ಮಂಟೇಸ್ವಾಮಿ ಕೊಂಡೋತ್ಸವ

7
ಮಳೆಗಾಗಿ ಮಧ್ಯಾಹ್ನ ಕೊಂಡ ನಡೆಸುವ ವಾಡಿಕೆ

ಮಂಟೇಸ್ವಾಮಿ ಕೊಂಡೋತ್ಸವ

Published:
Updated:
ಮಂಟೇಸ್ವಾಮಿ ಕೊಂಡೋತ್ಸವ

ಚಾಮರಾಜನಗರ: ಮಂಟೇಸ್ವಾಮಿ ಕೊಂಡೋತ್ಸವ ನಗರದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ಉಪ್ಪಾರ ಬೀದಿಯ ಮಂಟೇಸ್ವಾಮಿ ದೇವಸ್ಥಾನದ ಬಳಿ ಭಕ್ತಿ ಮೇಳೈಸಿತ್ತು. ಮನೆಗಳ ಮುಂದೆ ರಂಗೋಲಿ ಬಿಡಿಸಲಾಗಿತ್ತು.

ದೇವಸ್ಥಾನದ ಮುಂದೆ ಭಕ್ತರು ನೀಡಿದ್ದ ಕಟ್ಟಿಗೆಗಳನ್ನು ವಾರದ ಹಿಂದೆಯೇ ಜೋಡಿಸಲಾಗಿತ್ತು. ಅದಕ್ಕೆ ಗುರುವಾರ ರಾತ್ರಿ ಬೆಂಕಿ ಹಾಕಿ ಸುಮಾರು 10 ಅಡಿಯಷ್ಟು ಉದ್ದ ಕೊಂಡ ನಿರ್ಮಿಸಲಾಗಿತ್ತು.

ಕೊಂಡ ಹಾಯುವವರು ಉಪವಾಸ ಇರುವುದು ವಾಡಿಕೆ. ಮಧ್ಯಾಹ್ನ 1.15ರ ಸುಮಾರಿನಲ್ಲಿ ನಿಗಿನಿಗಿ ಕೆಂಡದ ಮೇಲೆ ಭಕ್ತರು ಪಾದವಿಟ್ಟು ಸಾಗಿದರು. ಆ ವೇಳೆ ನಾಗರಿಕರಿಂದ ಜಯಘೋಷ ಮುಗಿಲು ಮುಟ್ಟಿತು. ಕಂಡಾಯ ಹೊತ್ತಿದ್ದ ಹಾಗೂ ಹರಕೆ ಹೊತ್ತಿದ್ದ 23 ಮಂದಿ ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಈ ಪೈಕಿ 13 ವರ್ಷದ ಬಾಲಕ ಕೊಂಡ ಹಾಯ್ದು ವಿಶೇಷವಾಗಿತ್ತು.

ಕೊಂಡೋತ್ಸವ ನೋಡಲು ದೇವಾಲಯದ ಆವರಣದಲ್ಲಿ ನೂರಾರು ಮಂದಿ ಭಕ್ತರು ನೆರೆದಿದ್ದರು. ಕಟ್ಟಡಗಳು, ಮನೆಗಳನ್ನೆದೇ ಕಿಕ್ಕಿರಿದು ಕೊಂಡ ವೀಕ್ಷಿಸಿದರು.

ಇದಕ್ಕೂ ಮೊದಲು ಬೆಳಿಗ್ಗೆ ಉಪ್ಪಾರ ಬಡಾವಣೆಯ ಯಜಮಾನರ ನೇತೃತ್ವದಲ್ಲಿ ದೊಡ್ಡ ಅರಸನ ಕೊಳಕ್ಕೆ ಮಂಟೇಸ್ವಾಮಿ ಕಂಡಾಯ ಹಾಗೂ ಬಿರುದು ಬಾವಲಿಗಳೊಂದಿಗೆ ತೆರಳಿ ಅವುಗಳಿಗೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸತ್ತಿಗೆ, ಸೂರಪಾನಿಗಳೊಂದಿಗೆ ಕಂಡಾಯ ಮೆರವಣಿಗೆ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ ಹಾಗೂ ಸಂತೇಮರಹಳ್ಳಿ ವೃತ್ತದ ಮಾರ್ಗವಾಗಿ ದೇವಸ್ಥಾನದ ಮುಂಭಾಗಕ್ಕೆ ತಲುಪಿತು.

ಬೀದಿ ಉದ್ದಗಲಕ್ಕೂ ಒಂದೆರಡು ದಿನಗಳಿಂದಲೇ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಉಪ್ಪಾರ ಸಮುದಾಯದ ಯುವಕರು ಹೋಳಿ ಸಂಭ್ರಮದಲ್ಲಿ ತೊಡಗಿದ್ದರು. ಪರಸ್ಪರ ಹೋಳಿ ಎರಚಿಕೊಂಡು ಸಡಗರಪಟ್ಟರು. ಮುನ್ನೆಚ್ಚರಿಕೆ ಕ್ರಮವಾಗಿ ಸಂತೇಮರಹಳ್ಳಿ ವೃತ್ತದ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಕೊಂಡ ತಣಿಸಿದ ಮಳೆರಾಯ!

ಚಾಮರಾಜನಗರ: ಮಳೆ ಬರುವಿಕೆಗಾಗಿಯೇ ಇಲ್ಲಿ ಕೊಂಡವನ್ನು ನಸುಕಿನ ಬದಲಿಗೆ ಮಧ್ಯಾಹ್ನದ ಉರಿ ಬಿಸಿಲಲ್ಲಿ ಆಚರಿಸುವುದು ವಾಡಿಕೆ. ಕೊಂಡದ ದಿನ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆಯೂ ಜನಮಾನಸದಲ್ಲಿದೆ. ಅದರಂತೆ ಶುಕ್ರವಾರ ಮಧ್ಯಾಹ್ನ ಕೊಂಡ ನೆರವೇರುತ್ತಿದ್ದಂತೆ ಮಳೆ ಕಾಣಿಸಿಕೊಂಡಿತು. ರಾತ್ರಿ ಮತ್ತೆ ಬಂದ ಮಳೆಯು ಬಿಸಿಲಿನ ತಾಪವನ್ನು ಕಡಿಮೆ ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry