ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜಿ’ಗೆ ಅಂತಿಮ ನಮನ– ಜಯನಗರ ಮೌನ

Last Updated 4 ಮೇ 2018, 21:09 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ಬಿ.ಎನ್‌. ವಿಜಯ ಕುಮಾರ್‌ ನಿಧನಕ್ಕೆ ಅವರ ಅಭಿಮಾನಿಗಳ ಬಳಗ ಕಂಬನಿ ಮಿಡಿಯಿತು. ಅವರ ನಿಧನದಿಂದಾಗಿ ಇಡೀ ಜಯನಗರದಲ್ಲಿ ಶುಕ್ರವಾರ ಶೋಕದ ವಾತಾವರಣ ಮನೆ ಮಾಡಿತ್ತು. ಜನರ ಬಾಯಲ್ಲಿ ‘ವಿಜಿ’ ಎಂದೇ ಹೆಸರಾಗಿದ್ದ ಅವರ ಅಗಲಿಕೆ ಅಭಿಮಾನಿಗಳ ಪಾಲಿಗೆ ಆಘಾತ ತಂದೊಡ್ಡಿತ್ತು.

ಅಂತಿಮ ದರ್ಶನಕ್ಕೆ ಅವರ ಮನೆಯ ಬಳಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊನೆಯ ಬಾರಿ ಅವರ ಚಹರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವು. ಉಮ್ಮಳಿಸಿ ಬರುವ ದುಃಖವನ್ನು ತಡೆದುಕೊಳ್ಳಲಾಗದೇ ಅಲ್ಲಿಂದ ಮುಂದೆ ಹೋಗುತ್ತಿದ್ದರು.

ಇಲ್ಲಿ ಸೇರಿದವರ ಬಾಯಲ್ಲೆಲ್ಲ ಅಗಲಿದ ಶಾಸಕರ ಸರಳತೆ, ಸಜ್ಜನಿಕೆಯ ಗುಣಗಾನ. ಅನಾರೋಗ್ಯವಿದ್ದರೂ ಲೆಕ್ಕಿಸದೆ ಚುನಾವಣೆ ಪ್ರಚಾರಕ್ಕೆ ಮುಂದಾಗಬಾರದಿತ್ತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದ ಅವರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿತ್ತು ಎಂಬುದು ಆಪ್ತರ ಅಭಿಪ್ರಾಯವಾಗಿತ್ತು.   

ಶೋಕತಪ್ತ ಜಯನಗರ : ಶುಕ್ರವಾರ ಬೆಳಿಗ್ಗೆ ನಿಧನ ವಿಚಾರ ತಿಳಿಯುತ್ತಿದ್ದಂತೆ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಔಷಧ ಮಳಿಗೆಗಳು ಮತ್ತು ಹೊಟೇಲ್‌ಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳು, ಮಾಲ್‌ಗಳು ಮೃತರ ಗೌರವಾರ್ಥ ಮುಚ್ಚಿದ್ದವು. ಇಲ್ಲಿನ ರಸ್ತೆಗಳಲ್ಲಿ ಜನರ ಓಡಾಟ ಮತ್ತು ವಾಹನ ಸಂಚಾರ ವಿರಳವಾಗಿತ್ತು.

ಗಣ್ಯರ ಕಂಬನಿ: ತಮ್ಮ ಒಡನಾಡಿಯ ಅಂತಿಮ ದರ್ಶನ ಪಡೆಯುತ್ತಿದ್ದಂತೆಯೇ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್‌, ಶಾಸಕರಾದ ಆರ್‌.ಅಶೋಕ್‌, ಅರವಿಂದ ಲಿಂಬಾವಳಿ ಅತ್ತರು. ಗೃಹಸಚಿವ ರಾಮಲಿಂಗಾ ರೆಡ್ಡಿ, ಸಂಸದ ರಾಜೀವ ಗೌಡ ಅಂತಿಮ ದರ್ಶನ ಪಡೆದರು.

ಚಾಮರಾಜಪೇಟೆಯ ವಿದ್ಯುತ್‌ ಚಿತಾಗಾರದಲ್ಲಿ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.

ಎಚ್ಚರ ವಹಿಸದಿದ್ದುದೇ ಮುಳುವಾಯ್ತು: ಸುಮಾರು 15 ದಿನಗಳ ಹಿಂದೆ ಅವರು ಹೃದಯದ ನಾಳಕ್ಕೆ ಸ್ಟೆಂಟ್‌ ಅಳವಡಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ವೈದ್ಯರು, ‘ದಿನಕ್ಕೆ  1 ಕಿ.ಮೀ.ಗಿಂತ ಹೆಚ್ಚು ನಡೆಯಬಾರದು’ ಎಂದು ಎಚ್ಚರಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರು ತಮ್ಮ ಅನಾರೋಗ್ಯ ಲೆಕ್ಕಿಸದೇ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು.  ಗುರುವಾರ ನಾಲ್ಕನೇ ಟಿ ಬ್ಲಾಕ್‌ನಲ್ಲಿ ಮತಯಾಚನೆಯ ಸಂದರ್ಭದಲ್ಲೇ ಕುಸಿದು ಬಿದ್ದರು. ಜಯದೇವ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

‘ಚುನಾವಣಾ ಪ್ರಚಾರಕ್ಕಾಗಿ ಪ್ರತಿ ದಿನ 10 ಕಿ.ಮೀ.ಗಳಷ್ಟು ದೂರ ನಡೆಯುತ್ತಿದ್ದರು. ಇದೇ ಮುಳುವಾಯಿತು’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್‌ ತಿಳಿಸಿದರು.

ಸೇವೆಗಾಗಿ ಸಮರ್ಪಿಸಿಕೊಂಡಿದ್ದರು: 1958 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಎಚ್‌ಎಎಲ್‌ ಮತ್ತು ಆರ್‌.ವಿ. ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ ಪದವಿ ಪಡೆದಿದ್ದರು.  ಅವರು ಅವಿವಾಹಿತರಾಗಿದ್ದರು.  1990 ರಲ್ಲಿ ಬಿಜೆಪಿ ಸೇರಿದರು. ಪಕ್ಷದ ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಗರ ಘಟಕ ಅಧ್ಯಕ್ಷರಾಗಿದ್ದರು.

2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಿಜಯ ಕುಮಾರ್‌ ಮತ್ತು ಅವರ ಕುಟುಂಬವೇ ಆರ್‌ಎಸ್‌ಎಸ್‌ ಕಾರ್ಯಗಳಿಗೆ ಸಮರ್ಪಿಸಿಕೊಂಡಿತ್ತು. ಅವರ ಒಬ್ಬ ಸಹೋದರ ಬಿ.ಎನ್‌.ಮೂರ್ತಿ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ)  ಹಿರಿಯ ಕಾರ್ಯಕರ್ತ. ಸಹೋದರಿ ವಸಂತಸ್ವಾಮಿ ರಾಷ್ಟ್ರ ಸೇವಿಕಾದ ಪ್ರಾಂತ ಕಾರ್ಯವಾಹ ಆಗಿದ್ದಾರೆ.

ನೇತ್ರದಾನ: ವಿಜಯ ಕುಮಾರ್‌ ಅವರು ನೇತ್ರದಾನ ಮಾಡುವುದಾಗಿ ಘೋಷಿಸಿದ್ದರು. ಅಂತೆಯೇ ಅವರ ಕುಟುಂಬದವರು ಅವರ ಕಣ್ಣುಗಳನ್ನು ದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT