ಆಧಾರ್‌: ತೀರ್ಪು ಕಾಯ್ದಿರಿಸಿದ ಸಂವಿಧಾನ ಪೀಠ

7

ಆಧಾರ್‌: ತೀರ್ಪು ಕಾಯ್ದಿರಿಸಿದ ಸಂವಿಧಾನ ಪೀಠ

Published:
Updated:
ಆಧಾರ್‌: ತೀರ್ಪು ಕಾಯ್ದಿರಿಸಿದ ಸಂವಿಧಾನ ಪೀಠ

ನವದೆಹಲಿ: ಆಧಾರ್‌ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಕಾಯ್ದಿರಿಸಿದೆ.

ಪ್ರಕರಣದ ವಾದಗಳನ್ನು ಲಿಖಿತವಾಗಿ ಸಲ್ಲಿಸುವಂತೆ ವಾದಿ ಮತ್ತು ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಸೂಚಿಸಿದೆ. ನಾಲ್ಕು ತಿಂಗಳಲ್ಲಿ 38 ದಿನಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಲಾಗಿದೆ.

ಹಲವು ಹಿರಿಯ ವಕೀಲರು ಈ ಪ್ರಕರಣದಲ್ಲಿ ವಾದಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದ್ದರೆ, ಅರ್ಜಿದಾರರ ಪರವಾಗಿ ಕಪಿಲ್‌ ಸಿಬಲ್‌, ಪಿ. ಚಿದಂಬರಂ, ರಾಕೇಶ್‌ ದ್ವಿವೇದಿ, ಶ್ಯಾಮ್‌ ದಿವಾನ್‌, ಅರವಿಂದ ದಾತಾರ್‌ ಅವರಂತಹ ಹಿರಿಯ ವಕೀಲರ ದಂಡೇ ವಾದಿಸಿತ್ತು.

ಮೊಬೈಲ್‌ ಫೋನ್‌ಗೆ ಆಧಾರ್‌ ಸಂಖ್ಯೆ ಜೋಡಣೆಯ ನಿರ್ಧಾರವನ್ನು ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತ್ತು. ಮೊಬೈಲ್‌ಗೆ ಆಧಾರ್‌ ಜೋಡಣೆ ಮಾಡುವಂತೆ ಆದೇಶಿಸದಿದ್ದರೆ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತಿತ್ತು ಎಂದು ಹೇಳಿತ್ತು.

ಆದರೆ, ತನ್ನ ಆದೇಶವನ್ನು ಸರ್ಕಾರವು ತಪ್ಪಾಗಿ ವ್ಯಾಖ್ಯಾನಿಸಿದೆ ಮತ್ತು ಮೊಬೈಲ್‌ ಫೋನ್‌ಗೆ ಆಧಾರ್‌ ಜೋಡಣೆಗೆ ಇದನ್ನೊಂದು ನೆಪವಾಗಿ ಬಳಸಿದೆ ಎಂದು ನ್ಯಾಯಪೀಠ ಹೇಳಿತ್ತು.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಮತ್ತು ಇತರರು ಆಧಾರ್‌ ಯೋಜನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry