ಶುಕ್ರವಾರ, ಮಾರ್ಚ್ 5, 2021
21 °C

ನವರಸಗಳ ನಿರೂಪಣೆ ‘ಕುರುಕ್ಷೇತ್ರ’ ಪ್ರದರ್ಶನ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ನವರಸಗಳ ನಿರೂಪಣೆ ‘ಕುರುಕ್ಷೇತ್ರ’ ಪ್ರದರ್ಶನ

ಮಹಾಭಾರತ, ರಾಮಾಯಣಗಳು ಕ್ಷಯವಾಗದ ಕಥಾಸಂಕಲಗಳು. ಎಲ್ಲ ಕಾಲದಲ್ಲಿಯೂ, ಎಲ್ಲ ಪ್ರದೇಶಗಳಲ್ಲಿಯೂ ಈ ಮಹಾಕಾವ್ಯಗಳ ಉಪಕತೆಗಳು ನಾಟಕ, ಯಕ್ಷಗಾನ, ಗೀತೆ, ನೃತ್ಯ ಸೇರಿದಂತೆ ವಿವಿಧ ಜನಪದ ಪ್ರಕಾರಗಳಾಗಿ ಜನರ ಮನದಲ್ಲಿ ಅಚ್ಚೊತ್ತಿವೆ.

ನವರಸಗಳ ಅಭಿವ್ಯಕ್ತಿಗೂ ಅವಕಾಶವಿರುವ ಕುರುಕ್ಷೇತ್ರದ ಯದ್ಧವಂತೂ ಅನೇಕ ನಾಟಕಗಳಾಗಿ ಜನಮನ್ನಣೆ ಗಳಿಸಿದೆ. ಸದ್ಯ ಎಂ.ಗಣೇಶ ಹೆಗ್ಗೋಡು ಅವರು ಕಂಪೆನಿ ನಾಟಕಗಳ ಮಾದರಿಯಲ್ಲಿ ‘ಕುರುಕ್ಷೇತ್ರ’ ನಾಟಕವನ್ನು ನಿರ್ದೇಶಿಸಿದ್ದಾರೆ.

ಬಿ. ಪುಟ್ಟಸ್ವಾಮಯ್ಯ ಅವರ ಕುರುಕ್ಷೇತ್ರ, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಬಿ ಪಿ.ವಜ್ರಪ್ಪ, ಕಲ್ಲೂರು ಶ್ರೀನಿವಾಸ್ ಅವರ ನಾಟಕಗಳನ್ನು ಆಧರಿಸಿ ರಚಿಸಲಾದ ‘ಕುರುಕ್ಷೇತ್ರ’ ರಾಜ್ಯಾದ್ಯಂತ 19 ಪ್ರದರ್ಶನಗಳನ್ನು ಕಂಡಿದೆ. ಬೆಂಗಳೂರಿನಲ್ಲಿ ಮೊದಲಬಾರಿಗೆ ಶನಿವಾರ (ಮೇ 5) ರಂಗಶಂಕರದಲ್ಲಿ ಪ್ರದರ್ಶನವಾಗಲಿದೆ.

ಬಿ. ಪುಟ್ಟಸ್ವಾಮಯ್ಯ ಅವರ ‘ಕುರುಕ್ಷೇತ್ರ’ ನಾಟಕವನ್ನು ವಿವಿಧ ನಾಟಕ ಕಂಪೆನಿಗಳು ಅನೇಕ ಬದಲಾವಣೆಗಳೊಂದಿಗೆ ಪ್ರದರ್ಶಿಸಿವೆ. ಗುಬ್ಬಿ ವೀರಣ್ಣ ಕಂಪೆನಿ ನಾಟಕದ ಮೂಲಕ ವೃತ್ತಿ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನು ಇದು ಮೂಡಿಸಿತ್ತು. ಮಹಾಭಾರತದ ಮೂಲ ಕಥಾ ವಸ್ತುವಿನ ಜೊತೆಗೆ, ವಿವಿಧ ನಾಟಕ ಕಂಪೆನಿಯ ಪ್ರಯೋಗಗಳನ್ನು ಒಟ್ಟುಗೂಡಿಸಿ ‘ಸತ್ಯ ಶೋಧನ ರಂಗಸಮುದಾಯ ಹೆಗ್ಗೋಡು’, ‘ಜನಮನದಾಟ’ ತಂಡಕ್ಕೆ ಹೊಸ ನಾಟಕ ರಚಿಸಿತ್ತು. ಸ್ಮಶಾನ ಕುರುಕ್ಷೇತ್ರ ನಾಟಕದ ಕೆಲ ಭಾಗಗಳನ್ನು ಸಹ ಇದಕ್ಕೆ ಪೋಣಿಸಲಾಗಿದೆ. ವಿವಿಧ ಮೂಲಗಳಿಂದ ‘ಕುರುಕ್ಷೇತ್ರ’ ನಾಟಕದ ಕಂದ ಪದ್ಯ ಹಾಡುಗಳನ್ನು ಒಟ್ಟಾಗಿಸಿಕೊಂಡು ಪ್ರಸ್ತುತ ಪ್ರಯೋಗವನ್ನು ರೂಪಿಸಲಾಗಿದೆ.

ನಾಟಕದ ಆರಂಭದಲ್ಲಿ ವಿರಾಟ ನಗರದಿಂದ ಬರುವ ಕೃಷ್ಣನು ಮುಂದೆ ಒದಗಬಹುದಾದ ಯುದ್ಧದ ಮುನ್ಸೂಚನೆ ಕೊಡುತ್ತಾನೆ.  ನಾಟಕದ ಪೂರ್ವಾರ್ಧ ಯುದ್ಧವೇ ಅಥವಾ ಸಂಧಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಗುತ್ತದೆ. ಹಸ್ತಿನಾವತಿಗೆ ತೆರಳುವ ಕೃಷ್ಣನಿಗೆ ಆಗುವ ಅಪಮಾನದ ಮುಖೇನ ದಾಯಾದಿ ಕಲಹ, ಅಸೂಯೆ, ಮತ್ಸರ, ಸೇಡು ಸೇರಿದಂತೆ ಮನಸ್ಸಿನ ಪಲ್ಲಟಗಳನ್ನು ಹೆಣೆಯಲಾಗಿದೆ. ದುರ್ಯೋಧನನ ದರ್ಪ, ದ್ರೌಪದಿಯ ಹತಾಶೆ, ಸೇಡು, ಶಕುನಿಯ ಕುತಂತ್ರ, ಗಾಂಧಾರಿ, ಕುಂತಿಯ ಪುತ್ರ ವ್ಯಾಮೋಹ ಹೀಗೆ ಮಾನವೀಯ ಭಾವನೆಗಳ ಸೇತುವೆಯನ್ನೂ ನಾಟಕ ನಿರೂಪಿಸುತ್ತದೆ.

2.5 ಗಂಟೆಯ ಅವಧಿಯ ಸಂಗೀತಮಯ ನಾಟಕದಲ್ಲಿ 45 ಹಾಡುಗಳಿವೆ. ರವಿಕುಮಾರ್ ಬೆಣ್ಣೆ, ಭರತ್‌ ಡಿಂಗ್ರಿ ಮತ್ತು ಪ್ರಶಾಂತ್‌ ಶಿರಸಿ ಅವರ ಸಂಗೀತ ಸಂಯೋಜಿಸಿದ್ದಾರೆ. ಪ್ರತಿ ಪಾತ್ರವು ಇಲ್ಲಿ ಹಾಡುತ್ತದೆ. ಉಪದೇಶದ ಹಾಡು, ಪ್ರೀತಿಯ ಹಾಡು, ಕುರಣಾ, ರ್ರೌದ್ರ, ಭೀಭತ್ಸ, ಶಾಂತ ಹೀಗೆ ನವರಸಗಳೂ ಹಾಡುಗಳ ಮೂಲಕವೇ ಬಿಂಬಿತವಾಗುತ್ತದೆ. ಹಳೆಯ ಶೈಲಿಯ ರಂಗಸಂಗೀತ ಇದರಲ್ಲಿದೆ. ರಂಗಗೀತೆಗಳ ಗಾಯಕ ಆರ್ ಪರಮಶಿವನ್‌ ಅವರು ಹಾಡುತ್ತಿದ್ದ ಮಾದರಿಯನ್ನು ನಾಟಕದಲ್ಲಿ ಬಳಸಲಾಗಿದೆ.

‘ಮಹಾಭಾರತವನ್ನು ಪರಿಷ್ಕರಿಸಿ ಹೊಸಕಾಲಕ್ಕೆ ಹೊಂದಿಸುವ ಯಾವ ಅಗತ್ಯವೂ ಇಲ್ಲ. ನಮ್ಮ ನಡುವೆ ಇಂದಿಗೂ, ಭೀಮ, ಕರ್ಣ, ಶಕುನಿಗಳಿದ್ದಾರೆ. ಮಹಾಭಾರತ ಎಲ್ಲಕಾಲಕ್ಕೂ ಸಲ್ಲುವ ಕತೆ. ಆದಾಗ್ಯೂ ಪ್ರಸ್ತುತ ಸನ್ನಿವೇಶಕ್ಕೆ ಅನಗತ್ಯ ಘಟನೆಗಳನ್ನು ಬಳಸಿಲ್ಲ. ಇಂದು ನಾಟಕ ಏನನ್ನೂ ಮಾತನಾಡಬೇಕೋ ಅದನ್ನು ಮಾತ್ರ ಕಟ್ಟಿಕೊಟ್ಟಿದ್ದೇವೆ’ ಎನ್ನುತ್ತಾರೆ ಗಣೇಶ್‌.

ಗಣೇಶ್ 2005 ರಲ್ಲಿ ‘ನೀನಾಸಂ ರಂಗ ಶಿಕ್ಷಣ ಕೇಂದ್ರ’ದ ವಿದ್ಯಾರ್ಥಿಗಳಿಗೆ ಮೊದಲಬಾರಿಗೆ ಈ ನಾಟಕ ಕಲಿಸಿದ್ದರು. ನಂತರ ಜನಮನದಾಟ ರಂಗತಂಡ, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನ ನೀಡಿತು. ಶಿವಮೊಗ್ಗದಲ್ಲಿ ನಡೆದ ವಿಶ್ವಮಾನವ ಅಂತರರಾಷ್ಟ್ರೀಯ ರಂಗೋತ್ಸವದಲ್ಲಿಯೂ ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು.

‘ವೇಷಭೂಷಣ, ನಾಟಕದ ವೇದಿಕೆ ಎಲ್ಲವೂ ಕಂಪೆನಿ ನಾಟಕವನ್ನು ಹೋಲುತ್ತಿದೆ. ಆದರೆ ಜಗಮಗಿಸುವ ಸೆಟ್ಟಿನ ಬದಲಾಗಿ ಎಲ್ಲವನ್ನೂ ಸಾಂಕೇತಿಕವಾಗಿ ಬಳಸಿಕೊಂಡಿದ್ದೇವೆ. ಪಾತ್ರಧಾರಿಗಳ ಅಭಿನಯ ಎದ್ದುಕಾಣುವಂತೆ ನಾಟಕ ಹೆಣೆಯಲಾಗಿದೆ. 12 ಕಲಾವಿದರು ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಗಣೇಶ್‌

‘ರಾಜ್ಯದ ವಿವಿಧ ಹಳ್ಳಿಗಳಲ್ಲಿ ನಾಟಕ ನಡೆದ ನಂತರ ಜನರು ಮೆಚ್ಚುಗೆಯ ಸಂಕೇತವಾಗಿ ತಾವಾಗಿಯೇ ಬಂದು ದುಡ್ಡು ಕೊಡುತ್ತಿರುವುದು ನಾಟಕಕ್ಕೆ ಸಿಗುತ್ತಿರುವ ಜನಪ್ರಿಯತೆಯ ಪ್ರತೀಕ’ ಎನ್ನುವುದು ಗಣೇಶ್‌ ಅವರ ಅಭಿಪ್ರಾಯ.

ಕುರುಕ್ಷೇತ್ರ ನಾಟಕ ಪ್ರದರ್ಶನ: ನಿರ್ದೇಶನ–ಎಂ.ಗಣೇಶ್‌ ಹೆಗ್ಗೂಡು. ತಂಡ–ಜನಮನದಾಟ. ಆಯೊಜನೆ–ಸತ್ಯಶೋಧನ ರಂಗಸಮುದಾಯ ಹೆಗ್ಗೂಡು. ಸ್ಥಳ–ರಂಗಶಂಕರ, ಜೆ.ಪಿ.ನಗರ. ಶನಿವಾರ ರಾತ್ರಿ 7.30. ಸಂಪರ್ಕ–9902617950 ಟಿಕೇಟ್‌ ದರ– ₹150

‘Beg Borrow ಅಳಿಯ’ ಇಂದು

ಪ್ರವರ ಆರ್ಟ್ ಸ್ಟುಡಿಯೋ ತಂಡವು ‘Beg Borrow ಅಳಿಯ’ ಕನ್ನಡ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಎಂ.ಎಸ್.ನರಸಿಂಹಮೂರ್ತಿ ರಚನೆಯ ಈ ನಾಟಕವನ್ನು ಹನು ರಾಮ ಸಂಜೀವ ನಿರ್ದೇಶಿಸಿದ್ದಾರೆ.

‘ಸಾಲುಮರಗಳ ತಾಯಿ ತಿಮ್ಮಕ್ಕ’, ‘ಕುದುರೆ ಬಂತು ಕುದುರೆ’, ‘ಜೂಪಿಟರ್‘, ‘ಜತೆಗಿರುವನು ಚಂದಿರ’, ‘ಮಾಣಿ ಜಂಕ್ಷನ್’, ‘ಮೀಲ್ ಕೂಪನ್’, ‘ಲಾಕೌಟಲ್ಲ ನಾಕೌಟು’, ‘ಕನ್ಯಾಕಪಟ’,‘ಕಿವುಡು ಸಾರ್ ಕಿವುಡು’ ನಾಟಕಗಳ ಯಶಸ್ವೀ ಪ್ರದರ್ಶನಗಳ ನಂತರ, ಪ್ರವರ ಆರ್ಟ್ ಸ್ಟುಡಿಯೋ ತಂಡವು ಈ ನಾಟಕ ಪ್ರಸ್ತುತ ಪಡಿಸುತ್ತಿದೆ.

ನಾಟಕದ ಸಾರಾಂಶ: ‘Beg Borrow ಅಳಿಯ’ ಹಾಸ್ಯ ನಾಟಕವು ವಸುದೈವ ಕುಟುಂಬಕಂ ಎಂಬ ತತ್ತ್ವದ ಮೇಲೆ ರೂಪಗೊಂಡಿದೆ. ನಾಟಕದ ಪ್ರಮುಖ ಪಾತ್ರಧಾರಿಗಳಾದ ವಿಶ್ವ ಹಾಗೂ ಆತನ ಹೆಂಡತಿ ವಿಶಾಲು ತಮ್ಮ ಮಗಳಾದ ಲೈಲಾಳ  ಮದುವೆ ವಿಚಾರವಾಗಿ ಆಗಾಗ ಜಗಳವಾಡುತ್ತಾರೆ. ಇವಳ ಮದುವೆ ಆದಷ್ಟು  ಬೇಗ  ಮಾಡಬೇಕೆಂಬುದು ವಿಶಾಲು ಆಸೆ. ಆದರೆ ವಿಶ್ವನಿಗೆ ಆ ಆತುರ ಇರುವುದಿಲ್ಲ.

ವಿಶ್ವ, ವಿಶಾಲು ನಡುವೆ ಲೈಲಾ ಮದುವೆ ಕುರಿತು ಜಗಳವಾದಾಗಲೆಲ್ಲ, ತಮ್ಮ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ವಕೀಲ ರಾಮದಾಸ್ ಮಧ್ಯ ಪ್ರವೇಶಿಸಿ ಹಾಸ್ಯಮಯವಾಗಿ ಅವರ ಜಗಳ ಬಿಡಿಸುತ್ತಾರೆ. ಬಾಬು, ರಾಮು ಮತ್ತು ಸೋಮ  ಎಂಬ ಮೂರು ಹುಡುಗರು ಲೈಲಾಳನ್ನು ಮದುವೆಯಾಗಲು ಬರುತ್ತಾರೆ, ಮೂವರೂ ಸಿನಿಮಾರಂಗದವರಾಗಿರುತ್ತಾರೆ.

ಇನ್‌ಸ್ಪೆಕ್ಟರ್‌  ವಿಕ್ರಂ  ಮತ್ತು ಕಾನ್‌ಸ್ಟೇಬಲ್ ಬಸ್ಯಾ ಒಂದು ಹತ್ಯೆಯ ಕುರಿತಾದ ತನಿಖೆ ನಡೆಸಲು ವಿಶ್ವನ ಮನೆಗೆ ಬರುತ್ತಾರೆ. ಅವರು ನಡೆಸುತ್ತಿರುವ ತನಿಖೆಯಾದರೂ ಯಾವುದು? ಲೈಲಾ ಆ ಮೂವರಲ್ಲಿ ಯಾರನ್ನು ಮದುವೆಯಾಗುತ್ತಾಳೆ?  ಪೊಲೀಸರು ಹತ್ಯೆಯ ತನಿಖೆ ನಡೆಸಲು ವಿಶ್ವನ ಮನೆಗೆ ಏಕೆ ಬರುತ್ತಾರೆ? ನಾಟಕ ನೋಡಿ.

ನಿರ್ದೇಶನ: ಹನು ರಾಮಸಂಜೀವ

ರಚನೆ: ಎಂ.ಎಸ್.ನರಸಿಂಹ ಮೂರ್ತಿ.

ಪ್ರಸಾಧನ: ಮಾಲತೇಶ ಬಡಿಗೇರ.

ರಂಗದ ಮೇಲೆ:  ವೆಂಕಟೇಶ್ ಭಾರಧ್ವಾಜ್, ಗಿರೀಶ್ ಅಲಜೆ, ವೃಶಾಲ್ ನಾಯಕ್, ಸಚಿನ್ ಬಸವರಾಜ್, ಅರುಣ್ ನರಸಿಂಹಮೂರ್ತಿ, ತೀರ್ಥಲಿಂಗ, ಪಲ್ಲವಿ ಗಣೇಶ, ಶ್ರುತಿ ನಾಗರಾಜ್ ಮತ್ತು ದಿವ್ಯ ಪಾಟೀಲ್.

ಸಮಯ: ಶನಿವಾರ ಸಂಜೆ 4.30, 7.30

ಸ್ಥಳ: ಕೆ.ಎಚ್.ಕಲಾಸೌಧ, ಹನುಮಂತನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.