ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡ ವಿರುದ್ಧ ಸೇಡು ತೀರಿಸಿಕೊಂಡರೇ ವಾಲಾ?

Last Updated 17 ಮೇ 2018, 12:39 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ 1996–97ರಲ್ಲಿ ದೇಶದ ಪ್ರಧಾನಿಯಾಗಿದ್ದ ವೇಳೆ ಗುಜರಾತ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸ್ಸು ಮಾಡಿದ್ದರು. ಅದರಂತೆ ಗುಜರಾತ್‌ನಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು.

ಆಗ ಗುಜರಾತ್‌ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ವಜುಭಾಯಿ ವಾಲಾ, ಈ ಬೆಳವಣಿಗೆಯನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಟೀಕಿಸಿದ್ದರು.

ವಾಲಾ ಸದ್ಯ ಕರ್ನಾಟಕದ ರಾಜ್ಯಪಾಲರಾಗಿದ್ದು, ದೇವೇಗೌಡರ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರದಂತೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 78 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್‌ ಮತ್ತು 37 ಸ್ಥಾನ ಹೊಂದಿರುವ ಜೆಡಿಎಸ್‌ ಒಂದಾಗಿ ಸರ್ಕಾರ ರಚಿಸಲು ಮುಂದಾಗಿದ್ದವು.

ಹೀಗಾಗಿ ಸರ್ಕಾರ ರಚಿಸಲು ಅನುಮತಿ ಕೋರಿ ಮೂರೂ ಪಕ್ಷಗಳು ರಾಜ್ಯಪಾಲ ವಜುಭಾಯಿ ವಾಲಾ ಅವರ ಅನುಮತಿ ಕೋರಿದ್ದವು. ಮೂರೂ ಪಕ್ಷಗಳ ಮನವಿ ಸ್ವೀಕರಿಸಿದ್ದ ವಾಲಾ ಅತಿ ದೊಡ್ಡ ಪಕ್ಷ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿದ್ದರು.

ಇದನ್ನು ವಿರೋಧಿಸಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌, ‘117 ಶಾಸಕರ ಬೆಂಬಲವಿದ್ದರೂ ರಾಜ್ಯಪಾಲರು ಜೆಡಿಎಸ್‌–ಕಾಂಗ್ರೆಸ್‌ ಕಡೆಗಣಿಸಿ 104 ಶಾಸಕರನ್ನು ಹೊಂದಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಜತೆಗೆ ಬಹುಮತ ಸಾಬೀತುಪಡಿಸಲು ಸುದೀರ್ಘ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಹೀಗಾಗಿ, ರಾಜ್ಯಪಾಲರ ನಿರ್ಧಾರವನ್ನು ರದ್ದುಪಡಿಸಿ ಸರ್ಕಾರ ರಚಿಸಲು ಜೆಡಿಎಸ್‌–ಕಾಂಗ್ರೆಸ್‌ಗೆ ಆಹ್ವಾನ ನೀಡಬೇಕು’ ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ‘ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT