ಕವಿತೆಗಳಿಗಾಗಿ ಇಲ್ಲಿ ಸಂಪರ್ಕಿಸಿ

7

ಕವಿತೆಗಳಿಗಾಗಿ ಇಲ್ಲಿ ಸಂಪರ್ಕಿಸಿ

Published:
Updated:
ಕವಿತೆಗಳಿಗಾಗಿ ಇಲ್ಲಿ ಸಂಪರ್ಕಿಸಿ

ಸುಡಾನ್‌ನ ಹಾರಾಡೋ ಹದ್ದುಗಳ ಕಣ್ಣಂಚಲ್ಲಿ ತೆವಳುವ ಒಣ ಮಾಂಸದ ನರಗಳಲ್ಲಿ

ಗಡಿಗಳಲಿ ಗ್ರೀಸು, ಆಯಿಲ್ಲುಗಳ ಹಾಕಿ ತಿಕ್ಕಿ ತೊಳೆದ,

ಗುಬ್ಬಿ ಗೂಡು ಕಟ್ಟದ ಬಂದೂಕಿನ

ನಳಿಕೆಯ ಒಳಗೆ ಸಾಯುವವನ ಹೆಸರು ಹೊತ್ತ ಗುಂಡಿನತ್ತ...

ಕವಿತೆ ಒಂದೇ ಕಾಲಲಿ ನಿಂತಿದೆ!

ಬೆತ್ತಲೆದೆಗಳಲಿ

ಕೈಯಿಕ್ಕೋ ಹುನ್ನಾರದ,

ಸಿಕ್ಕ ಕ್ಷಣವೇ ಸ್ಖಲಿಸಿಬಿಡೋ

ಕ್ಲುಪ್ತ ಮನಸುಗಳ ಮರುಭೂಮಿಯಲ್ಲಿ...

ಕತ್ತಲ ಖೋಲಿಗೆ ದೂರ್ವಾಸ, ದ್ರೋಣರ ದೂಡಿ

ಧರ್ಮದ ಸಾಬೂನು ಉಜ್ಜುವ

ನೂರಾರು ಮೈ ಮನಸುಗಳಲ್ಲಿ

ಸತ್ತ ಕವಿತೆ ಸಿಕ್ಕೀತೋ...ಏನೋ!

ಸಂತೆಯಂಥಾ ಜಗವಿದು

ಕಳ್ಳರೇ ಪ್ರತಿಷ್ಠಾಪಿಸಿ

ಕೈಚಳಕ- ಕರಾಮತ್ತುಗಳ ದಿಖಾಯಿಸುತ್ತಿದ್ದಾರೆ;

ಕವಿತೆ ಅಲ್ಲಿ ಮೂಲೆಗುಂಪು!

ಹರಿವ ನೀರೂ ಜೀವಗಳ- ಹೆಣಗಳ ಜೊತೆ ಜೊತೆಗೊಯ್ಯುತಿದೆ;

ಹೂ ಮುಳ್ಳಿನಂತೆ

ಗಡಿಗಳ ದಾಟದ ಮನುಜ ಅಖಂಡತೆಯ ಮನೆಪಾಠ ಮಾಡಿ

ಮನೆಗೆ ಕಾಂಪೌಂಡ್ ಕಟ್ಟಿ

ಕನ್ನಡಕ ಧರಿಸಿದ್ದಾನೆ...

ಕವಿತೆ ಹಗ್ಗ ಹುಡುಕುತ್ತಿದೆ!

ನಗು ಅಳು ಹಣ ಅಹಂಕಾರ

ಗುರು- ಗುರಿ

ಕಡಲ ಹಡಗುಗಳು ದಡಕಾಗಿ ಚಡಪಡಿಸುತಿವೆ;

ಕವಿತೆ ದೂರದ ಮಾತು!

ತೀರಾ ಅನಿವಾರ್ಯವಾದಲ್ಲಿ

ಕವಿತೆಗಾಗಿ ಇಲ್ಲಿ ಸಂಪರ್ಕಿಸಿ;

ಮನುಷ್ಯರಲ್ಲಿ ಹೊರತುಪಡಿಸಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry