ಮೂರೂ ಪಕ್ಷಗಳ ಡಿಎನ್‌ಎ ಒಂದೇ

7

ಮೂರೂ ಪಕ್ಷಗಳ ಡಿಎನ್‌ಎ ಒಂದೇ

Published:
Updated:
ಮೂರೂ ಪಕ್ಷಗಳ ಡಿಎನ್‌ಎ ಒಂದೇ

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಕಳಂಕಿತರು, ಮಾಫಿಯಾ ಮತ್ತು ಬಂಡವಾಳಶಾಹಿಗಳಿಗೆ ಮಣೆ ಹಾಕಿವೆ. ಎಲ್ಲರ ಡಿಎನ್‌ಎ ಒಂದೇ. ಆಮ್‌ ಆದ್ಮಿ ಪಕ್ಷ ಜನ ಸಾಮಾನ್ಯರ ದೈನಂದಿನ ಕಷ್ಟಗಳಿಗೆ ಸ್ಪಂದಿಸುವ ಪಕ್ಷ. 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷಕ್ಕೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎನ್ನುತ್ತಾರೆ ‘ಆಮ್‌ ಆದ್ಮಿ ಪಕ್ಷ’ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ.

* ಯಾವ ಕಾರಣಕ್ಕೆ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು. ಎಷ್ಟು ಸೀಟು ಗೆಲ್ಲುವ ಗುರಿ ಇದೆ?

ಹೊಸ ಬಗೆಯ ರಾಜಕಾರಣ ಮುಂದಿಟ್ಟಿದ್ದೇವೆ. ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಜನರನ್ನು ಒಡೆಯುವ, ಭಾವನೆಯನ್ನು ಕೆರಳಿಸುವ ಮೂಲಕ ಮತಗಳನ್ನು ಕೇಳುತ್ತಿಲ್ಲ. ಹಣ, ತೋಳ್ಬಲದಲ್ಲಿ ವಿಶ್ವಾಸ ಇಡದೇ, ಜನಪರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳುತ್ತಿದ್ದೇವೆ. ರಾಜಕೀಯ ಪಕ್ಷವೊಂದು ಮೊದಲ ಬಾರಿಗೆ ವಿಭಿನ್ನವಾಗಿ ಮಾತನಾಡುತ್ತಿರುವುದನ್ನು ನೋಡಿದವರು, ಏನ್ರಿ ಹೀಗೆಲ್ಲಾ ಮಾತಾಡುತ್ತಿದ್ದೀರಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಹೊಸ ಐಡಿಯಾಗಳನ್ನು ಒಪ್ಪುತ್ತಾರೆ. ಎಷ್ಟು ಸೀಟು ಗೆಲ್ಲಬಹುದು ಎಂಬುದನ್ನು ಈಗಲೇ ಹೇಳಲು ಆಗಲ್ಲ.

* ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್ ಅಬ್ಬರ ಮಧ್ಯೆ ಆಮ್‌ ಆದ್ಮಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೆ?

ಕಾಂಗ್ರೆಸ್- ಬಿಜೆಪಿ ಅಬ್ಬರದ ಪ್ರಚಾರದ ಮಧ್ಯೆಯೂ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮದು ಚುನಾವಣೆಗಾಗಿ ಹುಟ್ಟಿಕೊಂಡ ಪಕ್ಷವಲ್ಲ. ಜನಪರ ಹೋರಾಟವೇ ಪಕ್ಷದ ಮೂಲ ಉದ್ದೇಶ. ನಾವು ಚುನಾವಣೆ ಸಮಯದಲ್ಲಿ ಜನರ ಮುಂದೆ ಬಂದು ಮರೆಯಾಗುವ ಜಾಯಮಾನದವರಲ್ಲ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಚುನಾವಣೆ ಮತ್ತು ರಾಜಕಾರಣ ಎಂಬುದು ವ್ಯಾಪಾರ. ಜನರಿಗೆ ಬದುಕು ದೊಡ್ಡ ವಿಷಯ. ಪ್ರತಿ ವ್ಯಕ್ತಿ ತನ್ನ ಗಳಿಕೆಯ ಶೇ 40 ರಷ್ಟನ್ನು ಹಣವನ್ನು ಮಕ್ಕಳ ಶಿಕ್ಷಣಕ್ಕೇ ಖರ್ಚು ಮಾಡುತ್ತಾನೆ. ಆರೋಗ್ಯದ್ದೂ ಸೇರಿದರೆ ಶೇ 50 ರಷ್ಟು ಆದಾಯದ ಪಾಲು ಅಲ್ಲಿಗೇ ಹೋಗುತ್ತದೆ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯದ ಕ್ಷೇತ್ರದಲ್ಲಿ ಮಾಡಿರುವ ಕೆಲಸ ದೇಶಕ್ಕೆ ಮಾದರಿ.

* ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷದಲ್ಲಿದ್ದ ಹುಮ್ಮಸ್ಸು ಈ ಚುನಾವಣೆಯಲ್ಲಿ ಕಾಣಿಸುತ್ತಿಲ್ಲವಲ್ಲ?

ಯಾವುದೇ ಹೊಸ ಐಡಿಯಾಗಳು ಬಂದರೂ ಅದು ಜನರ ಮನಸ್ಸಿನಲ್ಲಿ ಬೇರೂರಿ ಮನ್ನಣೆಗಳಿಸಲು ಸ್ವಲ್ಪ ದಿನ ಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಎಂಜಿನಿಯರ್, ವೈದ್ಯರು, ಅಟೋ ಡ್ರೈವರ್ ಹೀಗೆ ಎಲ್ಲರ ವರ್ಗದವರೂ ಇದ್ದಾರೆ. ಚುನಾವಣೆ ಸಮಯದಲ್ಲಿ ಎಲ್ಲ ಕಾರ್ಯಕರ್ತರೂ ಬಂದು ಕೆಲಸ ಮಾಡುತ್ತಾರೆ.

* ದೆಹಲಿಯಲ್ಲಿರುವ ಬಹುತೇಕ ಸಮಸ್ಯೆಗಳು ಬೆಂಗಳೂರಿನಲ್ಲೂ ಇವೆ. ಅಲ್ಲಿ ಜನರ ಮೇಲೆ ಮೋಡಿ ಮಾಡಿದ ಹಾಗೆ ಇಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?

ದೇಶದಲ್ಲಿ ಮಧ್ಯಮ ಮತ್ತು ಬಡ ವರ್ಗದವರಿಗೆ ಕಷ್ಟ ಇದೆ. ಬಡವರು ಎಲ್ಲದ್ದಕ್ಕೂ ಸರ್ಕಾರವನ್ನೇ ಅವಲಂಬಿಸಿದ್ದಾರೆ. ಶ್ರೀಮಂತರಿಗೆ ಅಂತಹ ಸಮಸ್ಯೆ ಇಲ್ಲ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲವು ಸಾಮ್ಯತೆಗಳು ಇವೆ. ದೆಹಲಿ ಚಿಕ್ಕ ರಾಜ್ಯ. ಆದರೆ, ಕರ್ನಾಟಕ ದೊಡ್ಡ ರಾಜ್ಯ. ನಾವು ರಾಜಕೀಯಕ್ಕೆ ಪದಾರ್ಪಣೆ ಮಾಡಿದ ತಕ್ಷಣವೇ ಮ್ಯಾಜಿಕ್ ಆಗುತ್ತದೆ ಎನ್ನುವ ಭ್ರಮೆಯೂ ಇಲ್ಲ. ರಾಜ್ಯದಲ್ಲಿ ಬೆಳೆಯಲು ಉತ್ತಮ ಅವಕಾಶವಿದೆ.

* ನವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇನ್ನೂ ಏಕೆ ಇತ್ತ ತಲೆ ಹಾಕಿಲ್ಲ?

ವಾರದ ಅಂತ್ಯದಲ್ಲಿ ಕೇಜ್ರಿವಾಲ್ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಪ್ರಚಾರಕ್ಕೆ ಬರುತ್ತಾರೆ.

* ಚುನಾವಣೆಯಲ್ಲಿ ನಿಮಗೆ ಹಣ ಎಲ್ಲಿಂದ ಬರುತ್ತದೆ?

ಚುನಾವಣಾ ಪ್ರಚಾರಕ್ಕೆ ಜನರೇ ಹಣ ನೀಡುತ್ತಾರೆ. ಉದ್ಯಮಿಗಳಿಂದ ಹಣ ಪಡೆಯುವುದಿಲ್ಲ. ನಮ್ಮಲ್ಲಿ ಎಷ್ಟು ಹಣವಿದೆಯೋ ಅಷ್ಟನ್ನು ಬಳಸಿಕೊಂಡೇ ಕೆಲಸ ಮಾಡುತ್ತೇವೆ. ಪತ್ರಿಕೆ ಮತ್ತು ಟಿ.ವಿಯಲ್ಲಿ ಜಾಹೀರಾತು ಕೊಡಲು ಹಣವಿಲ್ಲ. ಮನೆ- ಮನೆ ಪ್ರಚಾರದ ಮೂಲಕವೇ ಜನರನ್ನು ತಲುಪಿ ಅವರಿಗೆ ಪಕ್ಷದ ವಿಚಾರವನ್ನು ಹೇಳುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಉದ್ಯಮಿಗಳು ಹಣ ನೀಡುತ್ತಾರೆ. ಬಳಿಕ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಾವು ಜನ ಪ್ರೀತಿಯಿಂದ ನೀಡುವ ಸಣ್ಣ ಮೊತ್ತವನ್ನು ಪಡೆಯುತ್ತೇವೆ. ಅವರಿಗೆ ಸ್ವಹಿತಾಸಕ್ತಿಯ ಅಪೇಕ್ಷೆಗಳು ಇರುವುದಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಲ್ಯಾಂಡ್ ಮಾಫಿಯಾ ಮತ್ತು ಬಂಡವಾಳಶಾಹಿಗಳಿಂದ ಹಣ ಪಡೆಯುತ್ತಾರೆ. ಬಳಿಕ ಅವರ ಕೆಲಸ ಮಾಡುತ್ತಾರೆ.

* ಬಿಜೆಪಿ ಗಣಿ ಹಗರಣದ ಕಳಂಕಿತ ರೆಡ್ಡಿ ಸಹೋದರರಿಗೆ ಟಿಕೆಟ್‌ ನೀಡಿದೆ. ಇದರಿಂದ ಚುನಾವಣಾ ರಾಜಕೀಯದ ಮೇಲೆ ಬೀರುವ ಪರಿಣಾಮಗಳೇನು?

ರೆಡ್ಡಿ ಸೋದರರಿಗೆ ಟಿಕೆಟ್ ನೀಡಿದ್ದೂ ಮಾತ್ರವಲ್ಲದೆ, ರಾಜ್ಯದ ಹಿತಾಸಕ್ತಿಯಿಂದ ಜನಾರ್ದನ ರೆಡ್ಡಿಯವರನ್ನು ಪ್ರಚಾರದಲ್ಲಿ ತೊಡಗಿಸಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಇದರಿಂದ ಇವರ ಉದ್ದೇಶ ಏನು ಎಂಬುದು ಸ್ಪಷ್ಟ.  ಮಾಫಿಯಾಗಳನ್ನು ಪೋಷಿಸುವುದರಲ್ಲಿ ಮೂರೂ ಪಕ್ಷಗಳು ಕಮ್ಮಿ ಇಲ್ಲ. ಬಿಜೆಪಿ ರೆಡ್ಡಿ ಸಹೋದರರನ್ನು ಪೋಷಿಸಿದರೆ, ಕಾಂಗ್ರೆಸ್ ಆನಂದ್ ಸಿಂಗ್, ಲಾಡ್ ಸಹೋದರರು, ಅಶೋಕ್ ಖೇಣಿಯವರಿಗೆ ಅಭಯ ನೀಡಿದೆ. ಖೇಣಿಗೆ ಸೇರಿದ ನೈಸ್ ಕಂಪನಿ ಸರ್ಕಾರಿ ಭೂಮಿಯನ್ನು ಕಬಳಿಸಿದೆ ಎಂದು ಸರ್ಕಾರದ ಸಮಿತಿಯೇ ವರದಿ ನೀಡಿದೆ. ಆದರೆ, ಅವರಿಗೆ ರೆಡ್ ಕಾರ್ಪೆಟ್‌ ಹಾಸಿ ಸ್ವಾಗತ ನೀಡಿದೆ.

* ನಿಮ್ಮ ಪಕ್ಷ ಕೆಲವು ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಿಮ್ಮ ಬೆಂಬಲ ಯಾರಿಗೆ?

ಜನಪರ ಕೆಲಸ ಮಾಡುವ, ಲೋಕಾಯುಕ್ತಕ್ಕೆ ಬಲ ನೀಡುವ ಮತ್ತು ರೈತರ ಪರ ಕೆಲಸ ಮಾಡುವವರಿಗೆ ತಾತ್ವಿಕ ಬೆಂಬಲ ನೀಡುತ್ತೇವೆ. ಕಾಂಗ್ರೆಸ್- ಬಿಜೆಪಿ ಇಲ್ಲಿ ಹಾವು ಮುಂಗುಸಿ ರೀತಿ ಕಿತ್ತಾಡುತ್ತಾರೆ. ಮಿಜೋರಾಂನ ಸ್ಥಳೀಯ ಸಂಸ್ಥೆಯೊಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಗ್ಗೂಡಿ ಅಧಿಕಾರ ನಡೆಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry