ವೈದ್ಯರ ಸಲಹೆ ಇಲ್ಲದೇ ಔಷಧಿ ನೀಡಿದರೆ ಕ್ರಮ

7
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

ವೈದ್ಯರ ಸಲಹೆ ಇಲ್ಲದೇ ಔಷಧಿ ನೀಡಿದರೆ ಕ್ರಮ

Published:
Updated:

ತುಮಕೂರು: ‘ವೈದ್ಯರ ಸಲಹಾ ಚೀಟಿ ಯಿಲ್ಲದೆ ಕ್ಷಯ ರೋಗಿಗಳಿಗೆ ಔಷಧಿ ನೀಡುವ ಔಷಧಿ ಅಂಗಡಿ (ಮೆಡಿಕಲ್ ಸ್ಟೋರ್ಸ್)ಗಳನ್ನು ಮುಚ್ಚಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರ ವಾರ ಕ್ಷಯ, ಸಾಂಕ್ರಾಮಿಕ ರೋಗ ನಿಯಂತ್ರಣ, ಡೆಂಗಿ ಮತ್ತು ಚಿಕುನ್ ಗುನ್ಯ ನಿಯಂತ್ರಣ, ತಂಬಾಕು ನಿಯಂತ್ರಣ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳು ಪ್ರತಿ ಬಾರಿ ಔಷಧಿ ಕೊಳ್ಳುವಾಗಲೂ ವೈದ್ಯರ ಸಲಹಾ ಚೀಟಿ ತೋರಿಸಿದರೆ ಮಾತ್ರ ಕೇಂದ್ರಗಳಲ್ಲಿಯೇ ಔಷಧಿ ವಿತರಿಸಬೇಕು. ಔಷಧಿ ಕೇಂದ್ರದವರು ತಾವೇ ವೈದ್ಯರಂತೆ ವರ್ತಿಸುತ್ತಿರುವುದು ಕಂಡುಬಂದಿದ್ದು, ಇಂತಹ ಔಷಧಿ ಕೇಂದ್ರಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ರಾಷ್ಟ್ರದಲ್ಲಿ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡಬೇಕಾ ಗಿರುವುದರಿಂದ ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸಹಕರಿಸಬೇಕು. ಖಾಸಗಿ ವೈದ್ಯರು ತಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳ ಮಾಹಿತಿಯನ್ನು ಪ್ರತಿ ತಿಂಗಳು ಕ್ಷಯ ರೋಗ ನಿಯಂತ್ರಣ ಕೇಂದ್ರಕ್ಕೆ ನೀಡಬೇಕು’ ಎಂದು ಸೂಚಿಸಿದರು.

‘ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ರೋಗಿಯ ಮೇಲೆ ನಿಗಾ ಇಟ್ಟಿರಬೇಕು. ಶಂಕಿತ ಕ್ಷಯ ರೋಗಿಗಳನ್ನು ಜಿಲ್ಲೆಯಲ್ಲಿರುವ ನಿಗದಿತ ಕಫ ಪರೀಕ್ಷಾ ಕೇಂದ್ರ ಮತ್ತು ಸಿಬಿನ್ಯಾಟ್ ಕೇಂದ್ರಗಳಿಗೆ ಪರೀಕ್ಷೆಗೆ ಕಳುಹಿಸಬೇಕು’ ಎಂದು ಸೂಚಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸುತ್ತಿರುವುದು ವಿಪರ್ಯಾಸ. ತಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಬೇಕು. ಈಗ ಬೇಸಿಗೆ ಕಾಲವಿರುವುದರಿಂದ ಡೆಂಗಿ ಮತ್ತು ಚಿಕುನ್‌ ಗುನ್ಯ ನಿಯಂತ್ರಣದಲ್ಲಿದೆ. ಆದರೆ ಮಳೆಗಾಲ ಪ್ರಾರಂಭಿಸುವುದಕ್ಕೆ ಮುನ್ನ ಆರೋಗ್ಯ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಹಕರಿಸದಿದ್ದರೆ ಕ್ರಮ: ’ತಂಬಾಕು ನಿಯಂತ್ರಣ( ಕೋಟ್ಪಾ) ಕಾಯ್ದೆಯಡಿ ದಾಳಿ ನಡೆಸಲು ಆರೋಗ್ಯ ಇಲಾ ಖೆಯೊಂದಿಗೆ ಸಂಬಂಧಪಟ್ಟ ಇಲಾಖೆ ಗಳು ಸಹಕರಿಸಬೇಕು. ಸಹಕ ರಿಸದ ಇಲಾಖೆಗಳಿಗೆ ನೋಟಿಸ್ ನೀಡ ಲಾಗುತ್ತದೆ' ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿರುವ ಎಚ್‌ಐವಿ ಸೋಂಕಿತರಲ್ಲಿ ಅರ್ಹ 7 ಜನರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಯಡಿ ಮನೆ ಮಂಜೂರು ಮಾಡಲಾ ಗುವುದು. ನಿವೇಶನ ಹೊಂದಿದ ಲೈಂಗಿಕ ಅಲ್ಪಸಂಖ್ಯಾತರಿಗೂ ವಸತಿ ಮಂಜೂರು ಮಾರುವ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ’ ಎಂದು ಅವರು ಅವರು ವಿವರಿಸಿದರು.

‘ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಬೇಕು. ತಪ್ಪದೇ ಮಹಿಳೆಯರು ಶಿಬಿರದ ಪ್ರಯೋಜನ ಪಡೆಯಬೇಕು.ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರನ್ನು ಬಳಸಿಕೊಂಡರೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ತಪಾಸಣೆಗೆ ಮುಂದಾಗುತ್ತಾರೆ’ ಎಂದು ಹೇಳಿದರು.

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಪರುಷೊತ್ತಮ್ ಮಾತನಾಡಿ, ‘ಜಿಲ್ಲೆಯಲ್ಲಿ 2008ರಿಂದ ಈವ ರೆಗೂ 4089 ಪ್ರಕರಣಗಳನ್ನು ದಾಖಲಿಸಿಕೊಂಡು ₹ 5,34,400 ದಂಡ ವಸೂಲಿ ಮಾಡಲಾಗಿದೆ. ಏಪ್ರಿಲ್ 2017ರಿಂದ 2018 ಮಾರ್ಚ್ ಅಂತ್ಯದವರೆಗೂ 66 ದಾಳಿ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ವಿ. ರಂಗಸ್ವಾಮಿ ಮಾತನಾಡಿ, ‘ಪ್ರಸವ ಪೂರ್ವ ಗರ್ಭನಿರ್ಧರಣಾ ಕಾಯ್ದೆಯಡಿ(ಪಿಸಿ ಅ್ಯಂಡ್ ಪಿ.ಎನ್‌.ಡಿ.ಟಿ) ನೋಂದಾಯಿಸಿಕೊಂಡಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಕೆಪಿಎಂ ಇಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಹಿರಿಯ ಪಾರಂಪರಿಕ ವೈದ್ಯರಿಗೆ ಕೆಪಿಎಂಇ ಡಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾ ಧಿಕಾರಿ ಡಾ.ಸನತ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿ ನಾಥ್, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ, ಪಾಲಿಕೆ ಆಯುಕ್ತ ಕೆ.ಮಂಜುನಾಥಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಪಾವಗಡದ ಜಪಾನಂದ ಸ್ವಾಮೀಜಿ, ಡಾ. ಪ್ರಶಾಂತ್, ಡಾ. ಕೇಶವರಾಜ್, ಶ್ರೀದೇವಿ, ಸಿದ್ಧಾರ್ಥ ವೈದ್ಯ ಕೀಯ  ಕಾಲೇಜು ಪ್ರತಿನಿಧಿಗಳು ಇದ್ದರು.

ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸಿ

‘ಜಿಲ್ಲೆಯಲ್ಲಿರುವ ನಕಲಿ ವೈದ್ಯರ ವಿರುದ್ಧ ಜಿಲ್ಲಾ ಮಟ್ಟದ ವಿಶೇಷ ಪಡೆಯನ್ನು ರಚನೆ ಮಾಡಲಾಗುವುದು. ಆಯಾ ತಾಲ್ಲೂಕು ತಹಶೀಲ್ದಾರರನ್ನೊಳಗೊಂಡ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡ ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಸೋಲಾರ್ ಪಾರ್ಕ್ ಪ್ರದೇಶದಲ್ಲೇ 155 ಮಲೇರಿಯಾ ಪ್ರಕರಣ

‘ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ನಿರ್ಮಾವಾಗುತ್ತಿರುವ ಸೋಲಾರ್ ಪಾರ್ಕ ಸುತ್ತಮುತ್ತಲಿನ ಪ್ರದೇಶದಲ್ಲಿ 2017 ರಿಂದ ಈವರೆಗೆ 155 ಮಲೇರಿಯಾ ಪ್ರಕರಣಗಳು ವರದಿಯಾಗಿರುವುದು ಕಳವಳಕಾರಿ ಸಂಗತಿ.ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಆದೇಶಿಸಿದರು.

‘ಜಿಲ್ಲೆಯಲ್ಲಿ 2020ರ ವೇಳೆಗೆ ಶೂನ್ಯ ಮಲೇರಿಯಾ ಪ್ರಕರಣ ಸಾಧಿಸುವ ಗುರಿ ಹೊಂದಿರುವುದರಿಂದ ಸಮರೋಪಾದಿಯಲ್ಲಿ ನಿಯಂತ್ರಣ ಕಾರ್ಯಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಸೋಲಾರ್ ಪಾರ್ಕಿನಲ್ಲಿ ದುಡಿಯಲು ವಲಸೆ ಬಂದ ಕಾರ್ಮಿಕರನ್ನು ತಕ್ಷಣವೇ ಆರೋಗ್ಯ ತಪಾಸಣೆಗೊಳಪಡಿಸಬೇಕು. ಆರೋಗ್ಯ ಚೀಟಿ (ಹೆಲ್ತ್ ಕಾರ್ಡ್) ನೀಡಬೇಕು. ವಲಸೆ ಕಾರ್ಮಿಕರಿಗೆ ವ್ಯವಸ್ಥಿತ ಮೂಲಸೌಕರ್ಯ, ಶುದ್ಧ ಕುಡಿಯುವ ನೀರು, ವಾಸಿಸಲು ಮನೆ, ಆರೋಗ್ಯ ಸೌಲಭ್ಯ, ತುರ್ತು ಚಿಕಿತ್ಸಾ ವಾಹನ ಒದಗಿಸುವುದು ಸೋಲಾರ್ ಪಾರ್ಕ್ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದರು. ಇನ್ನು 10 ದಿನಗಳೊಳಗಾಗಿ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry