ಶನಿವಾರ, ಮಾರ್ಚ್ 6, 2021
18 °C
ತೀರ್ಥಹಳ್ಳಿಯಲ್ಲಿ ಶೇ 84.29, ಶಿವಮೊಗ್ಗ ನಗರದಲ್ಲಿ ಶೇ 66.73

ಶಿವಮೊಗ್ಗ: ಶೇ 77.89 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶೇ 77.89 ಮತದಾನ

ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಶೇ 77.89ರಷ್ಟು ಮತದಾನವಾಗಿದೆ. 2013ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ 4ರಷ್ಟು ಅಧಿಕ ಮತದಾನವಾಗಿದೆ.

ತೀರ್ಥಹಳ್ಳಿಯಲ್ಲಿ ಈ ಬಾರಿ ಗರಿಷ್ಠ ಮತದಾನ ನಡೆದಿದ್ದು, ಒಟ್ಟಾರೆ 84.29 ಹಾಗೂ ಶಿವಮೊಗ್ಗ ನಗರ ಕನಿಷ್ಠ ಮತದಾನ (ಶೇ 66.73)ವಾಗಿದೆ. ಉಳಿದಂತೆ ಭದ್ರಾವತಿಯಲ್ಲಿ ಶೇ 73.01, ಶಿವಮೊಗ್ಗ ಗ್ರಾಮಾಂತರ 81.09, ಶಿಕಾರಿಪುರದಲ್ಲಿ ಶೇ 81.45, ಸೊರಬ ಶೇ 84.14 ಹಾಗೂ ಸಾಗರದಲ್ಲಿ ಶೇ 78.92 ಮತದಾನವಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೈಗೊಂಡ ಮತದಾರರ ಜಾಗೃತಿ ಕಾರ್ಯಕ್ರಮಗಳ ಪರಿಣಾಮ ಮತದಾನ ಪ್ರಮಾಣ ಹೆಚ್ಚಾಗಿದೆ.

ಬಿಸಿಲು ಲೆಕ್ಕಿಸದೇ ಮತದಾನ: ಎಲ್ಲ ವಿಧಾನಸಭಾ ಕ್ಷೇತ್ರಗಲಲ್ಲೂ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯ ಮತದಾರರು ಬಿಸಿಲು ಲೆಕ್ಕಿಸದೇ ಬೆಳಿಗ್ಗೆಯಿಂದಲೇ ಮತದಾನ ಕೇಂದ್ರಗಳತ್ತ ಧಾವಿಸಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಬಹುತೇಕ ಮತದಾರರು ಬಿಸಿಲು ನೆತ್ತಿ ಸುಡುವ ಮುನ್ನವೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆ ಕೇಂದ್ರಗಳಿಗೆ ಧಾವಿಸಿದ ಮತದಾರರು ನೆರಳಿಗಾಗಿ ಪರದಾಡಿದರು. ಬಿಸಿಲಿಗೆ ಬಸವಳಿದ ಮತದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರ ಹಾಗೂ ತೀರ್ಥಹಳ್ಳಿಯಲ್ಲಿ ಬೆಳಿಗ್ಗೆ 9ಕ್ಕೆ ಶೇ 11ರಷ್ಟು ಮತದಾನ ನಡೆಯಿತು. ಸಾಗರದಲ್ಲಿ ಶೇ10 ರಷ್ಟು, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ, ಶಿಕಾರಿಪುರದಲ್ಲಿ ಸರಾಸರಿ ಶೇ 8.50 ಮತದಾನ ನಡೆಯಿತು. ಬೆಳಗಿನ ಕೆಲಸ ಕಾರ್ಯ ಮುಗಿಸಿ ಬಂದ ಮತದಾರರು ತಂಡೋಪತಂಡವಾಗಿ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು. ಪರಿಣಾಮ ಬೆಳಿಗ್ಗೆ 11ರ ಹೊತ್ತಿಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶೇ 22.26, ಭದ್ರಾವತಿ ಶೇ 22.12, ಶಿವಮೊಗ್ಗ ನಗರದಲ್ಲಿ ಶೇ 24.44, ತೀರ್ಥಹಳ್ಳಿ ಶೇ 29.05, ಶಿಕಾರಿಪುರ ಶೇ 24.08, ಸೊರಬ ಶೇ 25.80 ಹಾಗೂ ಸಾಗರ ಶೇ 26.75 ರಷ್ಟು ಮತದಾನ ನಡೆಯಿತು.

ಮಧ್ಯಾಹ್ನ 1ರ ವೇಳೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಶೇ 60 ರಷ್ಟು ಮತದಾನ ನಡೆಯಿತು. ಮತದಾನ ಮುಗಿಯುವ ಒಂದು ತಾಸು ಮುಂಚೆ ಸಂಜೆ 5ರ ವೇಳೆಗೆ ಶಿವಮೊಗ್ಗ ಗ್ರಾಮಾಂತ ರದಲ್ಲಿ ಶೇ 74.80, ಭದ್ರಾವತಿ ಶೇ 68.01, ಶಿವಮೊಗ್ಗ ನಗರದಲ್ಲಿ 62.83, ತೀರ್ಥಹಳ್ಳಿಯಲ್ಲಿ 80.14, ಶಿಕಾರಿಪುರದಲ್ಲಿ ಶೇ 77.78, ಸೊರಬ ಶೇ 80.07 ಹಾಗೂ ಸಾಗರದಲ್ಲಿ ಶೇ 71.95ರಷ್ಟು ಮತದಾನ ನಡೆಯಿತು.

ಕುರುಡು ಕಾಂಚಾಣ...

ನೀತಿ ಸಂಹಿತೆಯ ಬಿಗಿ ಹಿಡಿತದ ಮಧ್ಯೆಯೂ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಣ, ಹೆಂಡದ ಹೊಳೆ ಹರಿದಿದೆ.

ವಿವಿಧ ಪಕ್ಷಗಳ ಮುಖಂಡರು ಬೂತ್‌ವಾರು ಹಣ ಹಂಚಿಕೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮತದಾರರು ಇರುವ ಬೂತ್‌ಗಳಿಗೆ ₹ 2 ಲಕ್ಷದವರೆಗೂ ಹಣ ಹಂಚಿಕೆ ಮಾಡಲಾಗಿದೆ.

ಕೆಲವು ಅಭ್ಯರ್ಥಿಗಳು ಹೆಚ್ಚಿನ ಹಣ ನೀಡಿದ್ದಾರೆ. ಕೆಲವರು ಕೇವಲ ₹ 20, 30 ಸಾವಿರ ನೀಡಿದ್ದಾರೆ. ಹಾಗಾಗಿ, ಜನರಿಗೆ ಒಂದೊಂದು ಕಡೆ ವಿಭಿನ್ನವಾಗಿ ಹಣದ ಹಂಚಿಕೆ ಮಾಡಲಾಗಿದೆ.

‘ನಮಗೆಲ್ಲ ಕೇವಲ ₹ 200 ನೀಡಿದ್ದಾರೆ. ಕೆಲವರಿಗೆ ₹ 1 ಸಾವಿರ ಸಿಕ್ಕಿದೆ’ ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಳ್ಳಿಯೊಂದರ ವೃದ್ಧರೊಬ್ಬರು ಅಸಮಾಧಾನ ತೋಡಿಕೊಂಡರು.

ಕೆಲವು ಭಾಗಗಳಲ್ಲಿ ಅಗ್ಗದ ದರದ ಮದ್ಯ ವಿತರಿಸಿರುವುದರ ಬಗ್ಗೆಯೂ ಜನರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.