ಸ್ತ್ರೀ ಎಂದರೆ, ಅಷ್ಟೇ ಸಾಕೆ

7

ಸ್ತ್ರೀ ಎಂದರೆ, ಅಷ್ಟೇ ಸಾಕೆ

Published:
Updated:
ಸ್ತ್ರೀ ಎಂದರೆ, ಅಷ್ಟೇ ಸಾಕೆ

ಕೆಸರು ಗದ್ದೆಯಲ್ಲಿ ನಾಟಿ ಮಾಡವುದರಲ್ಲಿ ತಲ್ಲೀನವಾದ ಮಹಿಳೆ, ತಲೆಯ ಮೇಲೊಂದು, ಕಂಕುಳಲ್ಲೊಂದು ಬಿಂದಿಗೆ ಹೊತ್ತು ಮಗುವಿನ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ತಾಯಿ, ಮಗುವನ್ನು ಶಾಲೆಗೆ ಕಳುಹಿಸಲು ಅಣಿಯಾಗುತ್ತಿರುವ ಅಮ್ಮ, ಮಗಳಿಗಾಗಿ ಶಾಪಿಂಗ್‌ ಮಾಡುತ್ತಿರುವ ತಾಯಿ, ಲಗುಬಗೆಯಿಂದ ಅಡುಗೆಯಲ್ಲಿ ನಿರತ ಮಹಿಳೆ... ಹೀಗೆ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುವುದರಿಂದ, ತುತ್ತು ತಿನಿಸುವವರೆಗೆ ಮಹಿಳೆಯ ವಿವಿಧ ಭಾವಭಂಗಿಗಳನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ ‘ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎನ್ನುವ ಜಿ.ಎಸ್‌.ಶಿವರುದ್ರಪ್ಪ ಅವರ ಹಾಡನ್ನು ನೆನಪಿಸುವಂತಿದೆ ಮ್ಯಾಗ್ನಿಟ್ಯೂಡ್‌ ಗ್ಯಾಲರಿಯಲ್ಲಿ ನಡೆಯುತ್ತಿರುವ ‘ವರ್ಲ್ಡ್‌ ಆಫ್‌ ವನಿತಾ’ ಚಿತ್ರಕಲಾ ಪ್ರದರ್ಶನ.

ಗ್ರಾಮೀಣ ಹಾಗೂ ನಗರ ಪ್ರದೇಶದ ವಿವಿಧ ಮಹಿಳೆಯರ ಬದುಕನ್ನು ಬಿಂಬಿಸುವ, ಮಹಿಳೆಯರ ಬಹುಮುಖಗಳಿಗೆ ಕನ್ನಡಿಯಾಗುವ ಸುಂದರ ಕಲಾಕೃತಿಗಳು ಅಕ್ರೆಲಿಕ್‌ ಬಣ್ಣಗಳಲ್ಲಿ ಮೂಡಿಬಂದಿವೆ. ‘ಟೀಮ್‌ ಮ್ಯಾಗ್ನಿಟ್ಯೂಡ್‌’ ಸ್ಟೂಡಿಯೊದ ಕಲಾವಿದರಾದ ಮಂಜುಳಾ, ವನಿಲ್‌, ಪ್ರಸಾದ್‌ ಹಾಗೂ ಚಂದಿರ್‌ ಅವರ ಕುಂಚದಲ್ಲಿ ಸ್ತ್ರೀಯ ಬಹುಮುಖಗಳು ವ್ಯಕ್ತವಾಗಿವೆ.

ಮೇ 1ರಿಂದ ಆರಂಭವಾಗಿರುವ ಈ ಪ್ರದರ್ಶನ ಮೇ 30ರವರೆಗೆ ನಡೆಯಲಿದೆ. ತಾಯಿ ಅಥವಾ ಮಹಿಳೆ ಎಂದಾಕ್ಷಣ ಸಾರ್ವತ್ರಿಕವಾಗಿ ಎಲ್ಲರ ಮನದಲ್ಲಿ ಮೂಡುವ ತಾಯಿ, ಸಹೋದರಿ, ಸ್ನೇಹಿತೆ, ಪತ್ನಿ ಈ ಬಹುಪಾತ್ರಗಳಿಗೆ ಕಲಾವಿದರು ಬಣ್ಣಗಳ ಮುಖೇನ ಜೀವ ತುಂಬಿದ್ದಾರೆ. ಇಲ್ಲಿರುವ ಪ್ರತಿ ಕಲಾಕೃತಿಯೂ  ಕಲಾರಸಿಕನಿಗೂ ಭಿನ್ನ ಗ್ರಹಿಕೆ ನೀಡುತ್ತವೆ. ಬಹುವರ್ಣಗಳ 20 ಕಲಾಕೃತಿಗಳ ಪ್ರದರ್ಶನವಿದ್ದು, ಆಸಕ್ತರಿಗೆ ಖರೀದಿಗೂ ಅವಕಾಶವಿದೆ.

‘ಟೀಮ್‌ ಮ್ಯಾಗ್ನಿಟ್ಯೂಡ್‌ ಕಲಾವಿದರ ತಂಡ ಕಳೆದ 19 ವರ್ಷಗಳ ಹಿಂದೆ ರಚನೆಯಾಗಿದೆ. ಈ ಸ್ಟುಡಿಯೊದಲ್ಲಿ ಕೆಲಸ ಮಾಡುವ ಕಲಾವಿದರು ಸಂಪೂರ್ಣವಾಗಿ ಸ್ಟುಡಿಯೊಕ್ಕಾಗಿ ತೊಡಗಿಕೊಳ್ಳುತ್ತಾರೆ. ಇಲ್ಲಿನ ಸದಸ್ಯರ ಹೊರತಾಗಿ ಬೇರಾವ ಕಲಾವಿದರ ಕಲಾಕೃತಿಗಳನ್ನು ಈ ಗ್ಯಾಲರಿಯಲ್ಲಿ ಪ್ರದರ್ಶನವಿರುವುದಿಲ್ಲ. ಭಾರತದಲ್ಲಿಯೇ ಇಂತಹ ಒಂದು ಥೀಮ್‌ ಅನ್ನು ಹುಟ್ಟು ಹಾಕಿದ ಮೊದಲ ಗ್ಯಾಲರಿ ಇದು’ ಎಂದು ಮಾಹಿತಿ ನೀಡುತ್ತಾರೆ ಗ್ಯಾಲರಿ ನಿರ್ದೇಶಕ ಎಸ್‌.ರಮೇಶ್ ಮಗರ್‌.

‘19 ವರ್ಷಗಳಲ್ಲಿ 60 ಕಲಾವಿದರು ಗ್ಯಾಲರಿಯಲ್ಲಿ ಕೆಲಸಮಾಡಿದ್ದಾರೆ. ಎಲ್ಲ ಶೈಲಿಯನ್ನು ರೂಢಿಸಿಕೊಂಡಿರುವ ಕಲಾವಿದರು ಇಲ್ಲಿದ್ದಾರೆ. ಪರಿಸರ, ಲ್ಯಾಂಡ್‌ ಸ್ಕೇಪ್‌, ಅಮೂರ್ತ, ಭಾವಚಿತ್ರ ಸೇರಿದಂತೆ ಎಲ್ಲ ಥೀಮ್‌ಗಳಲ್ಲಿಯೂ ಕಲಾಕೃತಿಗಳನ್ನು ರಚಿಸುವ ಕಲಾವಿದರ ಸಮೂಹ ಇಲ್ಲಿದೆ’ ಎನ್ನುತ್ತಾರೆ ಅವರು.

ಮಹಿಳಾ ಸಬಲೀಕರಣದ ಮಹತ್ವ ಸಾರುವ ಈ ಕಲಾಕೃತಿಗಳು ಭಾವನಾತ್ಮಕವಾಗಿ ನೋಡುಗರನ್ನು ಸೆಳೆಯುತ್ತವೆ. ಸಂತೋಷ, ದುಃಖ, ನೋವು, ನಲಿವು ಸೇರಿದಂತೆ ಅಮ್ಮನೊಂದಿಗೆ ಹಂಚಿಕೊಳ್ಳುವ ಹಲವು ಕ್ಷಣಗಳನ್ನು ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಮಗುವೊಂದು ಹುಟ್ಟಿದಾಗಿನಿಂದ ಸಾಯುವವೆರೆಗೆ ಜೀವನದ ವಿವಿಧ ಹಂತಗಳಲ್ಲಿ ಮಹಿಳೆಯರನ್ನು ಅವಲಂಬಿಸಿರುತ್ತಾರೆ. ಪ್ರತಿಯೊಬ್ಬನ ಭಾವವಲಯದಲ್ಲಿ ಸ್ತ್ರೀಯರ ಪಾತ್ರವನ್ನು ಸಾರುವಂತಿದೆ ಈ ಕಲಾಕೃತಿಗಳು.

**

‘ವರ್ಲ್ಡ್‌ ಆಫ್‌ ವನಿತಾ’ ಚಿತ್ರಕಲಾ ಪ್ರದರ್ಶನ: ಆಯೋಜನೆ–ಟೀಮ್‌ ಮ್ಯಾಗ್ನಿಟ್ಯೂಡ್‌, ಸ್ಥಳ–ಮ್ಯಾಗ್ನಿಟ್ಯೂಡ್‌ ಗ್ಯಾಲರಿ, ಜಯನಗರ 3ನೇ ಬ್ಲಾಕ್‌. ಬೆಳಿಗ್ಗೆ 10ರಿಂದ ರಾತ್ರಿ 7  ಪ್ರವೇಶ ಉಚಿತ. ಮೇ 31ರವರೆಗೆ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry