ಸಿದ್ದರಾಮಯ್ಯ ಯೋಜನೆಗಳು ಗೆಲುವಿಗೆ ವರದಾನ

7

ಸಿದ್ದರಾಮಯ್ಯ ಯೋಜನೆಗಳು ಗೆಲುವಿಗೆ ವರದಾನ

Published:
Updated:
ಸಿದ್ದರಾಮಯ್ಯ ಯೋಜನೆಗಳು ಗೆಲುವಿಗೆ ವರದಾನ

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರಂತಹ ಪ್ರಬಲ ನಾಯಕರ ವಿರುದ್ಧ ಸ್ಪರ್ಧೆ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ ?

ಸಾಮಾನ್ಯ ಕಾರ್ಯಕರ್ತ ಹಾಗೂ ರೈತನ ಮಗನಾದ ನನ್ನನ್ನು ಕಾಂಗ್ರೆಸ್‌ ಗುರುತಿಸಿ ಟಿಕೆಟ್‌ ನೀಡಿದ್ದು, ಸಂತಸ ತಂದಿದೆ. ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಘನತೆ ಕಾಪಾಡುವ ಕಾರ್ಯ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬಲ ನಾಯಕರ ವಿರುದ್ಧ ಸಾಮಾನ್ಯ ಪ್ರಜೆ ಸ್ಪರ್ಧೆ ನಡೆಸಲು ಅವಕಾಶವಿದೆ.

ಯಾವ ವಿಷಯದ ಆಧಾರದ ಮೇಲೆ ಚುನಾವಣೆಯಲ್ಲಿ ಮತಯಾಚಿಸುತ್ತೀರಿ?

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರೂ ತಾಲ್ಲೂಕಿನ ರೈತರಿಗೆ ಪೂರಕವಾದ ನೀರಾವರಿ ಯೋಜನೆ ಅನುಷ್ಠಾನ ಮಾಡಿಲ್ಲ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿಲ್ಲ. ಈ ವಿಷಯವನ್ನು ತಿಳಿಸುವ ಜತೆ ಈ ಕಾರ್ಯಗಳನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಜನಪರ ಯೋಜನೆಗಳ ಆಧಾರದ ಮೇಲೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇನೆ.

ನಿಮಗೇ ಜನ ಏಕೆ ವೋಟು ಹಾಕಬೇಕು?

ತಾಲ್ಲೂಕಿನಲ್ಲಿ ರೈತರಿಗೆ ಪೂರಕವಾದ ಏತನೀರಾವರಿ ಯೋಜನೆ ಅನುಷ್ಠಾನ ಮಾಡಲು,ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ನನಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದೇನೆ.

ಚುನಾವಣೆಯಲ್ಲಿ ಗೆಲುವು ಸಾಧಿಸಲು ನೀವು ಕೈಗೊಂಡಿರುವ ರಣತಂತ್ರ?

ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಅನುಭವ ನನಗಿದೆ. ಆದರೆ ಈ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರೇ ನನ್ನ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ.

ಮಾಜಿ ಶಾಸಕ ಬಿ.ಎನ್‌. ಮಹಾಲಿಂಗಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್‌.ಎಸ್‌. ಶಾಂತವೀರಪ್ಪಗೌಡ್ರು ಕಾಂಗ್ರೆಸ್‌ ಸೇರಿದ್ದು ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆಯೇ?

ಮಾಜಿ ಶಾಸಕ ಬಿ.ಎನ್‌. ಮಹಾಲಿಂಗಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್‌.ಎಸ್‌. ಶಾಂತವೀರಪ್ಪಗೌಡ್ರು ಕಾಂಗ್ರೆಸ್‌ ಸೇರಿದ್ದು ಪಕ್ಷಕ್ಕೆ ಶಕ್ತಿ ತಂದಿದೆ. ಕಾಂಗ್ರೆಸ್‌ನ ಹಲವು ಮುಖಂಡರು ಕೂಡ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆಯೇ?

ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಅನ್ನಭಾಗ್ಯ, ವಾಸಿಸುವನೇ ಭೂಮಿ ಒಡೆಯ, ಬಿದಾಯಿ ಯೋಜನೆ ಸೇರಿ ಹಲವು ಜನಪರ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ.

ಚುನಾವಣೆಯಲ್ಲಿ ಗೆದ್ದರೆ ಏನು ಮಾಡುತ್ತೀರಾ?

ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡಿಸುತ್ತೇನೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವ ಜತೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಒದಗಿಸುವ ಕಾರ್ಯಕ್ರಮ ಆಯೋಜಿಸುತ್ತೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೋಣಿ ಮಾಲತೇಶ್‌ ಸ್ಪರ್ಧಿಸಿದ್ದಾರೆ. ಪಟ್ಟಣದ ನಿವಾಸಿಯಾಗಿರುವ ಗೋಣಿ ಮಾಲತೇಶ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯರಾಗಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್‌ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್‌ ಪ್ರಬಲ ಪೈಪೋಟಿ ನೀಡುತ್ತಾರೆ ಎಂಬ ನಿರೀಕ್ಷೆ ಜನತೆಯಲ್ಲಿದೆ. ತಮ್ಮ ಗೆಲುವಿಗಾಗಿ ಕೂಡ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಗೋಣಿ ಮಾಲತೇಶ್‌ ಪರ ಈಚೆಗೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಚಾರ ನಡೆಸಿದ್ದಾರೆ. ಅವರು ‘ಪ್ರಜಾವಾಣಿ’ ಜತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry