ರಾಜ್ಯದಲ್ಲಿ ಸೋತರೆ ಕಾಂಗ್ರೆಸ್‌ನ ಎಟಿಎಂ ಬಂದ್‌

7
ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರದ ಜವಳಿ ಸಚಿವೆ ಸ್ಮೃತಿ ಇರಾನಿ ಲೇವಡಿ

ರಾಜ್ಯದಲ್ಲಿ ಸೋತರೆ ಕಾಂಗ್ರೆಸ್‌ನ ಎಟಿಎಂ ಬಂದ್‌

Published:
Updated:

ಜೇವರ್ಗಿ: ‘ಕೇಂದ್ರ ಹಾಗೂ ದೇಶದ 21 ರಾಜ್ಯಗಳಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಂಡಿದೆ. ಈಗ ಉಳಿದಿರುವುದು ಕರ್ನಾಟಕ ಮಾತ್ರ. ಇಲ್ಲಿಯೂ ಅದು ಸೋತರೆ ಕಾಂಗ್ರೆಸ್‌ ಪಕ್ಷದ ಎಟಿಎಂ ಬಂದ್ ಆಗಲಿದೆ’ ಎಂದು ಕೇಂದ್ರದ ಜವಳಿ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದರು.

ಯಡ್ರಾಮಿ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ‍ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ಸಿಗರು ಪರದಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ತಮ್ಮ ಪಕ್ಷದ ನಾಯಕರ ಮೇಲೆಯೇ ವಿಶ್ವಾಸವಿಲ್ಲ. ಇಂಥವರು ದೇಶದ ಜನರ ವಿಶ್ವಾಸ ಗಳಿಸಲು ಹೇಗೆ ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.

‘ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಕರ್ನಾಟಕದಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ. ಪ್ರಸಕ್ತ ಚುನಾವಣೆ ನಂತರ ನವ ಕರ್ನಾಟಕದ ನಿರ್ಮಾಣದ ಸಂಕಲ್ಪದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದರು.

ಜೇವರ್ಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಧರ್ಮ ಒಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು. ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಡ್ರಾಮಿ ತಾಲ್ಲೂಕು ರಚನೆ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಜಗದೀಶ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಯಡ್ರಾಮಿ ತಾಲ್ಲೂಕು ಘೋಷಣೆ ಮಾಡಿದ್ದಾರೆ. ಮಲ್ಲಾಬಾದ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತದಾರರು ಬಿಜೆಪಿಗೆ ಬೆಂಬಲ ನೀಡುವಂತೆ’ ಮನವಿ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥಗೌಡ ಯಲಗೋಡ, ನಾಯಕಿ ಶೋಭಾ ಬಾಣಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ದೊಡಮನಿ, ಮುಖಂಡರಾದ ಎಂ.ಬಿ.ಪಾಟೀಲ ಹರವಾಳ, ರಮೇಶಬಾಬು ವಕೀಲ, ಅಶೋಕ ಸಾಹು ಗೋಗಿ, ಶಿವರಾಜ ಪಾಟೀಲ ರದ್ದೇವಾಡಗಿ, ಧರ್ಮಣ್ಣ ದೊಡಮನಿ, ರೇವಣಸಿದ್ದಪ್ಪ ಸಂಕಾಲಿ, ನಿಂಗಣ್ಣಗೌಡ ಪೊಲೀಸ್ ಪಾಟೀಲ ಯಡ್ರಾಮಿ, ದಂಡಪ್ಪ ಸಾಹು ಕುರಳಗೇರಾ, ಶಿವಕುಮಾರ ಪಾಟೀಲ ಯಡ್ರಾಮಿ, ಮರೆಪ್ಪ ಬಡಿಗೇರ್, ಪುಂಡಲಿಕ ಗಾಯಕವಾಡ, ಎಸ್.ಕೆ.ಹೇರೂರ, ಬಸವರಾಜ ಮಾಲಿಪಾಟೀಲ, ಭೀಮರಾವ್ ಗುಜಗೊಂಡ, ಮಹಾದೇವಪ್ಪ ದೇಸಾಯಿ ಕೊಡಚಿ, ಮಲ್ಲಣ್ಣ ಕುಲಕರ್ಣಿ, ಗಿರಿಜಾಶಂಕರ ಅರಳಗುಂಡಗಿ, ಬಸವರಾಜ ಕಂದಗಲ್ ಪಾಲ್ಗೊಂಡಿದ್ದರು.

**

ಪ್ರಧಾನಿ ಮೋದಿ, ಅಮೀತ್ ಶಾ ಅವರಿಗೆ ದೇಶದ ನಾಗರಿಕರ ಭವಿಷ್ಯದ ಚಿಂತೆಯಾದರೆ; ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಮ್ಮದೇ ಭವಿಷ್ಯದ ಚಿಂತೆ ಕಾಡುತ್ತಿದೆ‌

– ಸ್ಮೃತಿ ಇರಾನಿ, ಕೇಂದ್ರದ ಜವಳಿ ಸಚಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry