7
ಬ್ಯಾಡ್ಮಿಂಟನ್‌: ಫೈನಲ್‌ನಲ್ಲಿ ಮುಗ್ಗರಿಸಿದ ಸಿಂಧು; ಪಾರಮ್ಯ ಮೆರೆದ ನೆಹ್ವಾಲ್‌

ಚಿನ್ನಕ್ಕೆ ಮುತ್ತಿಕ್ಕಿದ ಸೈನಾ

Published:
Updated:
ಚಿನ್ನಕ್ಕೆ ಮುತ್ತಿಕ್ಕಿದ ಸೈನಾ

ಗೋಲ್ಡ್‌ ಕೋಸ್ಟ್‌: ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸೈನಾ ನೆಹ್ವಾಲ್‌, ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೈನಾ 21–18, 23–21ರಲ್ಲಿ ಭಾರತದವರೇ ಆದ ಪಿ.ವಿ.ಸಿಂಧುಗೆ ಆಘಾತ ನೀಡಿದರು.

ಕಾಮನ್‌ವೆಲ್ತ್‌ ಕೂಟದ ಸಿಂಗಲ್ಸ್‌ನಲ್ಲಿ ಸೈನಾ ಗೆದ್ದ ಎರಡನೆ ಚಿನ್ನ ಇದಾಗಿದೆ. 2010ರಲ್ಲಿ ನವದೆಹಲಿಯಲ್ಲಿ ಜರುಗಿದ್ದ ಕೂಟದಲ್ಲಿ ಅವರು ಮೊದಲ ಚಿನ್ನ ಜಯಿಸಿದ್ದರು.

ಮಿಶ್ರ ತಂಡ ವಿಭಾಗದಲ್ಲಿ ಭಾರತ ಚೊಚ್ಚಲ ಚಿನ್ನ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೈನಾ, ಸಿಂಗಲ್ಸ್‌ ವಿಭಾಗದಲ್ಲೂ ಮೋಡಿ ಮಾಡಿದರು.

ಸೈನಾ ಮತ್ತು ಸಿಂಧು ಮುಖಾಮುಖಿಯಾಗಿದ್ದರಿಂದ ಫೈನಲ್‌ ಪಂದ್ಯ ಕುತೂಹಲದ ಗಣಿಯಾಗಿತ್ತು.

ಹಿಂದಿನ ಹೋರಾಟಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸೈನಾ, ಮೊದಲ ಗೇಮ್‌ನಲ್ಲಿ ಗುಣಮಟ್ಟದ ಆಟ ಆಡಿದರು. ಚುರುಕಿನ ಸರ್ವ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು. ಸೈನಾ, ನೆಟ್‌ನ ಸಮೀಪದಲ್ಲಿ ಡ್ರಾಪ್ ಮಾಡುತ್ತಿದ್ದ ಷಟಲ್‌ ಹಿಂತಿರುಗಿಸಲು ಪ್ರಯಾಸಪಟ್ಟ ಸಿಂಧು 4–9ರಿಂದ ಹಿನ್ನಡೆ ಕಂಡರು. ನಂತರವೂ ಪ್ರಾಬಲ್ಯ ಮುಂದುವರಿಸಿದ ಸೈನಾ 11–6ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ಉಭಯ ಆಟಗಾರ್ತಿಯರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ದೀರ್ಘ ರ‍್ಯಾಲಿಗಳನ್ನು ಆಡಿದ ಸೈನಾ, ವೇಗವಾಗಿ ಪಾಯಿಂಟ್ಸ್‌ ಕಲೆಹಾಕಿ 20–14ರ ಮುನ್ನಡೆ ಹೊಂದಿದ್ದರು. ಈ ವೇಳೆ ಸಿಂಧು ಸತತ ನಾಲ್ಕು ಪಾಯಿಂಟ್ಸ್‌ ಗಳಿಸಿ ಹಿನ್ನಡೆಯನ್ನು 18–20ಕ್ಕೆ ತಗ್ಗಿಸಿಕೊಂಡರು. ನಂತರ ಚುರುಕಾಗಿ ಒಂದು ಪಾಯಿಂಟ್ ಕಲೆಹಾಕಿದ ನೆಹ್ವಾಲ್‌, ಗೇಮ್‌ ಗೆದ್ದು ಸಂಭ್ರಮಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನ ಹೊಂದಿರುವ ಸಿಂಧು ಆಟ ಎರಡನೆ ಗೇಮ್‌ನಲ್ಲಿ ರಂಗೇರಿತು. ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು 6–5, 15–12ರಲ್ಲಿ ಮುನ್ನಡೆ ಪಡೆದಿದ್ದರು.

ಕೂಟದಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಸಿಂಧು ನಂತರವೂ ಪರಿಣಾಮಕಾರಿ ಆಟ ಆಡಿ ಮುನ್ನಡೆಯನ್ನು 20–18ಕ್ಕೆ ಹೆಚ್ಚಿಸಿಕೊಂಡರು. ಹೀಗಾಗಿ ಅವರು ಗೇಮ್‌ ಗೆದ್ದು ಸಮಬಲ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೆ ಸ್ಥಾನ ಹೊಂದಿರುವ ಸೈನಾ ಇದಕ್ಕೆ ಅವಕಾಶ ನೀಡಲಿಲ್ಲ. ಸತತ ಎರಡು ಪಾಯಿಂಟ್ಸ್‌ ಗಳಿಸಿದ ಅವರು 20–20ರಿಂದ ಸಮಬಲ ಸಾಧಿಸಿದರು. ನಂತರ ಇಬ್ಬರೂ ತಲಾ ಒಂದು ಪಾಯಿಂಟ್ ಸಂಗ್ರಹಿಸಿದರು.

ಹೀಗಾಗಿ ಗೇಮ್‌ 21–21ರಲ್ಲಿ ಸಮಬಲವಾಯಿತು. ಈ ಹಂತದಲ್ಲಿ ಒತ್ತಡ ಮೀರಿ ನಿಂತ ಸೈನಾ ಸತತ ಎರಡು ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಈ ಹೋರಾಟ 56 ನಿಮಿಷ ನಡೆಯಿತು.

ಸಾತ್ವಿಕ್‌–ಚಿರಾಗ್‌ ಚಾರಿತ್ರಿಕ ಸಾಧನೆ

ಗೋಲ್ಡ್‌ ಕೋಸ್ಟ್‌:
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

ಇದರೊಂದಿಗೆ ಕಾಮನ್‌ವೆಲ್ತ್‌ ಕೂಟದ ಪುರುಷರ ಡಬಲ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಜೋಡಿ ಎಂಬ ಹಿರಿಮೆಗೆ ಭಾಜನರಾದರು.

ಭಾನುವಾರ ನಡೆದ ಫೈನಲ್‌ನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ 13–21, 16–21ರಲ್ಲಿ ಇಂಗ್ಲೆಂಡ್‌ನ ಮಾರ್ಕಸ್‌ ಎಲ್ಲಿಸ್‌ ಮತ್ತು ಕ್ರಿಸ್‌ ಲ್ಯಾಂಗ್ರಿಡ್ಜ್‌ ವಿರುದ್ಧ ಪರಾಭವಗೊಂಡರು. ಈ ಹೋರಾಟ 39 ನಿಮಿಷ ನಡೆಯಿತು.

ಈ ವರ್ಷ ನಡೆದಿದ್ದ ಕೊರಿಯಾ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಸಾತ್ವಿಕ್ ಮತ್ತು ಚಿರಾಗ್‌, ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌  ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಸಾಧನೆ ಮಾಡಿದ್ದರು.

ಫೈನಲ್‌ ಹೋರಾಟದ ಮೊದಲ ಗೇಮ್‌ನ ಶುರುವಿನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಆದರೆ ದ್ವಿತೀಯಾರ್ಧದಲ್ಲಿ ಮಾರ್ಕಸ್‌ ಮತ್ತು ಕ್ರಿಸ್‌ ಅಬ್ಬರಿಸಿದರು. ಎದುರಾಳಿ ಆಟಗಾರರು ಬಾರಿಸುತ್ತಿದ್ದ ಬೇಸ್‌ಲೈನ್‌ ಹೊಡೆತಗಳನ್ನು ರಿಟರ್ನ್‌ ಮಾಡಲು ಪ್ರಯಾಸಪಟ್ಟ ಸಾತ್ವಿಕ್‌ ಮತ್ತು ಚಿರಾಗ್‌ ಸುಲಭವಾಗಿ ಸೋಲೊ‍ಪ್ಪಿಕೊಂಡರು.

ಆರಂಭಿಕ ನಿರಾಸೆಯಿಂದ ಎದೆಗುಂದದ ಭಾರತದ ಜೋಡಿ ಎರಡನೆ ಗೇಮ್‌ನಲ್ಲಿ ಛಲದಿಂದ ಹೋರಾಡಿತು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ದ್ವಿತೀಯಾರ್ಧದಲ್ಲಿ ಮೇಲುಗೈ ಸಾಧಿಸಿದ ಆಂಗ್ಲರ ನಾಡಿನ ಆಟಗಾರರು ಭಾರತದ ಜೋಡಿಯ ಸವಾಲು ಮೀರಿದರು.

‌ಮಾರ್ಕಸ್‌ ಮತ್ತು ಕ್ರಿಸ್‌ ಅವರು 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು.

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.

ಶ್ರೀಕಾಂತ್‌ಗೆ ಬೆಳ್ಳಿ

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಕಿದಂಬಿ ಶ್ರೀಕಾಂತ್, ಬೆಳ್ಳಿಯ ಪದಕ ಗೆದ್ದರು.

ಫೈನಲ್‌ನಲ್ಲಿ ಶ್ರೀಕಾಂತ್‌ 21–19, 14–21, 14–21ರಲ್ಲಿ ಮಲೇಷ್ಯಾದ ಲೀ ಚಾಂಗ್‌ ವೀ ಎದುರು ಮಣಿದರು.

ಲೀ ಅವರು ಕಾಮನ್‌ವೆಲ್ತ್‌ನಲ್ಲಿ ಗೆದ್ದ ಮೂರನೆ ಚಿನ್ನ ಇದಾಗಿದೆ.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ಮಿಂಚಿನ ಆಟ ಆಡಿದರು.

ಎದುರಾಳಿ ಒಡ್ಡಿದ ಕಠಿಣ ಸವಾಲನ್ನು ದಿಟ್ಟತನದಿಂದಲೇ ಮೆಟ್ಟಿನಿಂತ ಭಾರತದ ಆಟಗಾರ 23ನೇ ನಿಮಿಷದಲ್ಲಿ ಜಯದ ತೋರಣ ಕಟ್ಟಿದರು.

ಒಲಿಂ‍‍ಪಿಕ್ಸ್‌ನಲ್ಲಿ ಮೂರು ಬೆಳ್ಳಿ ಗೆದ್ದ ಹಿರಿಮೆ ಹೊಂದಿದ್ದ  ಚಾಂಗ್‌, ಎರಡನೆ ಗೇಮ್‌ನಲ್ಲಿ ಅಬ್ಬರಿಸಿದರು. ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಭಾರತದ ಆಟಗಾರನನ್ನು ಕಂಗೆಡಿಸಿದ ಅವರು 21ನೇ ನಿಮಿಷದಲ್ಲಿ ಗೇಮ್‌ ಗೆದ್ದರು. ಹೀಗಾಗಿ ಪಂದ್ಯದಲ್ಲಿ 1–1ರ ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೆ ಗೇಮ್‌ನಲ್ಲೂ ಮಲೇಷ್ಯಾದ ಆಟಗಾರ ಮೋಡಿ ಮಾಡಿದರು. ಮೊದಲರ್ಧದಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದ ಶ್ರೀಕಾಂತ್‌, ದ್ವಿತೀಯಾರ್ಧದಲ್ಲಿ ಮಂಕಾದರು. ಹಲವು ತಪ್ಪುಗಳನ್ನು ಮಾಡಿದ ಅವರು ಎದುರಾಳಿಗೆ ಸುಲಭವಾಗಿ ಪಾಯಿಂಟ್ಸ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಭಾರತದ ಆಟಗಾರನ ಚೊಚ್ಚಲ ಚಿನ್ನದ ಕನಸು ಕೈಗೂಡಲಿಲ್ಲ.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಮಲೇಷ್ಯಾದ ವಿವಿಯಾನ್‌ ಹೂ ಮತ್ತು ಮೆಯಿ ಕುವಾನ್‌ ಚೌ ಅವರು ಚಿನ್ನ ಗೆದ್ದರು.

ಫೈನಲ್‌ನಲ್ಲಿ ಕುವಾನ್ ಮತ್ತು ವಿವಿಯಾನ್‌ 21–12, 21–12ರ ನೇರ ಗೇಮ್‌ಗಳಿಂದ ಇಂಗ್ಲೆಂಡ್‌ನ ಲೌರೆನ್‌ ಸ್ಮಿತ್‌ ಮತ್ತು ಸಾರಾ ವಾಕರ್‌ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ ಚಿನ್ನ ಇಂಗ್ಲೆಂಡ್‌ನ ಗೇಬ್ರಿಯಲ್‌ ಅಡ್‌ಕಾಕ್‌ ಮತ್ತು ಕ್ರಿಸ್‌ ಅಡ್‌ಕಾಕ್‌ ಅವರ ಪಾಲಾಯಿತು.

ಫೈನಲ್‌ನಲ್ಲಿ ಗೇಬ್ರಿಯಲ್‌ ಮತ್ತು ಕ್ರಿಸ್‌ 19–21, 21–17, 21–16ರಲ್ಲಿ ಇಂಗ್ಲೆಂಡ್‌ನ ಮಾರ್ಕಸ್‌ ಎಲ್ಲಿಸ್‌ ಮತ್ತು ಲೌರೆನ್‌ ಸ್ಮಿತ್‌ ಅವರನ್ನು ಪರಾಭವಗೊಳಿಸಿದರು.

ಮೊದಲ ಗೇಮ್‌ನಲ್ಲಿ ನಿರಾಸೆ ಕಂಡ ಕ್ರಿಸ್‌ ಮತ್ತು ಗೇಬ್ರಿಯಲ್‌ ನಂತರದ ಎರಡೂ ಗೇಮ್‌ಗಳಲ್ಲಿ ಮಿಂಚಿನ ಆಟ ಆಡಿ ಜಯದ ಸಿಹಿ ಸವಿದರು.

ಬ್ಯಾಡ್ಮಿಂಟನ್‌ನಲ್ಲಿ ಆರು ಪದಕ

ಭಾರತ ತಂಡ ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಒಟ್ಟು ಆರು ಪದಕಗಳನ್ನು ಜಯಿಸಿದ ಸಾಧನೆ ಮಾಡಿತು. ಇದರಲ್ಲಿ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿದೆ. ಇದು ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಹಿಂದಿನ ಎರಡು ಕೂಟಗಳಿಂದ ಭಾರತದ ಬ್ಯಾಡ್ಮಿಂಟನ್‌ ಆಟಗಾರರು ನಾಲ್ಕು ಪದಕಗಳನ್ನು ಗೆದ್ದಿದ್ದರು.

*

ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಆಗಿರಲಿಲ್ಲ. ಇಲ್ಲಿ ಗೆದ್ದ ಚಿನ್ನ ಹಿಂದಿನ ನಿರಾಸೆ ದೂರ ಮಾಡಿದೆ.

– ಸೈನಾ ನೆಹ್ವಾಲ್‌, ಭಾರತದ ಆಟಗಾರ್ತಿ

*

ನಾನು ಚೆನ್ನಾಗಿಯೆ ಆಡಿದ್ದೆ. ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೆ. ಆದರೆ ಅದೃಷ್ಟ ನನ್ನ ಪರವಾಗಿರಲಿಲ್ಲ.

ಪಿ.ವಿ.ಸಿಂಧು, ಭಾರತದ ಆಟಗಾರ್ತಿ

*

ಈ ಬಾರಿಯ ಕೂಟದಲ್ಲಿ ಚಿನ್ನ ಜಯಿಸುವ ಗುರಿ ಹೊಂದಿದ್ದೆವು. ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಿದ್ದೆವು. ಆದರೆ ಇದನ್ನು ಕಾರ್ಯಗತಗೊಳಿಸಲು ನಾವು ವಿಫಲವಾದೆವು.

–ಚಿರಾಗ್ ಶೆಟ್ಟಿ, ಡಬಲ್ಸ್‌ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry