ಹುನಗುಂದ: ತ್ರಿಕೋನ ಪೈಪೋಟಿಯ ಕಣ

7
ಆರೋಪ–ಪ್ರತ್ಯಾರೋಪಗಳ ನಡುವೆ ರಾಷ್ಟ್ರೀಯ ಪಕ್ಷಗಳ ನಿದ್ರೆಗೆಡಿಸಿರುವ ಕ್ಷೇತ್ರ

ಹುನಗುಂದ: ತ್ರಿಕೋನ ಪೈಪೋಟಿಯ ಕಣ

Published:
Updated:
ಹುನಗುಂದ: ತ್ರಿಕೋನ ಪೈಪೋಟಿಯ ಕಣ

ಬಾಗಲಕೋಟೆ: ಗ್ರಾನೈಟ್, ಸೀರೆ ಉದ್ಯಮದ ವೈಭವದ ದಿನಗಳನ್ನೇ ಸದಾ ಕನವರಿಸುವ ಹುನಗುಂದ ಕ್ಷೇತ್ರದಲ್ಲಿ ಈಗ ಚುನಾವಣಾ ಬಿಸಿ ಕಾವೇರಿದೆ. ಕಳೆದ ಎರಡು ದಶಕಗಳಲ್ಲಿ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ ಇಲ್ಲಿ ಸದಾ ಬಿಜೆಪಿ–ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಆದರೆ ಈ ಬಾರಿ ಪಕ್ಷೇತರ ಅಭ್ಯರ್ಥಿಯೂ ಸದ್ದು ಮಾಡುತ್ತಿದ್ದಾರೆ. ಹಾಗಾಗಿ ತ್ರಿಕೋನ ಪೈಪೋಟಿ ಎದುರಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ರೆಗೆಡಿಸಿದೆ.

ಕಾಂಗ್ರೆಸ್‌ನಿಂದ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುತ್ತಿಗೆದಾರ ಎಸ್.ಆರ್.ನವಲಿಹಿರೇಮಠ ಕಣದಲ್ಲಿದ್ದಾರೆ. ಕೊನೆಯ ಕ್ಷಣದವರೆಗೂ ನವಲಿ ಹಿರೇಮಠ ಅವರನ್ನೇ ಅಭ್ಯರ್ಥಿಯಾಗಿಸಲು ಪ್ರಯತ್ನಿಸಿದ ಜೆಡಿಎಸ್, ಆ ಪ್ರಯತ್ನ ಕೈಗೂಡದೇ ಕೊನೆಗೆ ಬಾಹ್ಯ ಬೆಂಬಲ ನೀಡಿದೆ.

ಜೊತೆಗೆ ಬಿಎಸ್‌ಪಿ ಮತ್ತು ಓವೈಸಿ ಅವರ ಎಂಐಎಂ, ಬಿಜೆಪಿ ಅತೃಪ್ತರ ಕೂಟ ನವಲಿಹಿರೇಮಠ ಬೆನ್ನಿಗೆ ನಿಂತಿವೆ.

ಕ್ಷೇತ್ರದಲ್ಲಿ ವೀರಶೈವ–ಲಿಂಗಾಯತ, ಕುರುಬ, ನೇಕಾರರು, ಪರಿಶಿಷ್ಟ ಜಾತಿ–ಪಂಗಡ, ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿದೆ.

ಸಿದ್ದರಾಮಯ್ಯ ನಾಯಕತ್ವ, ರಾಜ್ಯ ಸರ್ಕಾರದ ಸಾಧನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ, ಮರೋಳ ಏತ ನೀರಾವರಿ ಯೋಜನೆ ಅನುಷ್ಠಾನ ಮೂಲಕ ಕ್ಷೇತ್ರದಲ್ಲಿ ಬರಡು ಭೂಮಿಗೆ ನೀರು ಹನಿಸಿದ್ದು ಹಾಗೂ ವೈಯಕ್ತಿಕ ವರ್ಚಸ್ಸು ಮುಂದಿಟ್ಟುಕೊಂಡು ಶಾಸಕ ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆ ಪಂಚಮಸಾಲಿ, ಕುರುಬ ಸಮುದಾಯದ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಮನೆ ಮನೆ ಸುತ್ತಿ ಬೆವರು ಹರಿಸುತ್ತಿರುವ ಅವರೊಂದಿಗೆ ಪತ್ನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯೂ ಆದ ವೀಣಾ ಕಾಶಪ್ಪನವರ ಕೂಡ ಕೈ ಜೋಡಿಸಿದ್ದಾರೆ. ಪಕ್ಕದ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ತಮಗೆ ಪೂರಕವಾಗಬಹುದು ಎಂಬುದು ವಿಜಯಾನಂದ ಬೆಂಬಲಿಗರ ಲೆಕ್ಕಾಚಾರ.

ಪಕ್ಷದ ಹಿತಶತ್ರುಗಳ ಕಾಟದಿಂದ ಕೊನೆಯವರೆಗೂ ಟಿಕೆಟ್ ಲಭ್ಯತೆಯ ಹೊಯ್ದಾಟದಲ್ಲಿಯೇ ಇದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶವೇ ಬಲ. ಜೊತೆಗೆ ಶಾಸಕ ವಿಜಯಾನಂದ ಐದು ವರ್ಷ ದುರಾಡಳಿತ ನಡೆಸಿದ್ದಾರೆ ಎಂದು ಹೋದಡೆಯಲ್ಲೆಲ್ಲಾ ವಾಗ್ದಾಳಿ ನಡೆಸುತ್ತಿರುವ ದೊಡ್ಡನಗೌಡ, ಮರೋಳ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಾ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ. ರಡ್ಡಿ ಸಮುದಾಯದ ಜೊತೆಗೆ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದ್ದಾರೆ. ದೊಡ್ಡನಗೌಡ ಪರ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರ ನಡೆಸಿ ಹೋಗಿದ್ದಾರೆ.

ಪಕ್ಷೇತರ ಅಭ್ಯರ್ಥಿ ಎಸ್.ಆರ್. ನವಲಿಹಿರೇಮಠ ಕಳೆದ ಎರಡು ವರ್ಷಗಳಿಂದ ತಮ್ಮ ಎಸ್.ಆರ್.ಎನ್ ಫೌಂಡೇಷನ್ ಮೂಲಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ತಾವು ಮಾಡಿದ ಸಮಾಜ ಸೇವೆಯೇ ಗುರಿಮುಟ್ಟಿಸಲಿದೆ ಎಂಬ ವಿಶ್ವಾಸದಲ್ಲಿ ದಾಪುಗಾಲು ಇಡುತ್ತಿರುವ ಅವರಿಗೆ ಕ್ಷೇತ್ರದಲ್ಲಿ ಗಣನೀಯವಾಗಿರುವ ವೀರಶೈವರು ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿಗಳ ಬೆಂಬಲ ಕ್ರೋಢೀಕರಿಸಿಕೊಂಡು ಹಾಲಿ ಹಾಗೂ ಮಾಜಿ ಶಾಸಕರ ಪಟ್ಟುಗಳನ್ನು ಅರಿತಿರುವ ನವಲಿಹಿರೇಮಠ, ಪ್ರಚಾರದಲ್ಲಿ ನಿರತರಾಗಿದ್ದಾರೆ. ಜೊತೆಗೆ ಅತೃಪ್ತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್‌ಗೂ ಕೈ ಹಾಕಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ನವಲಿಹಿರೇಮಠ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಮುಚ್ಚಿರುವ ಗ್ರಾನೈಟ್ ಕಾರ್ಖಾನೆ, ನೇಕಾರರ ಸ್ಥಿತಿ–ಗತಿ, ನಿರುದ್ಯೋಗ ಹಾಗೂ ಬಿಜೆಪಿಯಲ್ಲಿ ತಮಗೆ ಟಿಕೆಟ್ ಕೈ ತಪ್ಪಿದ ಸಂಗತಿಗಳನ್ನು ನವಲಿಹಿರೇಮಠ ಪ್ರಚಾರದ ವೇಳೆ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಈ ಬಾರಿ ಮೂವರು ಸಮಬಲರ ಹೋರಾಟದ ಕಣವಾಗಿ ಹುನಗುಂದ ರೂಪುಗೊಂಡಿದೆ. ಯಾರೇ ಗೆದ್ದರೂ ಅದು ಫೋಟೊ ಫಿನಿಶ್ ಅಂತರ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry