ಬುಧವಾರ, ಡಿಸೆಂಬರ್ 11, 2019
16 °C
ಬಸವ ತತ್ವದಿಂದ ಭವ್ಯ ಭಾರತ ನಿರ್ಮಾಣ: ಪಟ್ಟದ್ದೇವರು

ಗಾಂಧಿಗಂಜ್‌ನಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿಗಂಜ್‌ನಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ

ಬೀದರ್‌: ನಗರದ ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನದಲ್ಲಿ ಜಗಜ್ಯೋತಿ ಬಸವೇಶ್ವರರ ಅಮೃತಶಿಲೆಯ ನೂತನ ಮೂರ್ತಿಯನ್ನು ಸೋಮವಾರ ಪ್ರತಿಷ್ಠಾಪಿಸಲಾಯಿತು.

ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಕವಲಗಾದ ಮಲ್ಲಿಕಾರ್ಜುನ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಪೂಜೆ, ಬಸವಸ್ತ್ರೋತ್ರ, ವಚನ ಪಠಣ ಕಾರ್ಯಕ್ರಮ ನಡೆಯಿತು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಸವ ಭಕ್ತರು, ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು. ಶ್ರದ್ಧೆ ಭಕ್ತಿಯಿಂದ ಬಸವೇಶ್ವರ ಪ್ರತಿಮೆಗೆ ನಮಿಸಿದರು. ಪ್ರಸಾದ ಸ್ವೀಕರಿಸಿ ಕೃತಜ್ಞರಾದರು.

ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಲಿಂಗ ಪಟ್ಟದ್ದೇವರು, ‘ಪ್ರಸ್ತುತ ದೇಶಕ್ಕೆ ಬಸವತತ್ವದ ಅವಶ್ಯಕತೆ ಇದೆ. ಬಸವಣ್ಣನವರ ತತ್ವ ಹಾಗೂ ಸಿದ್ಧಾಂತಗಳ ಅನುಕರಣೆಯಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿದೆ’ ಎಂದು ಹೇಳಿದರು.

‘ಸಮಾನತೆಯ ಹರಿಕಾರ ಬಸವಣ್ಣನವರ ತತ್ವಗಳನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ’ ಎಂದು ತಿಳಿಸಿದರು.

ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನ ನಗರದ ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಬಸವೇಶ್ವರರ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಬೇಕು ಎನ್ನುವುದು ಎಲ್ಲರ ಸಂಕಲ್ಪವಾಗಿತ್ತು. ಅದು ಈಗ ಈಡೇರಿದೆ’ ಎಂದು ಹೇಳಿದರು.

‘ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನವನ್ನು ನವೀಕರಣ ಮಾಡಲಾಗಿದೆ. ಗ್ರಾನೈಟ್ ಕಲ್ಲುಗಳನ್ನು ಹಾಸಿ ಒಳಾಂಗಣವನ್ನು ಅಂದಗೊಳಿಸಲಾಗಿದೆ. ಹೊರಾಂಗಣದಲ್ಲಿಯೂ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸುಣ್ಣ, ಬಣ್ಣ ಬಳಿಯಲಾಗಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರನ್ನು ಮಠಾಧೀಶರು ಸನ್ಮಾನಿಸಿ ಗೌರವಿಸಿದರು.

ಗಾಂಧಿಗಂಜ್ ಬಸವ ಜಯಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕಾಶಪ್ಪ ಧನ್ನೂರ, ಅಧ್ಯಕ್ಷ ಅಣ್ಣಾರಾವ್ ಮೊಗಶೆಟ್ಟಿ, ದೇವಸ್ಥಾನದ ಆಡಳಿತಾಧಿಕಾರಿ ವಿಶ್ವನಾಥ ಕಾಜಿ, ಮುಖಂಡರಾದ ಭಗವಂತ ಔದತಪುರ, ನಾಗಶೆಟ್ಟೆಪ್ಪ ದಾಡಗಿ, ಅಶೋಕ ರೇಜಂತಲ್, ಬಸವರಾಜ ಭಂಡೆ, ಮಡಿವಾಳಪ್ಪ ಗಂಗಶೆಟ್ಟಿ, ಸೋಮಶೇಖರ ಪಾಟೀಲ, ವೀರಭದ್ರಪ್ಪ ಸುಲಗುಂಟೆ, ಪ್ರಭುಶೆಟ್ಟಿ ಮುದ್ದಣ್ಣ, ಸೋಮನಾಥ ಗಂಗಶೆಟ್ಟಿ ಇದ್ದರು.

**

ಜೈಪುರದಿಂದ ತರಿಸಿರುವ ಬಸವೇಶ್ವರರ ಅಮೃತಶಿಲೆಯ ಸುಂದರ ಮೂರ್ತಿ ಅಪರೂಪ ದ್ದಾಗಿದೆ. ಮೂರ್ತಿ ಎರಡೂವರೆ ಅಡಿ ಎತ್ತರ, ಎರಡು ಅಡಿ ಅಗಲ ಇದೆ – ಬಸವರಾಜ ಧನ್ನೂರು, ದಿ ಗ್ರೇನ್‌ ಆ್ಯಂಡ್‌ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ.

**

ಪ್ರತಿಕ್ರಿಯಿಸಿ (+)