ಅರ್ಹತೆ ನಿಗದಿಗೊಳಿಸಿ

7

ಅರ್ಹತೆ ನಿಗದಿಗೊಳಿಸಿ

Published:
Updated:

ಚುನಾವಣೆಯಲ್ಲಿ ಸ್ಪರ್ಧಿಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ, ಟಿಕೆಟ್ ಸಿಗದ ಆಕಾಂಕ್ಷಿಗಳು ಮತ್ತೊಂದು ಪಕ್ಷಕ್ಕೆ ಜಿಗಿದು ಅಲ್ಲಿ ಅಭ್ಯರ್ಥಿಯಾಗುವುದು ಪ್ರತಿ ಚುನಾವಣೆ ಸಂದರ್ಭದಲ್ಲೂ ಸಾಮಾನ್ಯ ಎಂಬಂತಾಗಿದೆ. ಹೆಚ್ಚು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಏಕೈಕ ಉದ್ದೇಶ ಹೊಂದಿರುವ ಪಕ್ಷಗಳು, ಹೀಗೆ ‘ಜಿಗಿದು ಬರುವ’ ನಾಯಕರಿಗೆ ಮಣೆಹಾಕುತ್ತಲೂ ಇವೆ. ಹೀಗೆ ಟಿಕೆಟ್ ಕೊಡುವುದು ಎಷ್ಟು ಸರಿ? ಒಂದು ಪಕ್ಷದ ತತ್ತ್ವ ಸಿದ್ಧಾಂತಗಳನ್ನು ಮೆಚ್ಚಿ, ಆ ಪಕ್ಷಕ್ಕೆ ವೋಟು ಕೊಡುವ ಮತದಾರನಿಗೆ ಇದು ಒಂದು ರೀತಿ ಮೋಸ ಅಲ್ಲವೇ?

ಯಾವುದೇ ರಾಜಕೀಯ ಪಕ್ಷದಿಂದ ಚುನಾವಣಾ ಅಭ್ಯರ್ಥಿಯಾಗಬೇಕಾದರೆ ಇಂತಿಷ್ಟು ವರ್ಷ ಆ ಪಕ್ಷದ ಕಾರ್ಯಕರ್ತನಾಗಿರಬೇಕು ಎಂಬ ನಿಯಮ ರೂಪಿಸಿದರೆ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡುವವರಿಗೆ ಕಡಿವಾಣ ಹಾಕಿ, ಪ್ರಜಾತಂತ್ರದ ಪಾವಿತ್ರ್ಯವನ್ನು ರಕ್ಷಿಸಲು ಸಾಧ್ಯ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಸೂಕ್ತವಲ್ಲವೇ? ಇದರಿಂದ ಪಕ್ಷ ಆಧಾರಿತ ಚುನಾವಣೆಗೆ ನೈತಿಕ ಶಕ್ತಿ ತುಂಬಿದಂತೆಯೂ ಆಗುತ್ತದೆ. ಇಲ್ಲದಿದ್ದರೆ ಪಕ್ಷದ ಸಿದ್ಧಾಂತ– ತತ್ತ್ವ ನೋಡಿ ಮತ ನೀಡುವ ಮತದಾರನಿಗೆ, ತಾನು ಒಪ್ಪದ ತತ್ತ್ವ, ಸಿದ್ಧಾಂತ ಪ್ರತಿಪಾದಿಸುವ ವ್ಯಕ್ತಿಯೊಬ್ಬ ಪಕ್ಷಾಂತರ ಮಾಡಿ ಮತ ಪಡೆದು ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry