16–18ರ ವಯಸ್ಸಿನವರಿಗೆ ಚಾಲನೆ ಅವಕಾಶ

7
ಬ್ಯಾಟರಿಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಹಲವು ಕ್ರಮ

16–18ರ ವಯಸ್ಸಿನವರಿಗೆ ಚಾಲನೆ ಅವಕಾಶ

Published:
Updated:
16–18ರ ವಯಸ್ಸಿನವರಿಗೆ ಚಾಲನೆ ಅವಕಾಶ

ನವದೆಹಲಿ: ಬ್ಯಾಟರಿ ಚಾಲಿತ ವಾಹನಗಳ (ಇ–ವಾಹನ) ಬಳಕೆಗೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ, 16ರಿಂದ 18 ವರ್ಷದವರಿಗೆ ಬ್ಯಾಟರಿ ಚಾಲಿತ ಸ್ಕೂಟರ್‌ ಚಾಲನೆಗೆ ಅವಕಾಶ ಕೊಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಟ್ಯಾಕ್ಸಿ ನಿರ್ವಹಣಾ ಕಂಪನಿಗಳಲ್ಲಿ ನಿರ್ದಿಷ್ಟ ಪ್ರಮಾಣದ ಬ್ಯಾಟರಿ ಚಾಲಿತ ವಾಹನಗಳು ಇರಬೇಕು ಎಂಬ ಬಗ್ಗೆಯೂ ನಿಯಮ ರೂಪಿಸುವ ಸಾಧ್ಯತೆ ಇದೆ.

ಇ–ವಾಹನಗಳಿಗೆ ಹಸಿರು ನೋಂದಣಿ ಫಲಕ (ನಂಬರ್‌ ಪ್ಲೇಟ್‌) ನೀಡಲು ಸರ್ಕಾರ ಒಪ್ಪಿಗೆ ಕೊಟ್ಟಿದೆ. ಹಸಿರು ಫಲಕದಲ್ಲಿ ನೋಂದಣಿ ಸಂಖ್ಯೆಯು ಬಿಳಿ ಬಣ್ಣದಲ್ಲಿರುತ್ತದೆ. ವಾಣಿಜ್ಯ ಇ–ವಾಹನಗಳ ನೋಂದಣಿ ಸಂಖ್ಯೆ ಹಳದಿ ಬಣ್ಣದಲ್ಲಿರಲಿದೆ. ವಾರದೊಳಗೆ ಈ ಬಗ್ಗೆ ಅಧಿಸೂಚನೆ ಪ್ರಕಟವಾಗಲಿದೆ.

ಬ್ಯಾಟರಿ ಚಾಲಿತ ವಾಹನಗಳಿಗೆ ಪರವಾನಗಿಯಿಂದ ವಿನಾಯಿತಿ ನೀಡುವ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ.

‘‍ನಿರ್ಬಂಧಿತ ಪರವಾನಗಿ ವ್ಯವಸ್ಥೆಯು ಬಹುದೊಡ್ಡ ತೊಡಕಾಗಿದೆ. ಹಾಗಾಗಿ ಪರವಾನಗಿ ವಿನಾಯಿತಿಯು ಸಾರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಬಹುದು. ಇ–ರಿಕ್ಷಾಗಳ ಪ್ರಮಾಣದಲ್ಲಿ ಭಾರಿ ಏರಿಕೆಗೆ ಪರವಾನಗಿ ವಿನಾಯಿತಿಯೇ ಮುಖ್ಯ ಕಾರಣ. ಇದನ್ನು ಇ–ಬಸ್‌ಗಳು, ಇ–ಟ್ಯಾಕ್ಸಿಗಳು, ಇ–ಆಟೊಗಳು ಮತ್ತು ಇ–ಬೈಕ್‌ಗಳಿಗೆ ವಿಸ್ತರಿಸುವ ಪ್ರಸ್ತಾವ ಇದೆ’ ಎಂದು ಗಡ್ಕರಿ ತಿಳಿಸಿದ್ದಾರೆ.

ಇ–ಬೈಕ್‌ಗಳಿಗೆ ವಿನಾಯಿತಿ ನೀಡುವುದು ಸಾರಿಗೆ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಟ್ಯಾಕ್ಸಿ ನಿರ್ವಹಣಾ ಕಂಪನಿಗಳು 2020ರಿಂದ ಪ್ರತಿ ವರ್ಷ ತಮ್ಮ ವಾಹನಗಳಲ್ಲಿ ಇ–ವಾಹನಗಳ ಪ್ರಮಾಣವನ್ನು ಕನಿಷ್ಠ ಶೇ 1ರಷ್ಟು ಹೆಚ್ಚಿಸಬೇಕು. ಹಾಗೆಯೇ, ಸಾರ್ವಜನಿಕ ಸಾರಿಗೆ ಸಂಸ್ಥೆಗಳೂ ಇದನ್ನು ಅನುರಿಸಬೇಕು ಎಂಬ ನಿಯಮ ರೂಪಿಸುವ ಬಗ್ಗೆ ಕೇಂದ್ರ ಉತ್ಸುಕವಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ವಾಣಿಜ್ಯ ಅವಕಾಶ

16–18 ವರ್ಷದವರಿಗೆ ಇ–ಸ್ಕೂಟರ್‌ ಚಾಲನೆಗೆ ಅವಕಾಶ ಕೊಟ್ಟರೆ ಇಂತಹ ಸ್ಕೂಟರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಬಹುದು. ಮೋಟರು ವಾಹನ ಕಾಯ್ದೆ 1988ರ ಪ್ರಕಾರ, ಈ ವಯಸ್ಸಿನವರಿಗೆ 50 ಸಿ.ಸಿ.ಯೊಳಗಿನ ಸ್ಕೂಟರ್‌ ಚಾಲನೆಗೆ ಪರವಾನಗಿ ನೀಡಲು ಅವಕಾಶ ಇದೆ. ಆದರೆ, ದೇಶದಲ್ಲಿ ಈಗ ಈ ವರ್ಗದ ಸ್ಕೂಟರ್‌ಗಳು ತಯಾರಾಗುತ್ತಿಲ್ಲ.

ಬ್ಯಾಟರಿ ಜಿಎಸ್‌ಟಿ ಇಳಿಕೆ

ಬ್ಯಾಟರಿ ಚಾಲಿತ ವಾಹನಗಳಲ್ಲಿ ಬಳಸುವ ಬ್ಯಾಟರಿ ಮೇಲಿನ ಜಿಎಸ್‌ಟಿಯನ್ನು ಶೇ 12ಕ್ಕೆ ಇಳಿಸುವ ಪ್ರಸ್ತಾವವನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಣಕಾಸು ಸಚಿವಾಲಯದ ಮುಂದೆ ಇಟ್ಟಿದೆ.

ಉದ್ದೇಶ ಏನು?

* ಬ್ಯಾಟರಿ ಚಾಲಿತ ವಾಹನಗಳನ್ನು ಗುರುತಿಸಲು ಅನುಕೂಲ.

* ನಿಲುಗಡೆ ಸ್ಥಳಗಳಲ್ಲಿ ಆದ್ಯತೆ.

* ದಟ್ಟಣೆ ಪ್ರದೇಶಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿಕೆ.

* ಟೋಲ್‌ಗಳಲ್ಲಿ ರಿಯಾಯಿತಿ ಪ್ರಸ್ತಾಪ ಜಾರಿಯಾದರೆ ಗುರುತಿಸಲು ಸುಲಭ.

ಈಗ ಇರುವ ನೋಂದಣಿ ಫಲಕಗಳು

1. ಖಾಸಗಿ ವಾಹನಗಳಿಗೆ ಬಿಳಿ ಫಲಕದಲ್ಲಿ ಕಪ್ಪು ನೋಂದಣಿ ಸಂಖ್ಯೆ.

2. ವಾಣಿಜ್ಯ ವಾಹನಗಳಿಗೆ ಹಳದಿ ಫಲಕದಲ್ಲಿ ಕಪ್ಪು ನೋಂದಣಿ ಸಂಖ್ಯೆ.

3. ಬಾಡಿಗೆಗೆ ಪಡೆದುಕೊಂಡು ಓಡಿಸುವ ವಾಹನಗಳಿಗೆ ಕಪ್ಪು ಫಲಕದಲ್ಲಿ ಹಳದಿ ನೋಂದಣಿ ಸಂಖ್ಯೆ.

4. ರಾಯಭಾರ ಕಚೇರಿ, ಹೈಕಮಿಷನ್‌ ಕಚೇರಿ ವಾಹನಗಳಿಗೆ ನೀಲಿ ಫಲಕದಲ್ಲಿ ಬಿಳಿ ನೋಂದಣಿ ಸಂಖ್ಯೆ.

5. ಸೇನಾ ವಾಹನಗಳಿಗೆ ಪ್ರತ್ಯೇಕ ನೋಂದಣಿ ವ್ಯವಸ್ಥೆ ಇದೆ.

6. ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಾಹನಗಳಿಗೆ ಕೆಂಪು ನೋಂದಣಿ ಫಲಕ ಇರುತ್ತದೆ. ಅದರಲ್ಲಿ ರಾಷ್ಟ್ರ ಲಾಂಛನದ ಚಿತ್ರ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry