ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಜಿ ಮುಕ್ತ ನೀತಿ’ ಜಾರಿಗೆ ಎಎಫ್ಐ ನಿರ್ಧಾರ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಉದ್ದೀಪನಾ ಮದ್ದು ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ‘ಸೂಜಿ ಮುಕ್ತ ನೀತಿ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.

ಈ ನಿಯಮದ ಪ್ರಕಾರ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ತರಬೇತಿ ಕೇಂದ್ರಗಳಲ್ಲಿ ಅಥ್ಲೀಟ್‌ಗಳು ಯಾವುದೇ ಬಗೆಯ ಸಿರಿಂಜ್‌ಗಳನ್ನು ಬಳಸುವಂತಿಲ್ಲ.

ಹೋದ ತಿಂಗಳು ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆ ಭಾರತದ ಅಥ್ಲೀಟ್‌ಗಳು ತಂಗಿದ್ದ ಕ್ರೀಡಾಗ್ರಾಮದ ಕೊಠಡಿಯಲ್ಲಿ ಸಿರಿಂಜ್‌ಗಳು ಪತ್ತೆಯಾಗಿದ್ದವು. ಹೀಗಾಗಿ ಆಯೋಜಕರು 20 ಕಿಲೊಮೀಟರ್ಸ್‌ ನಡಿಗೆ ಸ್ಪರ್ಧಿ ಕೆ.ಟಿ. ಇರ್ಫಾನ್‌ ಮತ್ತು ಟ್ರಿಪಲ್‌ ಜಂಪ್ ಸ್ಪರ್ಧಿ ರಾಕೇಶ್‌ ಬಾಬು ಅವರಿಗೆ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ಭಾರತಕ್ಕೆ ಮುಖಭಂಗವಾಗಿತ್ತು.

‘ಉದ್ದೀಪನಾ ಮದ್ದು ಸೇವನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿಯಮನ್ನು ಜಾರಿಗೆ ತಂದಿದ್ದೇವೆ. ಸೂಜಿಮುಕ್ತ ನೀತಿಯನ್ನು ಅನುಷ್ಠಾನಗೊಳಿಸಿದ ವಿಶ್ವದ ಮೊದಲ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂಬ ಹಿರಿಮೆ ನಮ್ಮದಾಗಿದೆ. ಈ ನಿಯಮದ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌) ಪತ್ರದ ಮುಖೇನ ಮಾಹಿತಿ ನೀಡಿದ್ದೇವೆ’ ಎಂದು ಎಎಫ್ಐ ಅಧ್ಯಕ್ಷ ಆದಿಲ್‌ ಸುಮರಿವಾಲಾ ತಿಳಿಸಿದ್ದಾರೆ.

‘ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಸಲುವಾಗಿ ಮುಖ್ಯ ಕೋಚ್‌ ಬಹದ್ದೂರ್‌ ಸಿಂಗ್ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿ ರಚಿಸಲಾಗಿದೆ. ಸಹಾಯಕ ಕೋಚ್‌ ರಾಧಾಕೃಷ್ಣನ್‌ ನಾಯರ್‌ ಮತ್ತು ಜೂನಿಯರ್‌ ಅಥ್ಲೆಟಿಕ್ಸ್‌ ತಂಡದ ಕೋಚ್‌ ಸಂಜಯ್‌ ಗಾರ್‌ನಾಯಕ್‌ ಅವರೂ ಸಮಿತಿಯಲ್ಲಿದ್ದಾರೆ. ಈ ಸಮಿತಿ, ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ಅಥ್ಲೀಟ್‌ಗಳ ಕೊಠಡಿಗಳನ್ನು ಪರಿಶೀಲಿಸಿ ಎಎಫ್‌ಐಗೆ ವರದಿ ನೀಡಲಿದೆ’ ಎಂದಿದ್ದಾರೆ.

‘ಹೊಸ ನಿಯಮದ ಬಗ್ಗೆ ಕೋಚ್‌ಗಳು ಅಥ್ಲೀಟ್‌ಗಳಿಗೆ ಮಾಹಿತಿ ನೀಡಲಿದ್ದಾರೆ. ನಿಯಮ ಉಲ್ಲಂಘಿಸಿದ ಅಥ್ಲೀಟ್‌ಗಳ ವಿರುದ್ಧ ಎಎಫ್‌ಐ ಶಿಸ್ತು ಸಮಿತಿ ಕಠಿಣ ಕ್ರಮ ಕೈಗೊಳ್ಳಲಿದೆ. ಅಥ್ಲೀಟ್‌ಗಳು ಕೊಠಡಿಗಳಲ್ಲಿ ಸಿರಿಂಜ್‌ ಇಟ್ಟುಕೊಳ್ಳುವುದು ಅಪರಾಧ. ಅನಾರೋಗ್ಯದ ಸಮಯದಲ್ಲಿ ಚುಚ್ಚುಮದ್ದು ತೆಗೆದುಕೊಳ್ಳಬೇಕಾದರೆ ವೈದ್ಯರು ಬರೆದುಕೊಟ್ಟಿರುವ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT