ಮಂಗಳವಾರ, ಮಾರ್ಚ್ 9, 2021
23 °C
46 ಉಮೇದುವಾರರ ಶೈಕ್ಷಣಿಕ ಅರ್ಹತೆ: 11 ಮಂದಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ

ಎಸ್‌ಎಸ್‌ಎಲ್‌ಸಿ ಶಿಕ್ಷಣವಿಲ್ಲದ 10 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಎಸ್‌ಎಲ್‌ಸಿ ಶಿಕ್ಷಣವಿಲ್ಲದ 10 ಅಭ್ಯರ್ಥಿಗಳು

ಕಾರವಾರ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಿಂದ 46 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ, ಅವರ ಪೈಕಿ 10 ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವೂ ಆಗಿಲ್ಲ. ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿವರಗಳಿವೆ. ಮೂವರು ತಮ್ಮ ವಿದ್ಯಾರ್ಹತೆ ಬಹಿರಂಗಪಡಿಸಿಲ್ಲ.

ಕುಮಟಾ: ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಇರುವ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸೂರಜ್ ನಾಯ್ಕ ಸೋನಿ ಅವರು ಬಿಎಸ್‌ಸಿ ಮತ್ತು ಎಂಎ ಪದವಿ ಅಧ್ಯಯನ ಮಾಡಿದ್ದಾರೆ. ಜೆಡಿಎಸ್‌ನ ಪ್ರದೀಪ ನಾಯಕ ಬಿಎ ಪದವಿ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮನಾ ಹೆಗಡೆ ಎಲ್‌ಎಲ್‌ಬಿ ಅಧ್ಯಯನ ಮಾಡಿದ್ದರೆ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಪ್ರಶಾಂತ ನಾಯ್ಕ ಡಿಪ್ಲೊಮಾ ಓದಿಕೊಂಡಿದ್ದಾರೆ.

ಬಿಜೆಪಿಯ ದಿನಕರ ಶೆಟ್ಟಿ, ಕಾಂಗ್ರೆಸ್‌ನ ಶಾರದಾ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಕೃಷ್ಣ ಗೌಡ ಅವರಿಗೆ ಪಿಯು ಶಿಕ್ಷಣವಿದೆ. ನ್ಯೂ ಕಾಂಗ್ರೆಸ್‌ನ ಮೋಹನ ಪಟಗಾರ ಎಸ್‌ಎಸ್‌ಎಲ್‌ಸಿ ಓದಿದ್ದಾರೆ. ಉಳಿದಂತೆ, ಎಂಇಪಿಯ ನಾಗರಾಜ ನಾಯಕ 9ನೇ ತರಗತಿ, ಸದ್ಭಾವನಾ ಪಾರ್ಟಿಯ ನಾಗರಾಜ ಶೇಟ್ 8ನೇ ತರಗತಿ ಮತ್ತು ಪಕ್ಷೇತರ ಯಶೋಧರ ನಾಯ್ಕ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ.

ಹಳಿಯಾಳ: ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಮತ್ತು ಸಿಪಿಎಂ ಅಭ್ಯರ್ಥಿ ಯಮುನಾ ಗಾಂವಕರ್ ಎಲ್ಎಲ್‌ಬಿ ಅಧ್ಯಯನ ಮಾಡಿದ್ದಾರೆ. ಜೆಡಿಎಸ್‌ನ ಕೆ.ಆರ್.ರಮೇಶ್ ಬಿಎಸ್‌ಸಿ, ಬಿಜೆಪಿಯ ಸುನೀಲ ಹೆಗಡೆ ಬಿಇ ಒಂದನೇ ಸೆಮಿಸ್ಟರ್ ಅಧ್ಯಯನ ಮಾಡಿದ್ದಾರೆ. ಪಕ್ಷೇತರ ಉಮೇದುವಾರ ಇಲಿಯಾ ಕಾಟಿ ಬಿಎ, ಪಕ್ಷೇತರ: ಟಿ.ಆರ್.ಚಂದ್ರಶೇಖರ ಪ್ರಥಮ ಪಿಯು, ಎಂಇಪಿಯ ಬಡಾಸಾಬ್ ಕಕ್ಕೇರಿ ಮತ್ತು ಶಿವಸೇನೆಯ ಶಂಕರ ಪಾಕ್ರೆ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿದ್ದಾರೆ. ನ್ಯೂ ಕಾಂಗ್ರೆಸ್ ಅಭ್ಯರ್ಥಿ ಜಹಾಂಗಿರ್ ಖಾನ್ 9ನೇ ತರಗತಿ ಶಿಕ್ಷಣ ಪೂರೈಸಿದ್ದಾರೆ.

ಕಾರವಾರ: ಜೆಡಿಎಸ್‌ನ ಆನಂದ ಅಸ್ನೋಟಿಕರ್ ಎಂಎ, ಕಾಂಗ್ರೆಸ್‌ನ ಸತೀಶ್ ಸೈಲ್ ಬಿಎಸ್‌ಸಿ, ಜನ ಸದ್ಭಾವನಾ ಪಾರ್ಟಿಯ ಕುಂದಾಬಾಯಿ ಬಿಎ ಪದವಿ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಿಶೋರ ಸಾವಂತ ಡಿಪ್ಲೊಮಾ, ಬಿಜೆಪಿಯ ರೂಪಾಲಿ ನಾಯ್ಕ ಹಾಗೂ ಎನ್‌ಸಿಪಿಯ ಮಾಧವ ನಾಯ್ಕ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿದ್ದಾರೆ.

ಭಟ್ಕಳ: ಪ್ರಥಮ ಪಿಯು ಅಧ್ಯಯನ ಮಾಡಿರುವ ಬಿಜೆಪಿಯ ಅಭ್ಯರ್ಥಿ ಸುನೀಲ ನಾಯ್ಕ ಅವರೇ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಹತೆ ಪಡೆದವರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಕಾಶ ಪಿಂಟೊ ಎಸ್‌ಎಸ್‌ಎಲ್‌ಸಿ, ಕಾಂಗ್ರೆಸ್‌ನ ಮಂಕಾಳ ವೈದ್ಯ 8ನೇ ತರಗತಿ, ಎಂಇಪಿಯ ಗಫೂರ್ ಸಾಬ್ 7ನೇ ತರಗತಿ ಅಧ್ಯಯನ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ರಾಜೇಶ ನಾಯ್ಕ ತಮ್ಮ ಶೈಕ್ಷಣಿಕ ಮಾಹಿತಿ ನೀಡಿಲ್ಲ.

ಶಿರಸಿ: ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಕಾಂ, ಜೆಡಿಎಸ್‌ನ ಶಶಿಭೂಷಣ ಹೆಗಡೆ ಎಲ್‌ಎಲ್‌ಬಿ, ಕಾಂಗ್ರೆಸ್‌ನ ಭೀಮಣ್ಣ ನಾಯ್ಕ 7ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ಶಿವಸೇನೆಯ ಅಣ್ಣಪ್ಪ ಕಡಕೇರಿ ಮತ್ತು ಎಂಇಪಿಯ ಅಬ್ದುಲ್ ರಜಾಕ್ ಶೇಖ್ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿದ್ದಾರೆ. ಪಕ್ಷೇತರ ರಮಾನಂದ ನಾಯ್ಕ 9ನೇ ತರಗತಿಯವರೆಗೆ ಓದಿದ್ದಾರೆ.

ಯಲ್ಲಾಪುರ: ಜೆಡಿಎಸ್‌ನ ರವೀಂದ್ರ ನಾಯ್ಕ ಎಲ್‌ಎಲ್‌ಬಿ ಅಧ್ಯಯನ ಮಾಡಿದ್ದಾರೆ. ಉಳಿದಂತೆ ಬಿಜೆಪಿಯ ವಿ.ಎಸ್.ಪಾಟೀಲ ಹಾಗೂ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿದ್ದಾರೆ.

ಶಿವಸೇನೆಯ ಸಚಿನ್ ನಾಯ್ಕ ಪಿಜಿ ಡಿಪ್ಲೊಮಾ, ಪಕ್ಷೇತರ ಸ್ಪರ್ಧಿಗಳಾದ ನಾಗೇಶ ಭೋವಿ ವಡ್ಡರ್ ಎಸ್‌ಎಸ್‌ಎಲ್‌ಸಿ, ಮಹಬೂಬ್ ಜಮಖಂಡಿ ನಾಲ್ಕನೇ ತರಗತಿ ಅಧ್ಯಯನ ಮಾಡಿದ್ದಾರೆ. ಬಹುಜನ ಕ್ರಾಂತಿ ದಳದ ನೀಲಪ್ಪ ಲಮಾಣಿ ಮಾಹಿತಿ ನೀಡಿಲ್ಲ.

ಹೆಬ್ಬಾರ ಅಫಿಡವಿಟ್ ವಿರುದ್ಧ ದೂರು

ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರು ಅಫಿಡವಿಟ್‌ನಲ್ಲಿ ಸಲ್ಲಿಸಿದ ವಿದ್ಯಾರ್ಹತೆ ಸರಿಯಾಗಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಮಂಗೇಶ ಕೈಸೆರೆ ಎಂಬುವವರು ಚುನಾವಣಾಧಿಕಾರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೆಬ್ಬಾರ ಒಂಬತ್ತನೇ ತರಗತಿ ಮಾತ್ರ ಓದಿದ್ದಾರೆ. ಆದರೆ, ತಮ್ಮ ಅಫಿಡವಿಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಎಂದು ನಮೂದಿಸಿದ್ದಾರೆ ಎಂದು ಮಂಗೇಶ ಅವರ ದೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.