ಚಿಕ್ಕಪೇಟೆಯಲ್ಲಿ ‘ಸಾಗರ್‌’ ನಗುಮೊಗೆಯ ಲಗುಬಗೆ

7

ಚಿಕ್ಕಪೇಟೆಯಲ್ಲಿ ‘ಸಾಗರ್‌’ ನಗುಮೊಗೆಯ ಲಗುಬಗೆ

Published:
Updated:
ಚಿಕ್ಕಪೇಟೆಯಲ್ಲಿ ‘ಸಾಗರ್‌’ ನಗುಮೊಗೆಯ ಲಗುಬಗೆ

ಬೆಂಗಳೂರು: ಬಹುಮಹಡಿ ಕಟ್ಟಡಗಳ ಮೇಲೆ ನಿಂತು ನೋಡುತ್ತಿದ್ದ ಜನರು, ರಸ್ತೆಯಲ್ಲೇ ಆಟವಾಡುತ್ತಿದ್ದ ಮಕ್ಕಳು, ವ್ಯಾಪಾರಿಗಳು... ಹೀಗೆ ಎಲ್ಲರಿಗೂ ನಗುಮೊಗದಿಂದ ನಮಸ್ಕರಿಸುತ್ತಲೇ ಚಿಕ್ಕಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಚಂದ್ರ ಸಾಗರ್‌ ಮತ ಭಿಕ್ಷೆ ಬೇಡಿದರು.

ಸೋಮೇಶ್ವರನಗರದ ಮುಖ್ಯರಸ್ತೆಯಲ್ಲೇ ಕಾರು ನಿಲ್ಲಿಸಿ ಪಾದಯಾತ್ರೆ ಆರಂಭಿಸಿದ 64 ವರ್ಷ ವಯಸ್ಸಿನ ಸಾಗರ್‌, ಹಮ್ಮುಬಿಮ್ಮು ಬಿಟ್ಟು ಗಲ್ಲಿಗಲ್ಲಿಗಳಲ್ಲಿ ಸಾಗಿದರು. ಜೊತೆಗಿದ್ದ ಯುವ ಕಾರ್ಯಕರ್ತರನ್ನು ಹಿಂದಿಕ್ಕುವಷ್ಟು ವೇಗವಾಗಿ ಹೆಜ್ಜೆಹಾಕುತ್ತಿದ್ದರು. 20 ಮೀಟರ್‌ ಉದ್ದವಿದ್ದ ರಸ್ತೆಯಲ್ಲಿ ಕ್ಷಣದಲ್ಲಿಯೇ ಪ್ರಚಾರ ಮುಗಿಸಿ, ಮುಂದಡಿ ಇಡುತ್ತಿದ್ದರು.

ಇವರು ನಮಸ್ಕರಿಸುತ್ತಾ, ಕರಪತ್ರವನ್ನು ನೀಡುತ್ತಾ ಮುಂದೆ ಸಾಗುತ್ತಿದ್ದರೆ, ಹಿಂದೆ ಬರುತ್ತಿದ್ದ ಕಾರ್ಯಕರ್ತರು ‘ಕರಿಯಣ್ಣ ಅವರೇ, ಈ ಬಾರಿ ನಮ್ಮ ಸಾಹೇಬ್ರಿಗೇ ಮತ ಹಾಕಬೇಕು’ ಎಂದು ಹೇಳುತ್ತಿದ್ದರು.

ಕೊಳೆಗೇರಿಯೊಳಗೆ ತೆರಳಿದ ಅವರು, ಅಲ್ಲಿ ಮನೆಗೆಲಸದಲ್ಲಿ ತಲ್ಲೀನರಾಗಿದ್ದ ಮಹಿಳೆಯರನ್ನು ಮಾತನಾಡಿಸಿ, ಮತ ಹಾಕುವುದು ಎಷ್ಟು ಅಗತ್ಯ ಎಂದು ಪಾಠ ಮಾಡಿದ್ದಲ್ಲದೇ ಕರಪತ್ರವನ್ನೂ ನೀಡಿದರು. ಅಲ್ಲೇ ಮಗುವನ್ನು ಆಡಿಸುತ್ತಿದ್ದ ಮನೆಯ ಹೊರಗೆ ಕುಳಿತಿದ್ದ ತಾಯಿಯ ಬಳಿ ಮತ ಕೇಳಿದ ಹೇಮಚಂದ್ರ ಅವರು ಮಗುವನ್ನು ಮುದ್ದಾಡಿದರು. ಕಾಲಿಗೆ ಗಾಲಿಕಟ್ಟಿದವರಂತೆ ಸಾಗುತ್ತಿದ್ದ ಅವರ ನಡಿಗೆಗೆ ಆಟವಾಡುತ್ತಿದ್ದ ಮಕ್ಕಳನ್ನು ಕಂಡಾಕ್ಷಣ ವೇಗ ತಗ್ಗುತ್ತಿತ್ತು. ಖುಷಿಯಿಂದ ತಲೆಸವರಿ, ಅವರಿಗೂ ಕರಪತ್ರ ಕೊಟ್ಟು ಮುಂದೆ ಹೋಗುತ್ತಿದ್ದರು.

ಆಟೊದಲ್ಲಿ ಕೂಗುತ್ತಿದ್ದ ಘೋಷಣೆಯನ್ನು ಕೇಳಿ, ಮಹಡಿ ಮನೆಗಳಿದ್ದವರು ಮನೆಯಿಂದ ಇಣುಕು ಹಾಕಿ, ಇವರ ಪ್ರಚಾರ ವೈಖರಿಯನ್ನು ವೀಕ್ಷಿಸುತ್ತಿದ್ದರು. ಇವರು ಕೈ ಮುಗಿಯುವುದನ್ನು ನೋಡಿ ಅವರೂ ಮರು ವಂದಿಸುತ್ತಿದ್ದರು. ಪರಿಚಯವಿದ್ದವರು ನಿಲ್ಲಿಸಿ, ಮಾತನಾಡಿಸುತ್ತಿದ್ದರು.

ಒಂದು ಗಂಟೆಗ ನಡೆದಾಡಿ ಮತಯಾಚಿಸಿದ್ದರೂ ಅವರ ಮೊಗದಲ್ಲಿ ಸುಸ್ತು, ಆಯಾಸ ಛಾಯೆ ಒಂದಷ್ಟೂ ಸುಳಿದಿರಲಿಲ್ಲ.

‘ನಿಯಮಿತವಾಗಿ ಧ್ಯಾನ, ವ್ಯಾಯಾಮ ಮಾಡುತ್ತಿದ್ದರಿಂದ ನಡೆಯಲು ಸಾಧ್ಯವಾಗುತ್ತಿದೆ’ ಎಂದು ಹೇಮಚಂದ್ರ ವಿವರಿಸಿದರು.

6 ಗಂಟೆಗೇ ಪ್ರಾರಂಭ ಮತಯಾತ್ರೆ

‘ಚುನಾವಣೆ ಪ್ರಚಾರಕ್ಕೆಂದು ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ಪ್ರತಿದಿನವೂ ಬೆಳಿಗ್ಗೆ ಒಂದು ತಾಸು ಉದ್ಯಾನಗಳಿಗೆ ಭೇಟಿ ನೀಡಿ, ಅಲ್ಲಿ ಬರುವ ನಡಿಗೆದಾರರ ಬಳಿ ಮತಯಾಚಿಸುತ್ತೇನೆ. ನಂತರ ಗಿಜಿಗುಡುವ ಹೋಟೆಲ್‌ಗೆ ತೆರಳಿ ಜನರೊಂದಿಗೆ ಟಿಫನ್‌ ಮಾಡುತ್ತಾ ಮತ ಹಾಕುವಂತೆ ಕೋರುತ್ತೇನೆ’ ಎಂದು ಹೇಮಚಂದ್ರ ಅವರು ಪ್ರಚಾರದ ದಿನಚರಿಯನ್ನು ಹಂಚಿಕೊಂಡರು.

‘ಟಿಫನ್‌ ಮಾಡಿ ಮನೆಗೆ ಬಂದು 20 ನಿಮಿಷದಲ್ಲಿ ಸ್ನಾನ ಮಾಡಿ ತಯಾರಾಗುತ್ತೇನೆ. 10ಗಂಟೆಗೆ ಮತ್ತೆ ವಾರ್ಡ್‌ಗಳಲ್ಲಿ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆ. ಮಧ್ಯಾಹ್ನ 45 ನಿಮಿಷ ಬಿಡುವು ತೆಗೆದುಕೊಂಡು ಅಂಗಡಿಗಳಿಗೆ, ವಾಣಿಜ್ಯ ಮಳಿಗೆಗಳ ಬಳಿ ಮತಯಾಚನೆ ಮಾಡುತ್ತೇನೆ. ಸಂಜೆ ಸಂಘ–ಸಂಸ್ಥೆಗಳನ್ನು ಭೇಟಿ ಮಾಡಿ, ಅವರ ಸಲಹೆ–ಸೂಚನೆಗಳನ್ನು ಪಡೆಯುತ್ತೇನೆ’ ಎಂದರು.

‘ರಾತ್ರಿ 9 ರಿಂದ 11ರವರೆಗೆ ವಿಶೇಷವಾಗಿ ಕ್ಷೇತ್ರದಲ್ಲಿರುವ ಪ್ರಮುಖರ ಮನೆಗಳಿಗೆ ಭೇಟಿ ಮಾಡುತ್ತೇನೆ. ಇದಕ್ಕೆ ಬೆಳಿಗ್ಗೆಯೇ ನಮ್ಮ ಕಾರ್ಯಕರ್ತರು ತಯಾರಿ ನಡೆಸಿರುತ್ತಾರೆ. ರಾತ್ರಿ ಅವರ ಮನೆಗೆ ಹೋಗಿ ಮೊದಲು ಮೇ 12ರಂದು ಮತದಾನ ಮಾಡಿ ಎನ್ನುತ್ತೇನೆ. ನಂತರ ನಿಮ್ಮ ಮತವನ್ನು ನನಗೆ ಹಾಕಿ ಎಂದು ಕೋರುತ್ತೇನೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry