ಬುಧವಾರ, ಮಾರ್ಚ್ 3, 2021
18 °C
ಸೂರ್ಯನಿಗೆ ಬಸವಳಿದ ರಾಜಕೀಯ ನೇತಾರರು, ಬೆಂಬಲಿಗರ ಪಡೆ; ಹೈರಾಣಾದ ಕಾರ್ಯಕರ್ತರು

ಚುನಾವಣಾ ಪ್ರಚಾರಕ್ಕೆ ಬಿಸಿಲೇ ಪ್ರತಿಸ್ಪರ್ಧಿ!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚುನಾವಣಾ ಪ್ರಚಾರಕ್ಕೆ ಬಿಸಿಲೇ ಪ್ರತಿಸ್ಪರ್ಧಿ!

ವಿಜಯಪುರ: ‘ರಾಜಕೀಯ ಜೀವನದ ಮಹತ್ವದ ಸಮಯವಿದು. ಅಖಾಡದಲ್ಲಿನ ಪ್ರತಿಸ್ಪರ್ಧಿಗಳಿಗೆ ಹಿಂದೇಟು ಹಾಕ್ತಿಲ್ಲ. ತಂತ್ರಕ್ಕೆ ಪ್ರತಿತಂತ್ರ ಹೂಡ್ತೇವೆ. ಎದುರಾಳಿಗಳ ಏಟಿಗೆ ಎದಿರೇಟು ನೀಡ್ತೇವೆ. ಆದರೆ ಹಗಲು ಹೊತ್ತಿನಲ್ಲಿ ಉರಿಯೋ ಸೂರ್ಯ ಮಾತ್ರ ನಮಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಡ್ತ್ವಾನೆ..!’

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಸಾಮೂಹಿಕ ಪ್ರತಿಕ್ರಿಯೆಯಿದು.

‘ಚುನಾವಣಾ ಪ್ರಚಾರ ಆರಂಭ ಗೊಂಡ ಬೆನ್ನಿಗೆ, ಜಿಲ್ಲೆಯಲ್ಲಿನ ಗರಿಷ್ಠ ತಾಪಮಾನವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 40ರಿಂದ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಇದರಿಂದ ಮಧ್ಯಾಹ್ನದ ವೇಳೆ ಅಭ್ಯರ್ಥಿಗಳ ಪರ ಮನೆ ಮನೆ ಪ್ರಚಾರ ನಡೆಸುವುದು ತ್ರಾಸಾಗುತ್ತಿದೆ. ಅನಿವಾರ್ಯವಾಗಿ ನಾಲ್ಕೈದು ತಾಸು ಯಾವ ಚಟುವಟಿಕೆ ನಡೆಸಲ್ಲ’ ಎನ್ನುತ್ತಾರೆ ಜೆಡಿಎಸ್‌ ಕಾರ್ಯಕರ್ತ ಸಂಗಪ್ಪ ಹುಚ್ಚಪ್ಪಗೋಳ.

‘ನಾಮಪತ್ರ ಸಲ್ಲಿಕೆ ಬೆನ್ನಿಗೆ ಓಣಿ ಓಣಿ, ಗಲ್ಲಿ ಗಲ್ಲಿಯಲ್ಲೂ ಪ್ರಚಾರ ನಡೆಸಿದ್ದೇವೆ. ಶುರುವಿನಿಂದಲೂ ಬಿಸಿಲ ಝಳ ತುಸು ಹೆಚ್ಚೇ ಇದೆ. ಮುಂಜಾನೆ 7ರಿಂದ ಮಧ್ಯಾಹ್ನ 12ರವರೆಗೂ ಮನೆ, ಮನೆ ಬಾಗಿಲಿಗೆ ತೆರಳಿ ಪ್ರಚಾರ ನಡೆಸುತ್ತೇವೆ.

ಬಿಸಿಲ ಝಳ ಹೆಚ್ಚುತ್ತಿದ್ದಂತೆ ಅನಿವಾರ್ಯವಾಗಿ ಹೋದ ಕಡೆಯಲ್ಲೇ ಒಂದೆಡೆ ಕಾರ್ಯಕರ್ತರೆಲ್ಲಾ ಜಮಾಯಿಸಿ ನೆರಳಲ್ಲಿ ವಿಶ್ರಾಂತಿ ಪಡೆಯುವ ಜತೆಗೆ ತಂತ್ರಗಾರಿಕೆ ನಡೆಸುತ್ತೇವೆ. ಸ್ಥಳೀಯರನ್ನು ಒಂದುಗೂಡಿಸಿ ಸಭೆ ಮಾಡುತ್ತೇವೆ. ಅಸಮಾಧಾನಿತರ ಮನೆಗೆ ತೆರಳಿ ಮನವೊಲಿಸುತ್ತಿದ್ದೇವೆ.

ಸೂರ್ಯನ ತಾಪ ಕಡಿಮೆಯಾಗುತ್ತಿದ್ದಂತೆ ಮತ್ತೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದೇವೆ. ರಾತ್ರಿ 10 ಗಂಟೆ ತನಕವೂ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚರಿಸಿ ಪ್ರಚಾರ ನಡೆಸಿದ್ದೇವೆ’ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತಲ್ಲೀನರಾಗಿರುವ, ಹೆಸರು ಬಹಿರಂಗ ಪಡಿಸಲಿಚ್ಚಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಗ ಬಿಸಿಲು ಹೊಸತಲ್ಲ. ಎಲ್ಲವನ್ನೂ ತಾಳೋ ಶಕ್ತಿಯಿದೆ. ಆದ್ರೇ ಮಧ್ಯಾಹ್ನದ ಉರಿ ಬಿಸಿಲಲ್ಲಿ ಓಡಾಡಿದರೆ ಸುಸ್ತಾಗುತ್ತೆ. ವಿಧಿಯಿಲ್ಲದೆ ಕೆಲ ಹೊತ್ತು ವಿಶ್ರಾಂತಿ ಪಡೆಯುತ್ತೇವೆ. ಆದ್ರೂ ಅನಿವಾರ್ಯ.

ನಮ್ಮ ನಾಯಕರ ರಾಜಕೀಯ ಭವಿಷ್ಯ ಇದರಲ್ಲೇ ಅಡಗಿದೆ. ಎಲ್ಲವನ್ನೂ ಸಹಿಸಿಕೊಂಡು ಪ್ರಚಾರ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತ ರಂಜಾನ್‌ ಶೇಖ್.

‘ಮತ ಕೇಳಲು ಹೋದ ಸಂದರ್ಭ ತುಂಬಾ ಪರಿಚಯಸ್ಥರು ನೀರು ಕೊಟ್ಟು ಉಪಚರಿಸುತ್ತಾರೆ. ಕೆಲವರು ಚಹಾ ಕುಡಿಯಲು ಕರೆಯುತ್ತಾರೆ. ಆದರೆ ಬಿಸಿಲ ಬೇಗೆಗೆ ಬಸವಳಿದ ನಾವು ಒಲ್ಲೆ ಎಂದು ಮುಂದಿನ ಮನೆಗೆ ಪ್ರಚಾರ ಮಾಡಲು ತೆರಳುತ್ತೇವೆ.

ಮುಂಚಿತವಾಗಿಯೇ ಒಂದೆಡೆ ತಣ್ಣನೆಯ ನೀರು, ಪಾನಕದ ವ್ಯವಸ್ಥೆ ಮಾಡಿರುತ್ತಾರೆ. ತಾಸಿಗೊಮ್ಮೆ ಇಂತಹ ನಿಗದಿತ ಸ್ಥಳದಲ್ಲಿ ಎಲ್ಲರೂ ಸೇರಿ ದಣಿವಾರಿಸಿಕೊಂಡು ಮುಂದೆ ಸಾಗುತ್ತೇವೆ. ನಡುವೆ ಎಲ್ಲಾದರೂ ಕೊಂಚ ನೆರಳು ಕಂಡರೇ ಸಾಕು ವಿಶ್ರಾಂತಿಗೆ ಹಲವರು ಮುಂದಾಗುತ್ತಾರೆ’ ಎಂದು ಬಿಜೆಪಿ ಕಾರ್ಯಕರ್ತ ಶಿವಾನಂದ ಸಕ್ರಿ ಹೇಳಿದರು.

ವಿಶ್ರಾಂತಿಗೆ ಬ್ರೇಕ್..!

‘ಪ್ರಚಾರಕ್ಕೆ ನಾಲ್ಕು ದಿನವಷ್ಟೇ ಬಾಕಿಯಿದೆ. ಮತದಾನಕ್ಕೆ ಆರು ದಿನ ಬಾಕಿ ಉಳಿದಿದೆ. ಇದೀಗ ಅತ್ಯಮೂಲ್ಯ ಸಮಯ. ಮನೆ ಮನೆಗೆ ಭೇಟಿ ನೀಡಿ ಮನವೊಲಿಸುತ್ತಿದ್ದೇವೆ. ಪರಿಚಯಸ್ಥರ ಮನೆಗಳಿಗೆ ಖುದ್ದು ತೆರಳಿ ಮತ ಯಾಚಿಸುತ್ತಿದ್ದೇವೆ. ಇದೀಗ ನಮಗೆ ಬಿಸಿಲು ಮುಖ್ಯವಲ್ಲ. ಚುನಾವಣೆಯಲ್ಲಿ ಗೆಲುವು ಮುಖ್ಯ.

ಇನ್ನೊಂದೆರೆಡು ದಿನ ಕಳೆದರೆ, ಅಹೋರಾತ್ರಿ ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಶನಿವಾರ ಮಧ್ಯಾಹ್ನ 3 ಗಂಟೆ ವೇಳೆ ನಾಗಠಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿಠ್ಠಲ ಕಟಕದೊಂಡ ಪರ ವಿಜಯಪುರದ ಬಿ.ಎಂ.ಪಾಟೀಲ ನಗರದಲ್ಲಿ ಮತ ಯಾಚಿಸುತ್ತಿದ್ದ ಮುಖಂಡೆ ಅನಸೂಯಾ ಜಾಧವ ತಿಳಿಸಿದರು.

**

ಬಿಸಿಲ ಝಳ ಹೆಚ್ಚಿದೆ. ಮುಂಜಾನೆ–ಮುಸ್ಸಂಜೆ, ರಾತ್ರಿ ಮನೆ, ಮನೆ ಪ್ರಚಾರ ನಡೆಸಿರುವೆ. ಮಧ್ಯಾಹ್ನದ ವೇಳೆ ಪ್ರಮುಖರ ಜತೆ ಕಾರ್ಯತಂತ್ರ ರೂಪಿಸುವೆ

– ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಅಭ್ಯರ್ಥಿ 

**

ವಯಸ್ಕ ಕಾರ್ಯಕರ್ತರು ನಮ್ಮ ಜತೆ ಪ್ರಚಾರಕ್ಕೆ ಬರುವಾಗಲೇ ನೀರಿನ ಬಾಟಲ್‌ ತಂದಿರುತ್ತಾರೆ. ಬಾಯಾರಿದಾಗ ಕುಡಿದು ದಣಿವಾರಿಸಿಕೊಳ್ಳುತ್ತಾರೆ

– ಲಾಲ್‌ಸಾಬ್‌ ಶೇಖ್‌, ಜೆಡಿಎಸ್‌ ಪ್ರಚಾರ ಕಾರ್ಯಕರ್ತ 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.