ಮಂಗಳವಾರ, ಮಾರ್ಚ್ 2, 2021
31 °C
ಆನ್‌ಲೈನ್‌ ಮಾರಾಟಗಾರರಿಗೆ ಫ್ಲಿಪ್‌ಕಾರ್ಟ್‌ ಸಿಇಒ ಕೃಷ್ಣಮೂರ್ತಿ ಭರವಸೆ

ವಹಿವಾಟಿನ ಸ್ವರೂಪ ಬದಲಾಗದು

ಪಿಟಿಐ Updated:

ಅಕ್ಷರ ಗಾತ್ರ : | |

ವಹಿವಾಟಿನ ಸ್ವರೂಪ ಬದಲಾಗದು

ನವದೆಹಲಿ: ‘ವಾಲ್‌ಮಾರ್ಟ್‌ನ ಸ್ವಾಧೀನಕ್ಕೆ ಒಳಪಡುವುದರಿಂದ ಫ್ಲಿಪ್‌ಕಾರ್ಟ್‌ನ ಕಾರ್ಯನಿರ್ವಹಣಾ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಸಂಸ್ಥೆಯ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರು ಸರಕುಗಳ ಮಾರಾಟಗಾರರಿಗೆ ಭರವಸೆ ನೀಡಿದ್ದಾರೆ.

‘ಈ ಸ್ವಾಧೀನ ಒಪ್ಪಂದ ಜಾರಿಗೆ ಬಂದ ನಂತರವೂ ಎರಡೂ ಸಂಸ್ಥೆಗಳು ತಮ್ಮ, ತಮ್ಮ ಬ್ರ್ಯಾಂಡ್‌ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳಲಿವೆ. ದೇಶದಾದ್ಯಂತ ಇರುವ ಸರಕುಗಳ ಮಾರಾಟಗಾರರ ಪಾಲಿಗೆ ಫ್ಲಿಪ್‌ಕಾರ್ಟ್‌, ಗ್ರಾಹಕರನ್ನು ತಲುಪುವ ಅಚ್ಚುಮೆಚ್ಚಿನ ಆನ್‌ಲೈನ್‌ ಮಾರಾಟ ತಾಣವಾಗಿ ಮುಂದುವರೆಯಲಿದೆ’ ಎಂದು ಅವರು ಹೇಳಿದ್ದಾರೆ.

‘ಮಾರಾಟಗಾರರ ಆನ್‌ಲೈನ್‌ ವಹಿವಾಟು ಲಾಭದಾಯಕವಾಗಲು ಸಂಸ್ಥೆ ತನ್ನೆಲ್ಲ ಗಮನ ಕೇಂದ್ರೀಕರಿಸಲಿದೆ. ತಂತ್ರಜ್ಞಾನ, ಪೂರೈಕೆ ಸರಣಿ ಮತ್ತು ವಹಿವಾಟು ಹೆಚ್ಚಳ ಉದ್ದೇಶದಿಂದ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಾಗುವುದು. ಆನ್‌ಲೈನ್‌ ಖರೀದಿ ಮಾರುಕಟ್ಟೆಗೆ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಮತ್ತು ಸರಕುಗಳ ಖರೀದಿಯಲ್ಲಿ ಅವರ ಸರಾಸರಿ ವೆಚ್ಚ ಹೆಚ್ಚಿಸಲು ಗಮನ ನೀಡಲಾಗುವುದು’ ಎಂದು ಕೃಷ್ಣಮೂರ್ತಿ ಅವರು ಮಾರಾಟಗಾರರಿಗೆ ಕಳಿಸಿದ ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.

‘ಫ್ಲಿಪ್‌ಕಾರ್ಟ್‌ನಲ್ಲಿನ ವಹಿವಾಟು, ಸರಕುಗಳ ಮಾರಾಟಗಾರರಿಗೆ ಹೆಚ್ಚು ಲಾಭದಾಯಕವಾಗುವ ರೀತಿಯಲ್ಲಿ ಇರುವುದಕ್ಕೆ  ಸಂಸ್ಥೆಯು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ವಾಲ್‌ಮಾರ್ಟ್‌ ಜತೆಯಾಗುವುದರಿಂದ ಈ ಕಾರ್ಯಕ್ಕೆ ಈಗ ಇನ್ನಷ್ಟು ತೀವ್ರತೆ ಬರಲಿದೆ. ತನ್ನ ಮಾರಾಟಗಾರರು ಹೆಚ್ಚು ಲಾಭ ಗಳಿಸಬೇಕು ಎಂಬುದೇ ಸಂಸ್ಥೆಯ ಆಶಯವಾಗಿದೆ. ಅವರಿಗೆ ಬೇಕಾದ ಎಲ್ಲ ಬಗೆಯ ಬೆಂಬಲವನ್ನು ಮುಂದುವರೆಸಲಾಗುವುದು’ ಎಂದು ಹೇಳಿದ್ದಾರೆ.

ವಾಲ್‌ಮಾರ್ಟ್‌ ನಡೆ ಮೇಲೆ ಗಮನ: ‘ಫ್ಲಿಪ್‌ಕಾರ್ಟ್‌ನ ವಹಿವಾಟಿನ ಮೇಲೆ ವಾಲ್‌ಮಾರ್ಟ್‌ ಯಾವ ಬಗೆಯಲ್ಲಿ ನಿಯಂತ್ರಣ ಸಾಧಿಸಲಿದೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ’ ಎಂದು ಅಖಿಲ ಭಾರತ ಆನ್‌ಲೈನ್‌ ಮಾರಾಟಗಾರರ ಸಂಘದ (ಎಐಒವಿಎ) ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಸ್ವಾಧೀನಕ್ಕೆ ಸಂಬಂಧಿಸಿದಂತೆ ತಿಂಗಳುಗಳ ಕಾಲ ನಡೆದ ಮಾತುಕತೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂಬುದು ಆನ್‌ಲೈನ್‌ ಮಾರಾಟಗಾರರ ಆರೋಪವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.