ಶುಕ್ರವಾರ, ಫೆಬ್ರವರಿ 26, 2021
18 °C

ಇಂಧನ ಬೆಲೆ: ತಾತ್ಕಾಲಿಕ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಧನ ಬೆಲೆ: ತಾತ್ಕಾಲಿಕ ತಡೆ

ನವದೆಹಲಿ: ‘ಗ್ರಾಹಕರಿಗೆ ಹೊರೆಯಾಗುವ ಕಾರಣಕ್ಕೆ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆ ಏರಿಕೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’ ಎಂದು ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌  ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಏಪ್ರಿಲ್‌ 24 ರಿಂದ ಪ್ರತಿ ದಿನ ಇಂಧನ ಬೆಲೆ ಹೆಚ್ಚಿಸಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 3 ಡಾಲರ್‌ನಂತೆ ಏರಿಕೆಯಾಗಿದ್ದರೂ, ಇಂಧನಗಳ ಬೆಲೆ ಹೆಚ್ಚಳಗೊಂಡಿಲ್ಲ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು 55 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದರೂ, ಬಳಕೆದಾರರ ಮೇಲಿನ ಹೊರೆ ತಗ್ಗಿಸಲು ಎಕ್ಸೈಸ್‌ ಸುಂಕ ಕಡಿತಗೊಳಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿತ್ತು.

‘ಸದ್ಯದ ಕಚ್ಚಾ ತೈಲ ಬೆಲೆ ಏರಿಕೆಗೆ ಮೂಲಭೂತ ಸಂಗತಿಗಳು ಕಾರಣವಾಗಿಲ್ಲ. ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಅದರಿಂದ ಅನಗತ್ಯವಾಗಿ ಆತಂಕ ಸೃಷ್ಟಿಯಾಗಲಿದೆ ಎನ್ನುವ ಕಾರಣಕ್ಕೆ ಬೆಲೆ ಹೆಚ್ಚಿಸಿಲ್ಲ. ಕೆಲ ದಿನಗಳವರೆಗೆ ಕಾದು ನೋಡಲು ನಾವು ನಿರ್ಧರಿಸಿದ್ದೇವೆ’ ಎಂದು ಸಿಂಗ್‌ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕಚ್ಚಾ ತೈಲದ ಬೆಲೆ ಹೆಚ್ಚಳವು ಇದೇ ರೀತಿ ಮುಂದುವರೆದರೆ ಇಂಧನ ಮಾರಾಟ ದರ ಹೆಚ್ಚಲಿದೆ’ ಎಂದೂ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.

‘ಇಂಧನ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ, ತೈಲ ಮಾರಾಟ ಸಂಸ್ಥೆಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರ ಕೊಟ್ಟ ನಂತರ ಈ ವಿಷಯದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

‘ಪ್ರತಿ ದಿನ ಬೆಲೆ ಪರಿಷ್ಕರಣೆ ಕೈಬಿಡುವ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ಐಒಸಿ ಅಧ್ಯಕ್ಷ ಸಂಜೀವ್‌ ಸಿಂಗ್‌ ಅವರು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.

ಗುಜರಾತ್‌ ನಿದರ್ಶನ: 2017ರ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಿಸದಂತೆ ಸರ್ಕಾರ ಅನೌಪಚಾರಿಕವಾಗಿ ತೈಲ ಮಾರಾಟ ಸಂಸ್ಥೆಗಳಿಗೆ ಸೂಚಿಸಿತ್ತು ಎಂದು ವರದಿಯಾಗಿತ್ತು.

ಆ ಸಂದರ್ಭದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳದ ಕಾರಣಕ್ಕೆ ಪ್ರತಿ ಲೀಟರ್‌ ಇಂಧನ ಬೆಲೆಯನ್ನು 45 ಪೈಸೆಯಷ್ಟು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿತ್ತು. ಆದರೂ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.