ಬಿಕೋ ಎನ್ನುವ ದೊಡ್ಡ ಅಂಗಡಿ ಬೀದಿ!

7
ಜನರ ಮುಗಿಯದ ಬವಣೆ: ಸ್ವಲ್ಪ ಆಯ ತಪ್ಪಿ ಬಿದ್ದರೂ ಜೀವಕ್ಕೆ ಅಪಾಯ

ಬಿಕೋ ಎನ್ನುವ ದೊಡ್ಡ ಅಂಗಡಿ ಬೀದಿ!

Published:
Updated:
ಬಿಕೋ ಎನ್ನುವ ದೊಡ್ಡ ಅಂಗಡಿ ಬೀದಿ!

ಚಾಮರಾಜನಗರ: ನಗರದ ವ್ಯಾಪಾರ ಚಟುವಟಿಕೆಯ ಬಹುದೊಡ್ಡ ಬೀದಿ ಎನಿಸಿದ ದೊಡ್ಡ ಅಂಗಡಿ ಬೀದಿಯಲ್ಲಿ ಈಗ ಮೊದಲಿನಷ್ಟು ಜನವಿಲ್ಲ. ಅಂಗಡಿಗಳೆಲ್ಲವೂ ಬಣಗುಡುತ್ತಿವೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಈ ಬೀದಿಯಲ್ಲಿ ಜನರ ಓಡಾಟ ಕಡಿಮೆಯಾಗಿದೆ. ಎಲ್ಲಿ ನೋಡಿದರಲ್ಲಿ ಖರೀದಿದಾರರಿಲ್ಲದ ಅಂಗಡಿಗಳೇ ಕಣ್ಣಿಗೆ ಬೀಳುತ್ತಿವೆ.

ಹೌದು. ಕಳೆದ ಒಂದು ವರ್ಷದಿಂದ ಇಲ್ಲಿ ರಸ್ತೆ ವಿಸ್ತರಣೆಗಾಗಿ ಅಂಗಡಿಗಳನ್ನು ಒಡೆಯಲಾಯಿತು. ಇದು ಜನರ ಆಕ್ರೋಶಕ್ಕೂ ಕಾರಣವಾಯಿತು. ಹಲವು ಮಂದಿ ಈಗಾಗಲೇ ನ್ಯಾಯಾಲಯದಲ್ಲಿ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿದ್ದಾರೆ.

ರಸ್ತೆಯನ್ನು ಮನಸ್ಸಿಗೆ ಬಂದಂತೆ ಅಗೆದು ಹಾಗೆಯೇ ಬಿಡಲಾಗಿದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಜನರು ಹೈರಣಾಗಿದ್ದಾರೆ. ರಸ್ತೆಯಲ್ಲಿ ವಾಹನ ಓಡಿಸುವ ಮಾತಿರಲಿ ನಡೆದಾಡುವುದೂ ಅಪಾಯ ಎನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಹೆಚ್ಚಾಗಿ ಇಲ್ಲಿಗೆ ಖರೀದಿಗೆ ಬರುತ್ತಿಲ್ಲ.

ರಸ್ತೆಯ ಎರಡೂ ಬದಿಯಲ್ಲೂ ರಸ್ತೆಯಿಂದ ಸುಮಾರು 4ರಿಂದ 5 ಅಡಿ ಎತ್ತರಕ್ಕೆ ಚರಂಡಿ ನಿರ್ಮಿಸಲಾಗಿದೆ. ಇದು ಜನರು ನಡೆದಾಡಲು ತೊಂದರೆ ಎನಿಸಿದೆ. ವೃದ್ದರು, ಮಹಿಳೆಯರು, ಮಕ್ಕಳಂತೂ ಇಲ್ಲಿ ನಡೆದಾಡಲು ಆಗದಂತಹ ಸ್ಥಿತಿ ಇದೆ.

ಮ್ಯಾನ್‌ಹೋಲ್‌ ಒಂದು ಇಲ್ಲಿ ಬಾಯ್ತೆರೆದು ಕುಳಿತಿದೆ. ರಾತ್ರಿ ವೇಳೆ ಮಾತ್ರವಲ್ಲ ಹಗಲಿನ ವೇಳೆಯೂ ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಾತ್ರಿ ವಿದ್ಯುತ್ ಹೋದಾಗ ಅಥವಾ ಮಳೆ ಬಂದಾಗ ಇಲ್ಲಿ ಅವಘಡ ಸಂಭವಿಸುವುದು ನಿಶ್ಚಿತ ಎನ್ನುವಂತಾಗಿದೆ. ‌‌

ಮತ್ತೊಂದು ಮ್ಯಾನ್‌ಹೋಲ್‌ ಅಂತೂ ರಸ್ತೆ ಮಧ್ಯೆ ತಲೆ ಎತ್ತಿದೆ. ರಾತ್ರಿ ವೇಳೆ ವಿದ್ಯುತ್ ಇಲ್ಲದಾಗ ದ್ವಿಚಕ್ರ ವಾಹನ ಸವಾರರು ಇಲ್ಲಿಗೆ ಡಿಕ್ಕಿ ಹೊಡೆದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.‌

ಸಣ್ಣಮಳೆಗೆ ತುಂಬುವ ಬೀದಿ!‌

ಈ ಮೊದಲು ಎಷ್ಟೇ ಭಾರಿ ಮಳೆ ಬಿದ್ದರೂ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ, ಈಗ ಮೊದಲಿಗಿಂತ ದೊಡ್ಡ ಮೋರಿ ನಿರ್ಮಿಸಿದ್ದರೂ ದೊಡ್ಡ ಅಂಗಡಿ ಬೀದಿಯಲ್ಲಿ ನೀರು ಜಲಾಶಯದಂತೆ ತುಂಬುತ್ತದೆ. ಕೆಲವೊಮ್ಮೆ ಮಂಡಿಯುದ್ದದ ನೀರನ್ನು ಹಾದುಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಮಳೆ ನಿಂತ ಮೇಲೆ 2–3 ದಿನಗಳು ಕಳೆದರೂ ಮೊಣಕಾಲುದ್ದದ ನೀರು ಇಲ್ಲಿರುತ್ತದೆ. ಇಲ್ಲಿ ನಡೆಯಲು ಸಾಧ್ಯವೇ ಆಗದಂತ ಸ್ಥಿತಿ ಇರುತ್ತದೆ.

ಕುಸಿದ ವ್ಯಾಪಾರ; ನಷ್ಟದಲ್ಲಿ ಅಂಗಡ ಮಾಲೀಕರು:

ಸಮಸ್ಯೆ ಏನಾದರೂ ಇರಲಿ, ಕನಿಷ್ಠ ಜನರು ಓಡಾಡುವಂತಹ ಸ್ಥಿತಿಯನ್ನಾದರೂ ನಿರ್ಮಾಣ ಮಾಡಲು ನಗರಸಭೆಗೆ ಏಕೆ ಸಾಧ್ಯವಿಲ್ಲ ಎಂದು ಅಂಗಡಿ ಮಾಲೀಕರು ಒಕ್ಕೊರಲಿನಿಂದ ಪ್ರಶ್ನಿಸುತ್ತಾರೆ. ರಸ್ತೆ ಕಾಮಗಾರಿಯನ್ನು ಅವರು ಯಾವಾಗ ಬೇಕಾದರೂ ಕೈಗೊಳ್ಳಲಿ. ಆದರೆ, ಕನಿಷ್ಠ ಜನರು ಓಡಾಡುವಂತಹ ರಸ್ತೆಯನ್ನಾದರೂ ನಿರ್ಮಿಸಿದರೆ ಜನಸಾಮಾನ್ಯರಗೆ ಅನುಕೂಲವಾಗುತ್ತಿತ್ತು ಎಂದು ವರ್ತಕ ರಾಮಸ್ವಾಮಿ ಹೇಳುತ್ತಾರೆ.

ಸಗಟು ದರದಲ್ಲಿ ವಸ್ತುಗಳನ್ನು ಖರೀದಿಸುವ ನಗರದ ಬಹುದೊಡ್ಡ ತಾಣವಾದ ಈ ಬೀದಿಯಲ್ಲಿ ಜನರು ಇದೀಗ ಖರೀದಿಸಲು ಮುಂದೆ ಬರುತ್ತಿಲ್ಲ. ರಸ್ತೆಯ ಅಧ್ವಾನ ನೋಡಿಯೇ ಅವರು ಮೈಸೂರೇ ವಾಸಿ ಎಂದು ಅನೇಕರು ಮೈಸೂರಿನತ್ತ ಮುಖಮಾಡಿದ್ದಾರೆ. ಇದರಿಂದ ಜನರಿಂದ ಕಿಕ್ಕಿರಿದಿರುತ್ತಿದ್ದ ಅಂಗಡಿ ಸಾಲುಗಳು ಇದೀಗ ಬಿಕೊ ಎನ್ನುತ್ತಿವೆ. ಸಹಜವಾಗಿಯೇ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.

ಬ್ಯಾರಿಕೇಡ್‌ಗಳೂ ಇಲ್ಲ!

ಮ್ಯಾನ್‌ಹೋಲ್‌ಗಳು ಬಾಯ್ದೆರೆದಿರುವ ಕಡೆ ಕನಿಷ್ಠ ಬ್ಯಾರಿಕೇಡ್‌ಗಳನ್ನಾದರೂ ಇಟ್ಟು ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬಹುದಿತ್ತು. ಆದರೆ, ನಗರಸಭೆಯ ಬೇಜವಾಬ್ದಾರಿತನ ಹಾಗೂ ಜಿಲ್ಲಾಡಳಿತದ ಜಾಣಕುರುಡಿನಿಂದ ಇದು ಆಗಿಲ್ಲ. ಮ್ಯಾನ್‌ಹೋಲ್ ರಸ್ತೆಮಟ್ಟಕ್ಕಿಂತ ಹೆಚ್ಚಿರುವ ಕಡೆಯಾದರೂ ಬ್ಯಾರಿಕೇಡ್‌ ಇಡಬಹುದಿತ್ತು ಎಂದು ಕೃಷ್ಣಶೆಟ್ಟಿ ಅಭಿಪ್ರಾಯಪಡುತ್ತಾರೆ. ಮಳೆ ಬಂದಾಗ ನೀರು ಸರಾಗವಾಗಿ ಹರಿದು ದೊಡ್ಡ ಮೋರಿ ಸೇರುವಂತೆ ಮಾಡಲು ಹೆಚ್ಚೇನೂ ಖರ್ಚಾಗದು. ಆದರೆ, ಜಿಲ್ಲಾಡಳಿತ ಇದರತ್ತಲೂ ಗಮನ ಹರಿಸಿಲ್ಲ ಎಂದು ಅವರು ದೂರುತ್ತಾರೆ.

**

ದೊಡ್ಡಅಂಗಡಿ ಬೀದಿಯ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ. ಸದ್ಯದಲ್ಲೇ ಇಲ್ಲಿ ಕೆಲಸ ಆರಂಭವಾಗಲಿದೆ

ಸತ್ಯಮೂರ್ತಿ, ನರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry