ಮಂಗಳವಾರ, ಮಾರ್ಚ್ 2, 2021
23 °C

ಉತ್ತೀರ್ಣ ಪ್ರಮಾಣ ಶೇ 4ರಷ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತೀರ್ಣ ಪ್ರಮಾಣ ಶೇ 4ರಷ್ಟು ಏರಿಕೆ

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿಯೂ ಮೇಲುಗೈ ಸಾಧಿಸಿರುವ ಗ್ರಾಮೀಣ ವಿದ್ಯಾರ್ಥಿಗಳು (ಶೇ 74) ನಗರ ಪ್ರದೇಶ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ.

ಕಳೆದ ವರ್ಷದ ಫಲಿತಾಂಶಶೇ 67.87 ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 4.01ರಷ್ಟು ಏರಿಕೆ ಕಂಡಿದೆ. ಖಾಸಗಿ ಶಾಲೆಗಳ ಶೇ 83.05ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಸರ್ಕಾರಿ ಶಾಲೆಗಳ ಶೇ 75.12 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಂ.ಟಿ. ರೇಜು ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕಿ ವಿ. ಸುಮಂಗಲಾ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದರು.

ಈ ಬಾರಿಯೂ ಬಾಲಕಿಯರೇ ಮುನ್ನಡೆ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಉತ್ತೀರ್ಣ ಪ್ರಮಾಣ ಶೇ 78.01ರಷ್ಟಿದೆ. ಇಬ್ಬರು ವಿದ್ಯಾರ್ಥಿಗಳು ತಲಾ 625 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು ತಲಾ 624 ಹಾಗೂ 12 ವಿದ್ಯಾರ್ಥಿಗಳು ತಲಾ 623 ಅಂಕಗಳನ್ನು ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಡುಪಿಗೆ ಮೊದಲ ಸ್ಥಾನ: ಉಡುಪಿ ಜಿಲ್ಲೆ (ಶೇ 88.18) ಈ ಬಾರಿಯೂ ಮೊದಲ ಗಳಿಸಿದೆ. ಕಳೆದ ವರ್ಷ ಐದನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಎರಡನೇ ಸ್ಥಾನಕ್ಕೆ (ಶೇ 88.12) ಏರಿದೆ. ಚಿಕ್ಕೋಡಿ ಮೂರನೇ ಸ್ಥಾನ (87.01) ಉಳಿಸಿಕೊಂಡಿದೆ. 16ನೇ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿ ಕೊನೆಯ ಸ್ಥಾನಕ್ಕೆ (ಶೇ 35.54) ಕುಸಿದಿದೆ.

ಎಸ್‌ಎಂಎಸ್‌ ಫಲಿತಾಂಶ: ಮೊದಲ ಬಾರಿಗೆ ಇಲಾಖೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಫಲಿತಾಂಶವನ್ನು ರವಾನಿಸುವ ಪ್ರಯತ್ನ ಮಾಡುತ್ತಿದೆ. ‘ಪರೀಕ್ಷೆಗೆ ಹಾಜರಾಗಿರುವ 8.38 ಲಕ್ಷ ವಿದ್ಯಾರ್ಥಿಗಳಿಗೂ ಸಂದೇಶ ಕಳುಹಿಸುತ್ತೇವೆ’ ಎಂದು

ವಿ. ಸುಮಂಗಲಾ ತಿಳಿಸಿದರು.

‘ಪ್ರತಿ ದಿನ ಗರಿಷ್ಠ 4 ತಾಸು ಓದುತ್ತಿದ್ದೆ. ಸಂಗೀತ ಕೇಳುತ್ತಾ ಓದುವುದು ನನ್ನ ಅಭ್ಯಾಸ. ಏರೋನಾಟಿಕ್‌ ಎಂಜಿನಿಯರ್‌ ಆಗುವ ಕನಸಿದೆ’

– ಎಂ.ಎಸ್‌. ಯಶಸ್, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು

ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ. ಗೈಡ್‌ ಬಿಟ್ಟು ಪಠ್ಯಪುಸ್ತಕ ಗಳನ್ನು ಓದುತ್ತಿದ್ದೆ. ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸುವುದೇ ಗುರಿ’

– ಕೆ.ಎಸ್‌. ಸುದರ್ಶನ್‌, ಹೋಲಿ ಚೈಲ್ಡ್‌ ಇಂಗ್ಲಿಷ್‌ ಪ್ರೌಢ ಶಾಲೆ,ಬೆಂಗಳೂರು

ಜೂನ್‌ 21ರಿಂದ ಪೂರಕ ಪರೀಕ್ಷೆ

ಜೂನ್‌ 21ರಿಂದ 28ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಶುಲ್ಕ ಪಾವತಿಸಲು ಇದೇ 19 ಕೊನೆಯ ದಿನ. ಅನುತ್ತೀರ್ಣರಾದವರು ಮರುಮೌಲ್ಯಮಾಪನದ ಫಲಿತಾಂಶ ಬರುವವರೆಗೂ ಕಾಯುವಂತಿಲ್ಲ.  8ರಿಂದಲೇ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಉತ್ತರ ಪತ್ರಿಕೆಯ ಛಾಯಾಪ್ರತಿಗೆ 9ರಿಂದ ಅರ್ಜಿ ಸಲ್ಲಿಸಬಹುದಾ ಗಿದ್ದು, 18 ಕೊನೆ ದಿನ. ಮರುಮೌಲ್ಯಮಾಪನಕ್ಕೆ ಇದೇ 11 ರಿಂದ 21ರವರೆಗೆ ಅರ್ಜಿ ಸಲ್ಲಿಸಬಹುದು.

ಛಾಯಾಪ್ರತಿ 1 ವಿಷಯಕ್ಕೆ₹ 305 ಹಾಗೂ ಮರು ಮೌಲ್ಯಮಾಪನ 1 ವಿಷಯಕ್ಕೆ ₹705 ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಈ ಸಾಲಿನಿಂದ ಸ್ಕ್ಯಾನ್‌ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುವುದು. ಈ ಎಲ್ಲಾ ಪ್ರಕ್ರಿಯೆ ಆನ್‌ಲೈನ್‌ (www.kseeb.kar.nic.in ) ಮೂಲಕ ನಡೆಯಲಿದೆ.

20 ಸಾವಿರ ವಿದ್ಯಾರ್ಥಿಗಳಿಗೆ ಕೃಪಾಂಕ

ಪಾಸಾಗಲು ಒಂದೆರಡು ಅಂಕಗಳು ಬೇಕಿದ್ದ ಸುಮಾರು 20 ಸಾವಿರ ವಿದ್ಯಾರ್ಥಿಗಳಿಗೆ ಈ ಬಾರಿ ತೇರ್ಗಡೆ ಕೃಪಾಂಕ ಸಿಕ್ಕಿದೆ.

‘ಎರಡು ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದರೆ ಕೃಪಾಂಕ ನೀಡಬಹುದು. ಆದರೆ, ಇದು ಆಯಾ ಪ್ರಶ್ನೆಪತ್ರಿಕೆಯ ಒಟ್ಟು ಅಂಕಗಳ ಶೇ 5ರಷ್ಟು ಮೀರಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಈ ಪ್ರಕಾರ ಕೃಪಾಂಕ ನೀಡಿದ್ದೇವೆ’ ಎಂದು ರೇಜು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.