ಚ್‌ಗೆ ಹೋಲಿಸಿದರೆ ಈ ತಿಂಗಳಲ್ಲಿ ನೀರಿನ ಬೇಡಿಕೆ ಶೇ 20ರಷ್ಟು ಜಾಸ್ತಿಯಾಗಿದೆ.

ವೈಟ್‌ಫೀಲ್ಡ್, ಸರ್ಜಾಪುರ, ಕೆ.ಆರ್‌.ಪುರ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಫೆಬ್ರುವರಿ ತಿಂಗಳಲ್ಲಿ ಟ್ಯಾಂಕರ್ (10,000 ಲೀಟರ್‌ ಸಾಮರ್ಥ್ಯ) ನೀರಿನ ಬೆಲೆ ₹800 ಇತ್ತು. ಈಗ ಅದು ₹1,000 ದಿಂದ ₹1,250ರವರೆಗೆ ಏರಿದೆ.

ನಗರಕ್ಕೆ ಪ್ರತಿನಿತ್ಯ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. ನಗರದ ಹೃದಯಭಾಗದ ಜನರಿಗೆ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಸಿಗುತ್ತಿದೆ. ನಗರಕ್ಕೆ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ ಪ್ರದೇಶದ (ಸಿಎಂಸಿ) ಜನರಿಗೆ ಮೂರು–ನಾಲ್ಕು ದಿನಕ್ಕೊಮ್ಮೆ ಕಾವೇರಿ ನೀರು ಲಭ್ಯವಾಗುತ್ತಿದೆ. ಜಲಮಂಡಳಿ ನಗರದ ಶೇ 60ರಷ್ಟು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.

110 ಹಳ್ಳಿಗಳಿಗೆ ನೀರು ಪೂರೈಕೆಗೆ ಕೊಳವೆ ಮಾರ್ಗಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ಸದ್ಯ ಇಲ್ಲಿನ ನಿವಾಸಿಗಳು ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿನ ಶೇ 50ರಷ್ಟು ಕೊಳವೆಬಾವಿಗಳು ಈಗಾಗಲೇ ಬತ್ತಿ ಹೋಗಿದ್ದು, ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿನ ಜನ ಅನಿವಾರ್ಯವಾಗಿ ಟ್ಯಾಂಕರ್‌ ನೀರನ್ನು ನೆಚ್ಚಿಕೊಳ್ಳಬೇಕಾಗಿದೆ. ಇದರ ಲಾಭವನ್ನು ಖಾಸಗಿ ಟ್ಯಾಂಕರ್ ಮಾಲೀಕರು ಪಡೆಯುತ್ತಿದ್ದಾರೆ.

ಮಹದೇವಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ... ಹೀಗೆ ನಗರದ ಹೊರವಲಯದಲ್ಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಕೊಳವೆಬಾವಿ ಹಾಗೂ ಸಂಸ್ಕರಿಸಿದ ನೀರಿನ ಮೇಲೆಯೇ ಅವಲಂಬಿತವಾಗಿವೆ. ಬೇಸಿಗೆಯಲ್ಲಿ ಅನಿವಾರ್ಯವಾಗಿ ಟ್ಯಾಂಕರ್‌ ನೀರಿನ ಮೊರೆ ಹೋಗಬೇಕಾದ ಸ್ಥಿತಿ ಇಲ್ಲಿದೆ.

ಸರ್ಜಾಪುರ ರಸ್ತೆಯ ಬಳಿ ಸ್ಪಿಂಗ್ರ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ ನಿವಾಸಿ ಭೂಷಣ್‌ ಅಯ್ಯರ್‌, ‘ಸಮುಚ್ಚಯದಲ್ಲಿನ ಒಟ್ಟು 550 ಮನೆಗಳಿಗೆ ವರ್ಷಕ್ಕೆ ನೀರಿಗಾಗಿಯೇ ಸುಮಾರು ₹1 ಕೋಟಿ ವ್ಯಯವಾಗುತ್ತದೆ. 13 ವರ್ಷಗಳಿಂದ ಟ್ಯಾಂಕರ್ ಮಾಲೀಕರು ಇಲ್ಲಿಗೆ ನೀರು ಪೂರೈಸುತ್ತಿದ್ದಾರೆ’ ಎಂದು ತಿಳಿಸಿದರು.

ಹೆಮ್ಮಿಗೆಪುರ ವಾರ್ಡ್‌ ನಿವಾಸಿಯೊಬ್ಬರು, ‘ಬೇಸಿಗೆಯಲ್ಲಿ ತಿಂಗಳಿಗೆ ಕನಿಷ್ಠ 8 ರಿಂದ 9 ಬಾರಿ ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತೇವೆ. ಪ್ರತಿ ಟ್ಯಾಂಕರ್‌ ನೀರಿಗೆ ₹800 ಬಾಡಿಗೆ ನೀಡುತ್ತೇವೆ. ನೀರಿನ ಗುಣಮಟ್ಟ ಚೆನ್ನಾಗಿರುವುದಿಲ್ಲ. ಆದರೆ, ಬೇರೆ ದಾರಿ ಇಲ್ಲದೆ ಆ ನೀರನ್ನೇ ಬಳಸುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಾರಿ ಬೇಸಿಗೆಯಲ್ಲಿ ಕೊಂಚ ಮಳೆಯಾಗಿದ್ದರಿಂದ ನೀರಿನ ಅಭಾವ ಸ್ವಲ್ಪ ತಗ್ಗಿದೆ. ಇಲ್ಲದಿದ್ದರೆ, ಟ್ಯಾಂಕರ್‌ ಮಾಲೀಕರು ಮನಬಂದಂತೆ ದರ ವಿಧಿಸುತ್ತಾರೆ. ಕೆಲವೊಮ್ಮೆ ಇದು ₹1,000ವನ್ನು ದಾಟುತ್ತದೆ’ ಎಂದು ಗರುಡಾಚಾರ್ಯಪಾಳ್ಯದ ನಿವಾಸಿ ಹೇಳಿದರು.

‘ವೈಟ್‌ಫೀಲ್ಡ್‌ನಲ್ಲಿನ ಬ್ರಿಗೆಡ್‌ ಮೆಟ್ರೊಪೊಲಿಸ್‌ ಕಾಂಪ್ಲೆಕ್ಸ್‌ನಲ್ಲಿ 1,700ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಈಜು ಕೊಳಕ್ಕೆ ಪ್ರತಿ ದಿನ ಎರಡು ಬಾರಿ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತೇನೆ’ ಎಂದು ಟ್ಯಾಂಕರ್‌ ಮಾಲೀಕ ಶಿವಮೂರ್ತಿ ಮಾಹಿತಿ ನೀಡಿದರು.

ಟ್ಯಾಂಕರ್‌ಗೆ ನೀರಿನ ಮೂಲ ಯಾವುದು?

ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸುತ್ತಮುತ್ತ ಸಾವಿರಕ್ಕೂ ಅಧಿಕ ಅನಧಿಕೃತ ಕೊಳವೆಬಾವಿಗಳಿವೆ. ಇಲ್ಲಿ ನೀರನ್ನು ಮೊಗೆದು ವಿವಿಧ ಭಾಗಗಳಿಗೆ ಪೂರೈಸಲಾಗುತ್ತಿದೆ.

ವೈಟ್‌ಫೀಲ್ಡ್‌, ಹೂಡಿ, ಕೆ.ಆರ್‌.ಪುರ, ಮಹದೇವಪುರ ಮತ್ತು ದೊಡ್ಡನೆಕ್ಕುಂದಿ ಭಾಗದಲ್ಲಿ ಓಡಾಡಿದರೆ, ಪ್ರತಿ ಐದು ನಿಮಿಷಕ್ಕೊಂದು ನೀರನ ಟ್ಯಾಂಕರ್‌ ನಿಮ್ಮನ್ನು ಹಾದು ಹೋಗುತ್ತದೆ. ‘ದೊಡ್ಡನೆಕ್ಕುಂದಿ ಪ್ರದೇಶವೊಂದರಲ್ಲಿಯೇ ಸದ್ಯ 22 ಕೊಳವೆಬಾವಿಗಳಿವೆ’ ಎಂದು ಸ್ಥಳೀಯ ನಿವಾಸಿ ಎಸ್‌. ಸಂದೀಪ್‌ ತಿಳಿಸಿದರು.

ನಗರದಲ್ಲಿ ಸದ್ಯ‌ 4 ಲಕ್ಷ ಕೊಳವೆಬಾವಿಗಳಿವೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 1 ಲಕ್ಷ ಕೊಳವೆಬಾವಿಗಳು ಮಾತ್ರ ಅನುಮತಿ ಪಡೆದಿವೆ. ಸದ್ಯ 10,390 ಹೊಸ ಅರ್ಜಿಗಳು ಬಂದಿದ್ದು, ಇದರಲ್ಲಿ 3,846ಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ತಿಳಿಸಿದೆ.

‘ನಗರದಲ್ಲಿನ ಸಾಕಷ್ಟು ಪಾಲಿಕೆ ಸದಸ್ಯರು ಟ್ಯಾಂಕರ್‌ಗಳನ್ನು ಹೊಂದಿದ್ದು, ಕೊಳವೆಬಾವಿಗಳ ಮೂಲಕ ನೀರು ಪಡೆದು ಮಾರುತ್ತಿದ್ದಾರೆ. ಈ ಕಾರಣದಿಂದಲೇ 110 ಹಳ್ಳಿಗೆ ನೀರು ಪೂರೈಕೆ ವ್ಯವಸ್ಥೆ ಅಳವಡಿಸಲು ನಿಧಾನ ಮಾಡುತ್ತಿದ್ದಾರೆ’ ಎಂದು ಹೆಮ್ಮಿಗೆಪುರ ನಿವಾಸಿ ವಿ.ಕೆ. ಶ್ರೀವಾಸ್ತವ್‌ ದೂರಿದರು.

ಪ್ರತಿಕ್ರಿಯಿಸಿ (+)