ಸಾಣಿಕಟ್ಟೆಯಿಂದ ಊಟದ ತಟ್ಟೆಗೆ

7

ಸಾಣಿಕಟ್ಟೆಯಿಂದ ಊಟದ ತಟ್ಟೆಗೆ

Published:
Updated:
ಸಾಣಿಕಟ್ಟೆಯಿಂದ ಊಟದ ತಟ್ಟೆಗೆ

ಗೋಕರ್ಣದಲ್ಲೀಗ ಎಲ್ಲೆಡೆ ಯಾತ್ರಿಗಳೇ. ಬೇಸಿಗೆಯ ರಜೆ ಆರಂಭವಾಗುತ್ತಿದ್ದಂತೆಯೇ ಎಲ್ಲೆಡೆಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಬುರ್‌ ಎಂದು ಆ ಪುಟ್ಟ ಬೀದಿಗಳಲ್ಲಿ ದೂಳೆಬ್ಬಿಸುತ್ತಾ ಓಡಾಡುವ ಟೂರಿಸ್ಟ್‌ ಗಾಡಿಗಳು.

ಪರಮೇಶ್ವರನ ದರ್ಶನವೋ ಅಥವಾ ಅರಬ್ಬಿ ತೀರದಲ್ಲಿ ಮೋಜು ಮಸ್ತಿಯೋ ಕಾರಣವೇನೇ ಇರಲಿ, ಇಲ್ಲಿಗೆ ಬರುವ ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿಯಿಂದ ಹೊರಳಿ, ಗೋಕರ್ಣದತ್ತ ಸಾಗುವಾಗ ಎಡಬಲದಲ್ಲಿ ಕಾಣಸಿಗುವ ಎಕರೆಗಟ್ಟಲೇ ಗಜನಿ ಭೂಮಿಯ ಮೇಲೆ ಹಿಮದ ರಾಶಿಯಂತೆ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಗುಪ್ಪೆಗಳನ್ನು ನೋಡಿ ಆಶ್ಚರ್ಯಪಡುವುದುಂಟು. ಇದು ಗೋಕರ್ಣದ ನೆಲದ ಮತ್ತೊಂದು ವಿಶೇಷ ಹಾಗೂ ಇಲ್ಲಿನ ಜನರ ಬೆವರಿನ ಫಸಲು.

ಗೋಕರ್ಣಕ್ಕೆ ಹೊಂದಿಕೊಂಡಂತೆ ಇರುವ ಸಾಣಿಕಟ್ಟಾ, ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ಉಪ್ಪಿನ ಕಾರ್ಖಾನೆ. 1720ರಿಂದ ನಿರಂತರವಾಗಿ ಉಪ್ಪನ್ನು ತಯಾರಿಸುತ್ತಿರುವ ಈ ಪ್ರದೇಶ ಇನ್ನೇನು ಈ ನಂಟಿನ ತ್ರಿಶತಕದ ಹೊಸ್ತಿಲಿನಲ್ಲಿದೆ. ಅಜಮಾಸು 450 ಎಕರೆ ಪ್ರದೇಶದಲ್ಲಿ ಚಾಚಿರುವ ಈ ಪ್ರದೇಶದಲ್ಲಿ ವಾರ್ಷಿಕವಾಗಿ ತಯಾರಾಗುವ ಉಪ್ಪಿನ ಪ್ರಮಾಣ ಆಯಾ ವರ್ಷದ ಮಳೆಯ ಮೇಲೆ ಅವಲಂಬನೆಯಾಗಿದ್ದರೂ ಸರಾಸರಿ ವರ್ಷಕ್ಕೆ ಹತ್ತು ಸಾವಿರ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗುತ್ತದೆ.

ಮೂರು ಶತಮಾನಗಳ ಹಿಂದೆ ಇಲ್ಲಿ ಉಪ್ಪಿನ ತಯಾರಿಕೆ ಆರಂಭಗೊಂಡಾಗ ಆ ಪ್ರದೇಶ 50 ಎಕರೆಗಳಿಗಷ್ಟೆ ಸೀಮಿತವಾಗಿತ್ತು. ಆಗ ಬೈಂದೂರು ಅರಸರ ಆಳ್ವಿಕೆಗೊಳಪಟ್ಟಿದ್ದ ಈ ಪ್ರದೇಶವನ್ನು ನಂತರ ಹೈದರಾಲಿ ಆಕ್ರಮಿಸಿಕೊಂಡ. ಟಿಪ್ಪು ಸುಲ್ತಾನನ ಕಾಲದಲ್ಲಿ ಇಲ್ಲಿ ತಯಾರಾದ ಉಪ್ಪನ್ನು ಮೈಸೂರಿಗೆ ಸಾಗಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಅಲ್ಲಿಯವರೆಗೆ ತೆರಿಗೆಯ ವ್ಯಾಪ್ತಿಯಿಂದ ಹೊರಗಿದ್ದ ಉಪ್ಪಿಗೆ ಟಿಪ್ಪು ಮೊದಲ ಬಾರಿಗೆ ತೆರಿಗೆ ವಿಧಿಸಿದ.





 

ಟಿಪ್ಪು ಆಳ್ವಿಕೆ ಕೊನೆಗೊಂಡ ನಂತರ ಈ ಭಾಗವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಂತೂ ಈ ಪ್ರದೇಶ ತನ್ನದೇ ಛಾಪನ್ನು ಮೂಡಿಸಿದ್ದು ವಿಶೇಷವಾಗಿ ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದಾಗ. ಈ ಭಾಗದಲ್ಲಿ ಅದಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. ಈ ಕಾರಣದಿಂದಲೇ ಕರ್ನಾಟಕದ ಬಾರ್ಡೋಲಿ ಎಂಬ ನಾಮವಿಶೇಷಣವನ್ನು ಪಡೆದುಕೊಂಡ ಪಕ್ಕದ ಅಂಕೋಲಾ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿಗೊಂಡ ಸ್ಥಳೀಯ ಯುವಕರು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಈ ಹೋರಾಟದ ನೆನಪಿಗೆ ಸ್ವಾತಂತ್ರ್ಯ ಹೋರಾಟಗಾರರೆಲ್ಲ ಒಗ್ಗೂಡಿ ಸಾಣಿಕಟ್ಟಾದ ಸಮೀಪದ ಬಾಸಗೋಡಿನಲ್ಲಿ ಸ್ಮಾರಕವೊಂದನ್ನು ಸ್ಥಾಪಿಸಿದ್ದು ಇಂದಿಗೂ ಅದು ಹೊಸ ಪೀಳಿಗೆಗೆ ಆ ಕಥೆಯನ್ನು ಸಾರಿ ಹೇಳುತ್ತಿದೆ.

ಆರಂಭದಿಂದಲೂ ಅಲ್ಲಲ್ಲಿ ಚದುರಿಹೋಗಿ ವೈಯಕ್ತಿಕವಾಗಿ ಉಪ್ಪನ್ನು ತಯಾರಿಸುತ್ತಿದ್ದ ಈ ಭಾಗದ ಐವತ್ತಕ್ಕೂ ಹೆಚ್ಚು ಉಪ್ಪು ತಯಾರಕರು 1952ರಲ್ಲಿ ನಾಗರಬೈಲ ಉಪ್ಪು ತಯಾರಕರ ಸಹಾಯಕ ಸಂಘವನ್ನು ಸ್ಥಾಪಿಸುವ ಮೂಲಕ ಹೊಸ ಇತಿಹಾಸವನ್ನು ಬರೆದರು. ಅಂದು ಆರಂಭವಾದ ಸಂಘವು ಕರ್ನಾಟದ ಮೊದಲ ಮತ್ತು ಇಂದಿಗೂ ಏಕೈಕ ಉಪ್ಪು ತಯಾರಕ ಸ್ವಸಹಾಯ ಸಂಘವಾಗಿದೆ. ತನ್ನ ಬಣ್ಣದಿಂದ ಸ್ಥಳೀಯವಾಗಿ ‘ಕೆಂಪುಪ್ಪು’ ಎಂದು ಕರೆಯಲ್ಪಡುವ ಈ ಹರಳುಪ್ಪಿಗೆ ಇಂದಿನ ಟೇಬಲ್ ಸಾಲ್ಟ್‌ನ ಜಮಾನಾದಲ್ಲೂ ರಾಜ್ಯದ ಹಲವು ಭಾಗದಲ್ಲಿ ಅಗ್ರ ತಾಂಬೂಲ.

ಉತ್ತರ ಕನ್ನಡವಷ್ಟೆ ಅಲ್ಲದೇ ಧಾರವಾಡ ಹಾವೇರಿ, ಗದಗ ಜಿಲ್ಲೆಗಳಲ್ಲಿ ನಮ್ಮ ಉಪ್ಪು ಸರಬರಾಜಾಗುತ್ತದೆ. ಕರಾವಳಿ ಭಾಗದಲ್ಲಿ ಇಂದಿಗೂ ಮೀನುಸಾರಿಗೆ ಈ ಉಪ್ಪಿನಿಂದಲೇ ರುಚಿ ಬರುತ್ತದೆ ಎಂಬ ಭಾವನೆ ಮತ್ಸ್ಯಪ್ರಿಯರಲ್ಲಿದೆ. ಇನ್ನು ಬೇಸಿಗೆಯಂತೂ ಉಪ್ಪಿನಕಾಯಿಯ ಸಮಯ. ಅದರ ತಯಾರಿಕೆಗೆ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಈ ಉಪ್ಪಿನದೇ ಪ್ರಮುಖ ಪಾತ್ರ. ಒಣ ಮೀನಿನ ತಯಾರಿಯಲ್ಲಿ ಅಯೋಡಿನ್ ರಹಿತ ಉಪ್ಪು ಬಳಸಲ್ಪಡುತ್ತಿದ್ದು ಆ ಉಪ್ಪಿಗೂ ಸಕತ್ ಬೇಡಿಕೆಯಿದೆ.

‘ಆಯುಷ್‌ ಪದ್ಧತಿಯಲ್ಲಿ ಸೂರ್ಯಸ್ನಾನ ಸೇರಿದಂತೆ ಕೆಲವು ಚಿಕಿತ್ಸೆಗಳಲ್ಲಿ ತನ್ನ ಔಷಧೀಯ ಗುಣಗಳ ಕಾರಣಗಳಿಗಾಗಿ ಇಲ್ಲಿನ ಕೆಂಪುಪ್ಪೇ ಬಳಕೆ ಆಗುವುದರಿಂದ ರಾಜ್ಯದ ಇತರ ಭಾಗಗಳಿಂದಲೂ ನಮಗೆ ಬಹಳ ಬೇಡಿಕೆ ಬರುತ್ತಿದೆ’ ಎನ್ನುತ್ತಾರೆ ಸಂಘದ ವ್ಯವಸ್ಥಾಪಕ ಅನಿಲ್ ನಾಡಕರ್ಣಿ. ಈ ಉಪ್ಪಿನ ಔಷಧೀಯ ಗುಣಗಳೂ ಮೊದಲಿನಿಂದಲೂ ಜಿಲ್ಲೆಯಲ್ಲಿ ಮನೆಮಾತಾಗಿವೆ. ಅನಿಲ್ ಹೇಳುವಂತೆ ‘ಉಪ್ಪಿನ ತಯಾರಿಕೆಯಲ್ಲಿ ಬಳಸುವುದು ಅಘನಾಶಿನಿ ನದಿಯ ನೀರು. ಇನ್ನೂ ತನ್ನ ಪಾವಿತ್ರತೆಯನ್ನು ಉಳಿಸಿಕೊಂಡಿರುವ ಜಗತ್ತಿನ ಕೆಲವೇ ಕೆಲವು ನದಿಗಳಲ್ಲಿ ಇದೂ ಒಂದು. ಹೆಸರೇ ಹೇಳುವಂತೆ ಅಘನಾಶಿನಿಯು ಪಶ್ಚಿಮಘಟ್ಟಗಳ ಬೆಟ್ಟಗುಡ್ಡಗಳಿಂದ ಹರಿದು ಬರುವಾಗ ತನ್ನ ದಾರಿಗುಂಟ ಅನೇಕ ಔಷಧೀಯ ಸಸ್ಯಗಳ ಪ್ರದೇಶದಿಂದ ಹಾದುಬರುವುದರಿಂದ ರೋಗನಾಶಕ ಗುಣಗಳನ್ನು ಪಡೆದುಕೊಂಡಿದೆ ಎಂಬುದನ್ನು ತಜ್ಞರೇ ಒಪ್ಪುತ್ತಾರೆ. ಆಯುರ್ವೇದದಲ್ಲೂ ಸಾಣಿಕಟ್ಟಾ ಉಪ್ಪು ಬಳಕೆಯಾಗುತ್ತದೆ.





ತಯಾರಾದ ಉಪ್ಪನ್ನು ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ...

ಸಂಪೂರ್ಣವಾಗಿ ನೈಸರ್ಗಿಕ ಪದ್ಧತಿಯಲ್ಲಿ ಸೂರ್ಯನ ಶಾಖವನ್ನು ಬಳಸಿ ತಯಾರಿಸಲಾಗುವ ಈ ಉಪ್ಪಿನ ತಯಾರಿಕೆಗೆ ತಗಲುವ ಸಮಯ ಸರಿಸುಮಾರು ಮೂರು ತಿಂಗಳು. ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ನದಿ–ಸಾಗರ ಸಂಗಮದ ಭಾಗದ ನೀರನ್ನು ಇಲ್ಲಿನ ಬಯಲು ಪ್ರದೇಶದಲ್ಲಿ ಕಟ್ಟೆ ಕಟ್ಟಿ ಸಂಗ್ರಹಿಸಿ ಸಂಸ್ಕರಿಸಿ, ಆಗಾಗ ದ್ರಾವಣದ ವಾಹಕತೆಯನ್ನು ಗಮನಿಸುತ್ತಾ, ಆ ಬಿರು ಬಿಸಿಲಲ್ಲಿ ನಿಂತು ಉಪ್ಪನ್ನು ತಯಾರಿಸಲು ಬೇಕಾಗುವ ಸಂಯಮ, ಕೌಶಲವನ್ನು ಮೈಗೂಡಿಸಿಕೊಂಡಿರುವ ಸ್ಥಳೀಯರಿಗೆ ಅದೊಂದು ದೈವದತ್ತ ಕಲೆ. ಹೀಗೆ ತಯಾರಾದ ಉಪ್ಪಿಗೆ ನಂತರ ಆಯೋಡಿನ್ ಸೇರಿಸಿ ಪ್ಯಾಕಿಂಗ್‌ ಮಾಡಲಾಗುತ್ತದೆ. ಹೊಸ ಹೊಸ ಆವಿಷ್ಕಾರಗಳ ನಡುವೆಯೂ ನೂರಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನೈಸರ್ಗಿಕ ಸಂಪನ್ಮೂಲಗಳನ್ನೇ ಬಳಸಿ ನಮ್ಮ ಊಟದ ರುಚಿ ಹೆಚ್ಚಿಸಲು ಬೆವರು ಸುರಿಸುತ್ತಿರುವ ಈ ಮಣ್ಣಿನ ಮಕ್ಕಳ ಉಪ್ಪಿನ ಋಣದಲ್ಲಿ ನಾವಿದ್ದೇವೆ, ಅಲ್ಲವೆ?

ಚಿತ್ರಗಳು: ದುರ್ಗೇಶ ಕಾಗಲ್

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry