ರಾಜ್ಯದಲ್ಲಿ ಮದ್ಯದ ಕೊರತೆ ಸಾಧ್ಯತೆ

7

ರಾಜ್ಯದಲ್ಲಿ ಮದ್ಯದ ಕೊರತೆ ಸಾಧ್ಯತೆ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆ ಪ್ರಯುಕ್ತ ಅಬಕಾರಿ ಇಲಾಖೆಯು ಮದ್ಯ ಸರಬರಾಜಿನಲ್ಲಿ ಮಿತಿ ವಿಧಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಮದ್ಯದ ಲಭ್ಯತೆಯಲ್ಲಿ ಕೊರತೆ ಎದುರಾಗುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯದ ಎಲ್ಲ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ಇಲಾಖೆಯು ನಿರ್ದಿಷ್ಟ ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡುತ್ತಿದೆ. ಮಾರಾಟಗಾರರು ಕೇಳಿದಷ್ಟು ಮದ್ಯ ಸರಬರಾಜು ಮಾಡುತ್ತಿಲ್ಲ. ಇದಕ್ಕೆ ಹಲವು ಮಾರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇಲಾಖೆಯು ಮಾರ್ಚ್‌ ಅಂತ್ಯಕ್ಕೆ ₹18,050 ಕೋಟಿ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿದೆ. ಆದರೆ, ಈಗ ಇಲಾಖೆಯ ಅಧಿಕಾರಿಗಳೇ ಕಡಿಮೆ ಪ್ರಮಾಣದಲ್ಲಿ ಮದ್ಯ ಪೂರೈಸುತ್ತಿದ್ದಾರೆ. ಬೇಡಿಕೆ ಇದ್ದಷ್ಟು ಮದ್ಯ ಕೊಡುತ್ತಿಲ್ಲ’ ಎಂದು ಯಲಹಂಕದ ಬಾರೊಂದರ ಮಾಲೀಕ ಗೋವರ್ಧನ್ ತಿಳಿಸಿದರು.

‘ಕಳೆದ ವರ್ಷದ ಮಾರಾಟ ಪ್ರಮಾಣ ಗಮನಿಸಿಯೇ ಇಲಾಖೆಯು ಈ ವರ್ಷ ಮದ್ಯ ಪೂರೈಸುತ್ತದೆ. ನಮ್ಮ ಬಾರ್‌ನಲ್ಲಿ ಪ್ರತಿವರ್ಷವೂ ಮದ್ಯ ಮಾರಾಟದ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಬಾರಿ ಮದ್ಯ ಪೂರೈಕೆ ಕಡಿಮೆ ಆಗಿದ್ದರಿಂದ, ಏಪ್ರಿಲ್‌ ಅಂತ್ಯ ಹಾಗೂ ಮೇನಲ್ಲಿ ಮಾರಾಟಕ್ಕೆ ಮದ್ಯವೇ ಇಲ್ಲದ ಸ್ಥಿತಿ ಬಂದರೂ ಆಶ್ವರ್ಯವಿಲ್ಲ’ ಎಂದರು.

ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಗೋವಿಂದರಾಜ್‌ ಹೆಗ್ಡೆ, ‘ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧವಾಗಿ ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ. ಈಗ ಚುನಾವಣೆ ಬಂದಿದ್ದು, ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಮದ್ಯ ಪೂರೈಕೆ ಮಾಡುತ್ತಿಲ್ಲ. ಪುನಃ ಮಾರಾಟಗಾರರು ನಷ್ಟ ಅನುಭವಿಸಲಿದ್ದಾರೆ’  ಎಂದರು.

ಇಲಾಖೆಯ ಉಪ ಆಯುಕ್ತ ಶಿವನಗೌಡ, ‘ಚುನಾವಣಾ ಆಯೋಗದ ಸೂಚನೆ ಮೇರೆಗೆ ಮದ್ಯ ಪೂರೈಕೆಗೆ ಮಿತಿ ಹೇರಿದ್ದೇವೆ. ಚುನಾವಣೆಗಾಗಿ ಮದ್ಯ ದುರುಪಯೋಗವಾಗುವುದನ್ನು ತಡೆಗಟ್ಟಲಿದ್ದೇವೆ. ಜತೆಗೆ, ಮಾರಾಟಗಾರರಿಗೆ ನಷ್ಟವಾಗದಂತೆ ಮದ್ಯ ಪೂರೈಕೆ ಮಾಡಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry