ಸಿಎಸ್‌ಕೆ–ರಾಯಲ್ಸ್‌ ನಡುವೆ ಕದನ ಕುತೂಹಲ

7
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧಕ್ಕೆ ಒಳಗಾಗಿ ಮರಳಿ ಬಂದ ತಂಡಗಳ ಹಣಾಹಣಿ

ಸಿಎಸ್‌ಕೆ–ರಾಯಲ್ಸ್‌ ನಡುವೆ ಕದನ ಕುತೂಹಲ

Published:
Updated:
ಸಿಎಸ್‌ಕೆ–ರಾಯಲ್ಸ್‌ ನಡುವೆ ಕದನ ಕುತೂಹಲ

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ್‌ ರಾಯಲ್ಸ್ ನಡುವಿನ ಪಂದ್ಯವು ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ತಮಿಳುನಾಡಿನ ವಿವಿಧ ಸಂಘಟನೆಗಳು ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು. ಆದ್ದರಿಂದ ಸಿಎಸ್‌ಕೆಯ ತವರಿನ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರದ ನಂತರ ಇಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದು.

ಮಾಜಿ ಚಾಂಪಿಯನ್ ತಂಡಗಳಾದ ಸಿಎಸ್‌ಕೆ ಮತ್ತು ರಾಯಲ್ಸ್ ಹಿಂದಿನ ಪಂದ್ಯಗಳನ್ನು ಸೋತು ಇಲ್ಲಿಗೆ ಬಂದಿವೆ. ಆದ್ದರಿಂದ ಜಯದ ಲಯಕ್ಕೆ ಮರಳಲು ಎರಡೂ ತಂಡಗಳು ಶ್ರಮಿಸಲಿವೆ. ರಾಜಸ್ಥಾನ್‌ ರಾಯಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ. ಆದರೆ ಸಿಎಸ್‌ಕೆ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳ ಖಾತೆಯಲ್ಲಿ ಈಗ ತಲಾ ನಾಲ್ಕು ಪಾಯಿಂಟ್‌ಗಳು ಇವೆ.

ಪಾಯಿಂಟ್ ಪಟ್ಟಿಯಲ್ಲಿ ಈ ತಂಡ ನಾಲ್ಕನೇ ಸ್ಥಾನದಲ್ಲಿದ್ದರೆ ರಾಜಸ್ಥಾನ್‌ ರಾಯಲ್ಸ್ ಐದನೇ ಸ್ಥಾನ ಗಳಿಸಿದೆ.

ನಿಷೇಧ ‘ಶಿಕ್ಷೆ’ ಮುಗಿಸಿ ಬಂದ ಉಭಯ ತಂಡಗಳಿಗೆ ಐಪಿಎಲ್ ಆರಂಭವಾಗುತ್ತಿದ್ದಂತೆ ಮತ್ತೆ ಪೆಟ್ಟು ಬಿದ್ದಿತ್ತು. ರಾಜಸ್ಥಾನ್‌ ರಾಯಲ್ಸ್‌ ನಾಯಕ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ ಈಚೆಗೆ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಹೀಗಾಗಿ ಐಪಿಎಲ್‌ನಿಂದಲೂ ಅವರಿಗೆ ನಿಷೇಧ ಹೇರಲಾಗಿತ್ತು. ಸಿಎಸ್‌ಕೆ ಪ್ರತಿಭಟನೆಯ ಬಿಸಿಯಿಂದಾಗಿ ತವರು ಅಂಗಣದಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ.

ಹೊಸ ನಾಯಕನ ನೇತೃತ್ವದಲ್ಲಿ ರಾಯಲ್ಸ್ ಆರಂಭದಲ್ಲೇ ನಿರಾಸೆಗೆ ಒಳಗಾಗಿತ್ತು. ಮೊದಲ ಪಂದ್ಯದಲ್ಲಿ  ಸನ್‌ರೈಸರ್ಸ್ ಎದುರು ಒಂಬತ್ತು ರನ್‌ಗಳಿಂದ ಸೋತಿತ್ತು. ನಂತರ ಚೇತರಿಸಿಕೊಂಡು ಎರಡು ಪಂದ್ಯಗಳನ್ನು ಗೆದ್ದಿತ್ತು. ಆದರೆ ಬುಧವಾರ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಈ ತಂಡವನ್ನು ಮಣಿಸಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಎದುರು ಗೆದ್ದು ಈ ಬಾರಿಯ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ನಂತರ ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ಗೆದ್ದಿತ್ತು. ಆದರೆ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ನೀರಸ ಆಟವಾಡಿ ನಿರಾಸೆ ಕಂಡಿತ್ತು.

ಸಂಜು ಸ್ಯಾಮ್ಸನ್ ಬಲ: ರಾಜಸ್ಥಾನ್‌ ರಾಯಲ್ಸ್ ತಂಡದ ಬ್ಯಾಟಿಂಗ್ ವಿಭಾಗ ಸಂಜು ಸ್ಯಾಮ್ಸನ್‌ ಅವರನ್ನು ನೆಚ್ಚಿಕೊಂಡಿದೆ. ಆರ್‌ಸಿಬಿ ಎದುರು ಅಜೇಯ 92 ರನ್‌ ಗಳಿಸಿದ್ದ ಅವರು ಟೂರ್ನಿಯಲ್ಲಿ ಈವರೆಗೆ ಒಟ್ಟು 185 ರನ್ ಕಲೆ ಹಾಕಿದ್ದಾರೆ. ರಹಾನೆಗೆ ನಿರೀಕ್ಷೆಗೆ ತಕ್ಕಂತೆ ಮಿಂಚಲು ಆಗಲಿಲ್ಲ.

ಕರ್ನಾಟಕದ ಕೆ.ಗೌತಮ್ ಒಳಗೊಂಡ ಬೌಲಿಂಗ್ ವಿಭಾಗ ರಾಯಲ್ಸ್‌ಗೆ ಭರವಸೆ ಮೂಡಿಸಿದೆ. ಬೆನ್ ಲಾಘ್ಲಿನ್‌, ಶ್ರೇಯಸ್ ಗೋಪಾಲ್‌ ಮುಂತಾದವರು ಮತ್ತೊಮ್ಮೆ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ಸಿಎಸ್‌ಕೆಗೆ ನಾಯಕ ಮಹೇಂದ್ರ ಸಿಂಗ್ ದೋನಿ, ಡ್ವೇನ್ ಬ್ರಾವೊ, ಸ್ಯಾಮ್‌ ಬಿಲಿಂಗ್ಸ್‌ ಅಂಬಟಿ ರಾಯುಡು ಮುಂತಾದವರು ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿದ್ದರೆ, ಶೇನ್‌ ವ್ಯಾಟ್ಸನ್‌, ಶಾರ್ದೂಲ್ ಠಾಕೂರ್‌, ಇಮ್ರಾನ್ ತಾಹಿರ್, ಹರಭಜನ್‌ ಸಿಂಗ್‌ ಮತ್ತು ರವೀಂದ್ರ ಜಡೇಜ ಮುಂತಾದವರು ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.

ಅಭಿಮಾನಿಗಳು ‍ಪುಣೆಗೆ ತೆರಳಲು ಸಿಎಸ್‌ಕೆಯಿಂದ ವಿಶೇಷ ರೈಲು

‌ಚೆನ್ನೈ: ಇಲ್ಲಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಗುರುವಾರ ಹಳದಿ ಬಣ್ಣವೇ ಕಂಗೊಳಿಸುತ್ತಿತ್ತು. ಎಲ್ಲಿ ನೋಡಿದರೂ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ಅಭಿಮಾನಿಗಳ ದಂಡು ಕಾಣುತ್ತಿತ್ತು.

ಶುಕ್ರವಾರ ಪೂಣೆಯಲ್ಲಿ ರಾಜಸ್ಥಾನ ರಾಯಲ್ಸ್‌ ಆಡಲಿರುವ ಸಿಎಸ್‌ಕೆ ತಂಡವು ಚೆನ್ನೈನಲ್ಲಿರುವ ತನ್ನ ಅಭಿಮಾನಿಗಳನ್ನು ಕರೆಸಿಕೊಳ್ಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. ಹಾಗಾಗಿ ನೂರಾರು ಅಭಿಮಾನಿಗಳು ಸಿಎಸ್‌ಕೆ ತಂಡದ ಹಳದಿ ಜರ್ಸಿ ತೊಟ್ಟು ಚೆನ್ನೈನಿಂದ ಪ್ರಯಾಣ ಆರಂಭಿಸಿದರು.

ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಉಚಿತ ಪಾಸ್‌, ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಸಿಎಸ್‌ಕೆ ತಂಡವೇ ಮಾಡಿದೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಕುರಿತು ತಮಿಳುನಾಡಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ ಸಿಎಸ್‌ಕೆ ತಂಡವು ತನ್ನ ತವರು ನೆಲದಲ್ಲಿ ಆಡಬೇಕಾದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ.

ಪಂದ್ಯದ ಸಮಯ: ರಾತ್ರಿ 8

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry