7
ಕಾರ್ಕಳ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌, ಬಿಜೆಪಿ ನಡುವೆ ಜಿದ್ದಾಜಿದ್ದಿ

ಭಿನ್ನಮತದ ನಡುವೆಯೂ ಕೈ ಪಡೆಯ ಗೆಲುವಿನ ಮಂತ್ರ

Published:
Updated:

ಉಡುಪಿ: ಜಿದ್ದಾಜಿದ್ದಿನ ಚುನಾವಣಾ ಕಣವಾಗಿರುವ ಕಾರ್ಕಳ ಕ್ಷೇತ್ರದ ಮೇಲೆ ಈ ಬಾರಿ ಕಾಂಗ್ರೆಸ್ ಭಿನ್ನಮತದ ಮೋಡ ಕವಿದಿದೆ. ಪರಿಣಾಮ, ಸಹಜವಾಗಿ ಕಾಣಸಿಗುತ್ತಿದ್ದ ತುರುಸಿನ ಪೈಪೋಟಿ ವಾತಾವರಣ ಇಲ್ಲವೇನೋ ಎಂಬ ಭಾವನೆ ಭಾಸವಾಗುತ್ತಿದೆ.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರಿಗೆ ಪಕ್ಷದ ಟಿಕೆಟ್ ಕೈತಪ್ಪಿರುವುದು ಕಾರ್ಯಕರ್ತರ ಉತ್ಸಾಹವನ್ನು ಕೊಂಚ ತಗ್ಗಿಸಿದೆ. ‘ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಆದರೆ, ಉದಯ ಶೆಟ್ಟಿ ಅವರಿಗೆ ಟಿಕೆಟ್ ನೀಡಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಕಾರ್ಯಕರ್ತರು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಸಂಸದ ವೀರಪ್ಪ ಮೊಯಿಲಿ ಅವರೊಂದಿಗೆ ಉದಯ ಶೆಟ್ಟಿ ಅವರು ಪ್ರಚಾರ ನಡೆಸುವ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪ್ರಚಾರ ಈಗ ಒಂದಿಷ್ಟು ವೇಗ ಪಡೆದುಕೊಂಡಿದೆ.

ವಿಧಾನಸಭೆ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್. ಗೋಪಾಲ ಭಂಡಾರಿ ಕಾಂಗ್ರೆಸ್ ಅಭ್ಯರ್ಥಿ. ಇವರನ್ನು ಸಾಂಪ್ರದಾಯಿಕ ಎದುರಾಳಿಗಳು ಎಂದರೂ ತಪ್ಪಾಗಲಾರದು. ಒಮ್ಮೆ ಅವರು ಮತ್ತೊಮ್ಮೆ ಇರುವ ಗೆದ್ದಿರುವ ಉದಾಹರಣೆ ಈ ಕ್ಷೇತ್ರದ ಜಾಯಮಾನವನ್ನು ಹೇಳುತ್ತದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದರೂ, ಮತದಾರರು ಮಾತ್ರ ಸುನಿಲ್ ಅವರಿಗೆ ಆಶೀರ್ವಾದ ಮಾಡಿದ್ದರು. ಆದ್ದರಿಂದ ಇಲ್ಲಿನ ಪ್ರಜ್ಞಾವಂತ ಮತದಾರರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ.

ಕಳೆದ ಐದು ವರ್ಷದಲ್ಲಿ ಶಾಸಕರು ಮಾಡಿರುವ ಅಭಿವೃದ್ಧಿಯ ಬಗ್ಗೆ ಕ್ಷೇತ್ರದ ಜನರು ಮುಕ್ತ ಮನಸ್ಸಿನಿಂದ ಮಾತನಾಡುತ್ತಾರೆ. ಇಷ್ಟೊಂದು ಕೆಲಸ ಈ ಹಿಂದೆ ಆಗಿರಲಿಲ್ಲ ಎನ್ನುವವರಿಗೂ ಕಡಿಮೆ ಇಲ್ಲ. ಉದ್ಯೋಗ ಮೇಳ ಮಾಡುವ ಮೂಲಕ ಯುವ ಜನರಿಗೆ ಕೆಲಸ ಕೊಡಿಸಲು ಪ್ರಯತ್ನಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೆಲ್ತ್ ಕಾರ್ಡ್ ಮಾಡಿಸಿಕೊಟ್ಟಿರುವುದರಿಂದ ತುಂಬಾ ಸಹಾಯವಾಗಿದೆ ಎಂದು ಆಟೊ ಚಾಲಕರು ಹೇಳುತ್ತಾರೆ.

ಪ್ರಚೋದನಾಕಾರಿ ಭಾಷಣದಿಂದ ಗುರುತಿಸಿಕೊಂಡಿರುವ ಸುನಿಲ್ ಅವರ ಕ್ಷೇತ್ರದಲ್ಲಿ ‘ಹಿಂದುತ್ವ’ ‘ಹಿಂದೂ ವಿರೋಧಿ’ ಚರ್ಚೆ ಅಷ್ಟಾಗಿ ಇಲ್ಲ! ಗೋಪಾಲ ಭಂಡಾರಿ ಅವರ ಬಗ್ಗೆಯೂ ಜನರು ಒಳ್ಳೆಯ ಮಾತುಗಳನ್ನಾಡುತ್ತಾರೆ. ‘ಪಾಪದ ಜನ. ಅವರ ಅವಧಿಯಲ್ಲಿಯೂ ಒಂದಿಷ್ಟು ಕೆಲಸ ಆಗಿತ್ತು’ ಎನ್ನುತ್ತಾರೆ. ಅವರ ಸರಳತೆಯನ್ನು ಮೆಚ್ಚಿಕೊಳ್ಳುತ್ತಾರೆ. ಒಟ್ಟಾರೆ ಅಭಿವೃದ್ಧಿ ಕೆಲಸ ಹಾಗೂ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಜನರು ತುಲನೆ ಮಾಡುತ್ತಿರುವಂತಿದೆ.

ವಿಧಾನಸಭಾ ಚುನಾವಣೆಯ ನಂತರ ನಡೆದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಿದೆ. ಸಂಘಟನೆ ಶಕ್ತಿಯನ್ನು ಚುನಾವಣಾ ಗೆಲುವುಗಳ ಮೂಲಕವೇ ತೋರಿಸಿದೆ. ಆ ಫಲಿತಾಂಶಗಳೇ ಕಾಂಗ್ರೆಸ್ ಸಂಘಟನೆ ಹೇಗಿದೆ ಎಂದು ಸಹ ಹೇಳುತ್ತಿವೆ.

ಟಿಕೆಟ್ ಕಚ್ಚಾಟದ ನಂತರ ಕಾಂಗ್ರೆಸ್‌ನಲ್ಲಿ ಆವರಿಸಿದ್ದ ಮೌನ ಕಡಿಮೆಯಾಗಿದೆ. ಆದರೆ ಅದು ಬಿಜೆಪಿ ಅಬ್ಬರವನ್ನು ಮೀರಿಸುವ ಮಟ್ಟಿಗೆ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಯಾವುದೇ ಪಕ್ಷದ ಕಡೆ ಇಲ್ಲದ ತಟಸ್ಥ ಮತದಾರರ ಒಲವು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಎಂಇಪಿಯ ಮಕ್ಸೂದ್ ಅಹಮ್ಮದ್, ಬಿಎಸ್‌ಪಿಯ ಉದಯ ಕುಮಾರ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

**

ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಮತ ಬ್ಯಾಂಕ್ ಇದೆ. ಒಂದು ವರ್ಗ ಆ ಪಕ್ಷವನ್ನೇ ಬೆಂಬಲಿಸುತ್ತದೆ 

– ದಯಾನಂದ, ಮುಟ್ಲುಪಾಡಿ

ಶಾಸಕ ಸುನಿಲ್ ಕುಮಾರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಸಿಗಡಿ ಕೆರೆ ಅಭಿವೃದ್ಧಿ ಮಾಡುವ ಮೂಲಕ ಜನರ ಬೇಡಿಕೆಗೆ ಸ್ಪಂದಿಸಿದ್ದಾರೆ. ಕಚೇರಿಯಲ್ಲಿ ಸಿಗುವುದರಿಂದ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು

– ಸುರೇಶ್, ಅಟೊ ಚಾಲಕ ಕಾರ್ಕಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry